ಹಾಲಗಿ ಕುಡಿವ ನೀರಿನ ಯೋಜನೆ ಚುರುಕು
ಗುತ್ತಲ: ಸಮೀಪದ ಹಾಲಗಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆಯಲ್ಲಿ ಪೈಪ್‌ಲೈನ್ ಅಳವಡಿಸುವ ಕಾರ್ಯ ಎರಡು ದಿನಗಳಿಂದ ಚುರುಕುಗೊಂಡಿದ್ದು, ಜಿಪಂ ಎಂಜಿನಿಯರಿಂಗ್ ವಿಭಾಗ ಕಾಮಗಾರಿ ನಡೆಸಿದ್ದರಿಂದ ಹಾಲಗಿ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.
'ಕುಡಿಯುವ ನೀರಿಗಾಗಿ ಹಾಲಗಿ ಗ್ರಾಮಸ್ಥರ ಪರದಾಟ' ಎಂಬ ಶೀರ್ಷಿಕೆಯಡಿ ಕನ್ನಡಪ್ರಭ ಮಾ. 12ರಂದು ಪ್ರಕಟಿಸಿದ ವರದಿ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಅಧಿಕಾರಿಗಳು ಕಾಮಗಾರಿ ಆರಂಭಿಸಿದ್ದಾರೆ. ಕಳೆದ ಅನೇಕ ದಿನಗಳಿಂದ ಕುಡಿಯವ ನೀರಿಗಾಗಿ ಇಲ್ಲಿನ ಗ್ರಾಮಸ್ಥರು ಪರದಾಡುತ್ತಿದ್ದರು. ಆ ಕಾರಣಕ್ಕಾಗಿ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗವು ಹಾಲಗಿ ಗ್ರಾಮದಲ್ಲಿ ಪಬ್ಲಿಕ್ ವಾಟರ್‌ಸಪ್ಲೈ ಯೋಜನೆ ಅಡಿಯಲ್ಲಿ ಸುಮಾರು ರು. 7 ಲಕ್ಷಕ್ಕೂ ಅಧಿಕ ಮೊತ್ತದಲ್ಲಿ ಕಳೆದೆರಡು ತಿಂಗಳಿನಿಂದ ಪೈಪ್‌ಲೈನ್ ಕೆಲಸವನ್ನು ಪ್ರಾರಂಭಿಸಿತ್ತು. ಕಾರ್ಯದಲ್ಲಿ ವಿಳಂಬ ಕುರಿತು ಪತ್ರಿಕೆ ಬೆಳಕು ಚೆಲ್ಲಿತ್ತು. ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗ ಕಳೆದೆರಡು ದಿನದಿಂದ ಪೈಪ್‌ಲೈನ್ ಅಳವಡಿಸುವ ಕಾರ್ಯವನ್ನು ಚುರುಕುಗೊಳಿಸಿದೆ. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಕರಿಯಪ್ಪ ಉಂಡಿ, ಗುತ್ತಿಗೆದಾರ ಪಿ.ಎನ್. ಪಾಟೀಲ, ಶಿವನಗೌಡ ಹನುಮಂತಗೌಡ್ರ, ಗುತ್ತಿಗೆದಾರ ಭರತ್‌ಗೌಡ ಇತರರು ಇದ್ದರು.
ಧೀರೇಂದ್ರತೀರ್ಥರ ಆರಾಧನೆ: ರಥೋತ್ಸವ
ಗುತ್ತಲ: ಶ್ರೀಮಂತ ಕಲೆಯಾದ ಸಂಗೀತವನ್ನು ಕೇಳುವುದರಿಂದ ಮತ್ತು ಕಲಿಯುವುದರಿಂದ ಮನಸ್ಸಿಗೆ ಮುದ ನೀಡುವುದಲ್ಲದೆ ಆರೋಗ್ಯ ಸಂಪತ್ತಿನಿಂದ ಹಿಡಿದು ಎಲ್ಲವನ್ನು ಪಡೆಯಬಹುದಾಗಿದೆ ಎಂದು ಮಂತ್ರಾಲಯ ಶ್ರೀಗಳ ಆಪ್ತ ಕಾರ್ಯದರ್ಶಿ ಎಸ್. ರಾಜಗೋಪಾಲಚಾರ್ಯ ಅಭಿಪ್ರಾಯಪಟ್ಟರು.
ಹೊಸರಿತ್ತಿಯಲ್ಲಿ ಶ್ರೀ ಧೀರೇಂದ್ರತೀರ್ಥ ಶ್ರೀಪಾದಂಗಳವರ 229ನೇ ಆರಾಧನಾ ಮಹೋತ್ಸವದ ನಿಮಿತ್ತ ನಡೆದ ಮಧ್ಯಾರಾಧನೆ ಮಹೋತ್ಸವದ ಪ್ರಯುಕ್ತ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಮ್ಮ ಸಂಸ್ಕೃತಿಯಲ್ಲಿ ಸಂಗೀತಕ್ಕೆ ವಿಶಿಷ್ಟವಾದ ಸ್ಥಾನಮಾನವಿದೆ. ಒಂದು ವಿಶಿಷ್ಟವಾದ ಪರಂಪರೆಯಲ್ಲಿ ಬೆಳೆದು ಬಂದಿರುವ ಸಂಗೀತ ಕಲೆಯನ್ನು ಎಲ್ಲರೂ ಉಳಿಸಿ, ಬೆಳೆಸಬೇಕಾದ ಅನಿವಾರ್ಯತೆ ಇದೆ. ಸಂಗೀತ ನಮ್ಮ ಉಸಿರಾಗಿದೆ ಮತ್ತು ಹಸಿರಾಗಿದೆ ಎಂದು ಹೇಳಿದರಲ್ಲದೆ, ಆರೋಗ್ಯಕ್ಕೆ ಸಂಗೀತ ದಿವ್ಯ ಔಷಧಿಯಾಗಿದೆ ಎಂದು ಹೇಳಿದರು. ಪ್ರತಿಮಾ ಜೋಷಿ, ಕಾವ್ಯಾ ನಾಡಿಗೇರ ಅವರ ಸಂಗೀತ ಸೇವೆ ನೆರೆದಿದ್ದ ಅಪಾರ ಜನಸ್ತೋಮವನ್ನು ಮಂತ್ರಮುಗ್ಧರನ್ನಾಗಿಸಿತು. ಹಾರ್ಮೋನಿಯಂ ಸೇವೆಯನ್ನು ಗುಡ್ಡಪ್ಪ ಮರೊಳ ನಡೆಸಿಕೊಟ್ಟರು. ಭೀಮಸೇನರವರು ತಬಲಾ ಸಾಥ್ ನೀಡಿದರು.
ಕಾರ್ಯಕ್ರಮದ ನಂತರದಲ್ಲಿ ಧೀರೇಂದ್ರ ತೀರ್ಥರ ಆರಾಧನೆ ನಿಮಿತ್ತ ಹೊಸರಿತ್ತಿಯ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬೆಳ್ಳಿ ರಥೋತ್ಸವ ಸಡಗರ ಸಂಭ್ರಮದಿಂದ ನಡೆಯಿತು. ಮಹಾಬೆಳ್ಳಿ ರಥೋತ್ಸವಕ್ಕೆ ಅಪಾರ ಜನಸ್ತೋಮ ಸಾಕ್ಷಿಯಾಯಿತು.