ಹಾವೇರಿ: 4623 ಮಕ್ಕಳು ಶಾಲೆಯಿಂದ ಹೊರಗೆ!
-ನಾರಾಯಣ ಹೆಗಡೆ
ಕನ್ನಡಪ್ರಭ ವಾರ್ತೆ, ಹಾವೇರಿ, ಮಾ. 16
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗಳತ್ತ ಆಕರ್ಷಿಸಲು ಸರ್ಕಾರ ಕೊಟ್ಯಂತರ ಹಣ ವೆಚ್ಚ ಮಾಡಿ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆದರೂ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಏರುತ್ತಲೇ ಇದೆ.
ಹಾವೇರಿ ಜಿಲ್ಲೆಯೊಂದರಲ್ಲೇ 4,623 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಶಿಕ್ಷಣ ಇಲಾಖೆ ಎರಡು ಹಂತದಲ್ಲಿ ನಡೆಸಿದ ಸಮೀಕ್ಷೆಯಿಂದ ಈ ಸತ್ಯ ಬಹಿರಂಗವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರತಿಯೊಂದು ಮಗು ಕನಿಷ್ಠ ಶಿಕ್ಷಣ ಪಡೆಯಬೇಕು. ಯಾರೂ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೊಳಿಸಿದೆ. ಶಾಲೆಗಳತ್ತ ಮಕ್ಕಳನ್ನು ಸೆಳೆಯಲು ಉಚಿತ ಕಡ್ಡಾಯ ಶಿಕ್ಷಣ, ಅಕ್ಷರ ದಾಸೋಹ, ಸೈಕಲ್ ವಿತರಣೆ, ಕ್ಷೀರಭಾಗ್ಯ, ಪ್ರವಾಸ, ಉಚಿತ ಪಠ್ಯಪುಸ್ತಕ, ಶಿಷ್ಯ ವೇತನ ಹಾಗೂ ಉಚಿತ ವಸತಿ ಶಾಲೆ ಇತ್ಯಾದಿ ಸೌಲಭ್ಯಗಳನ್ನು ನೀಡುತ್ತಿದೆ. ಸಮುದಾಯದತ್ತ ಶಾಲೆ, ಚಿಣ್ಣರ ಅಂಗಳ, ಪ್ರತಿಭಾ ಕಾರಂಜಿ, ಕಲಿಕೋತ್ಸವ ನಡೆಸಲಾಗುತ್ತಿದೆ. ಆದರೂ ಶಾಲೆಗಳಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ಮಾತ್ರ ಇಳಿಮುಖವಾಗಿಲ್ಲ.
ಎರಡು ಹಂತದ ಸಮೀಕ್ಷೆ: ಇತ್ತೀಚೆಗೆ ನ್ಯಾಯಾಲಯದ ಸೂಚನೆ ಮೇರೆಗೆ, ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಆದೇಶಿಸಿತ್ತು. ಈ ಪ್ರಕಾರ ಹಾವೇರಿ ಜಿಲ್ಲೆ ಸಾರ್ವಜನಿಕ ಶಿಕ್ಷಣ ಇಲಾಖೆ ತನ್ನ ವ್ಯಾಪ್ತಿಗೆ ಬರುವ ಹಾವೇರಿ, ಹಾನಗಲ್ಲ, ಬ್ಯಾಡಗಿ, ಹಿರೇಕೆರೂರು, ಸವಣೂರು, ಶಿಗ್ಗಾಂವಿ, ರಾಣಿಬೆನ್ನೂರು ತಾಲೂಕುಗಳಲ್ಲಿ ಸಮೀಕ್ಷೆ ಕೈಗೊಂಡು, ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಎರಡು ರೀತಿಯಲ್ಲಿ ಸಮೀಕ್ಷೆ ಕೈಗೊಂಡಿದ್ದು, ಮೊದಲ ಹಂತವಾಗಿ ಪ್ರತಿ ಮನೆಗೆ ತೆರಳಿ ಕುಟುಂಬ ಸಮೀಕ್ಷೆ ನಡೆಸಿದಾಗ 8055ಕ್ಕೂ ಅಧಿಕ ಮಕ್ಕಳು ಶಾಲೆಯಿಂದ ಹೊರಗುಳಿದ ಸಂಗತಿ ಬೆಳಕಿಗೆ ಬಂದಿತ್ತು. ಎರಡನೇ ಹಂತವಾಗಿ ಶಾಲಾ ಸಮೀಕ್ಷೆ ನಡೆಸಿ ಜಿಲ್ಲೆಯ ಪ್ರತಿಯೊಂದು ಶಾಲೆಗಳಿಗೆ ತೆರಳಿ ವರ್ಗಾವಣೆ ಪತ್ರ ಪಡೆದರೂ ಶಾಲೆಗೆ ದಾಖಲಾಗದ ವಿದ್ಯಾರ್ಥಿಗಳ ಮಾಹಿತಿ ಕಲೆ ಹಾಕಲಾಯಿತು.
ಬೇರೆ ಜಿಲ್ಲೆಯಲ್ಲೂ ಪರಿಶೀಲನೆ: 2011-12ನೇ ಸಾಲಿನಲ್ಲಿ 1ರಿಂದ 10ನೇ ತರಗತಿವರೆಗೆ ಅಧ್ಯಯನ ಮಾಡಿ 2012-13ನೇ ಸಾಲಿಗೆ 16,965 ಮಕ್ಕಳು ಮುಂದಿನ ತರಗತಿಗೆ ದಾಖಲು ಮಾಡಿಕೊಂಡಿರಲಿಲ್ಲ. 2012-13ನೇ ಸಾಲಿನಲ್ಲಿ ಅಧ್ಯಯನ ಮಾಡಿ 13-14ನೇ ಸಾಲಿಗೆ 14,700 ವಿದ್ಯಾರ್ಥಿಗಳು ಮುಂದಿನ ವರ್ಗಕ್ಕೆ ದಾಖಲಾಗಿರಲಿಲ್ಲ. ಈ ವಿದ್ಯಾರ್ಥಿಗಳು ಎಲ್ಲಿ ಅಧ್ಯಯನ ಮಾಡುತ್ತಿದ್ದಾರೆ, ಯಾವ ಜಿಲ್ಲೆಯ ಯಾವ ಶಾಲೆಯಲ್ಲಿ ಪ್ರವೇಶ ಪಡೆದಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಬೇರೆ ಜಿಲ್ಲೆಯಗಳಲ್ಲಿ ಸಮೀಕ್ಷೆ ನಡೆಸಿದಾಗ ಅಂತಿಮವಾಗಿ ಜಿಲ್ಲೆಯಲ್ಲಿ 4,623 ಮಕ್ಕಳು ಶಾಲೆಯಿಂದ ಹೊರಗುಳಿದು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಶಿಕ್ಷಣ ಇಲಾಖೆಯಿಂದ ಕೆಲ ಮಕ್ಕಳನ್ನು ಮರಳಿ ಶಾಲೆಗೆ ದಾಖಲಿಸುವ ಕಾರ್ಯವೂ ನಡೆದಿದೆ.
ಜಿಲ್ಲೆಯಲ್ಲಿ ಹೆಚ್ಚಾಗಿ 14 ರಿಂದ 16 ವರ್ಷದೊಳಗಿನ ಗಂಡು, ಹೆಣ್ಣು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಗ್ರಾಮೀಣ ಪ್ರದೇಶದಲ್ಲೇ ಹೆಚ್ಚಾಗಿ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿದ್ದು, ಹೆಣ್ಣು ಮಕ್ಕಳಿಗೆ ಬಾಲ್ಯ ವಿವಾಹ ಮಾಡುವುದರಿಂದ, ಕೃಷಿ ಚಟುವಟಿಕೆ ಒತ್ತಡ, ಬಡ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಮಕ್ಕಳು, ನಗರಕ್ಕೆ ಕೂಲಿಗಾಗಿ ಬಂದಿರುವ ಕಾರ್ಮಿಕರ ಮಕ್ಕಳು ಹೆಚ್ಚಾಗಿ ಶಾಲೆಯಿಂದ ಹೊರಗುಳಿದಿದ್ದಾರೆ ಎನ್ನುತ್ತದೆ ಶಿಕ್ಷಣ ಇಲಾಖೆ ಮಾಹಿತಿ.
ಬ್ಯಾಡಗಿ ತಾಲೂಕಿನಲ್ಲಿ 339, ಹಾನಗಲ್ಲ 609, ಹಾವೇರಿ 927, ಹಿರೇಕೆರೂರು 369, ರಾಣಿಬೆನ್ನೂರು 904, ಶಿಗ್ಗಾಂವಿ 573, ಸವಣೂರು 902 ಸೇರಿದಂತೆ ಒಟ್ಟು 4,623 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಈ ಕುರಿತು ಡಿಡಿಪಿಐ ಎಸ್.ಬಿ. ಕೊಡ್ಲಿ ಅವರನ್ನು ಕೇಳಿದಾಗ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಕರೆತಂದು ಶಾಲಾ ಮಟ್ಟದ ತರಬೇತಿ, ಚಿಣ್ಣರ ಅಂಗಳ, ಟೆಂಟ್ ಶಾಲೆ, ಮೊಬೈಲ್ ಶಾಲೆ, ವಸತಿ ಶಾಲೆಗಳ ಮೂಲಕ ಶಿಕ್ಷಣ ನೀಡಲು ಯೋಜನೆ ತಯಾರಿಸಿ ಸರ್ವ ಶಿಕ್ಷಣ ಅಭಿಯಾನ ಯೋಜನಾ ನಿರ್ದೇಶಕರಿಗೆ ಕಳುಹಿಸಲಾಗಿದೆ.
ಸ್ವಪ್ರೇರಣೆಯಿಂದ 655 ಮಕ್ಕಳನ್ನು ಶಾಲೆಗೆ ದಾಖಲಿಸಿಕೊಳ್ಳಲಾಗಿದೆ. ಹಂತ-ಹಂತವಾಗಿ ಎಲ್ಲ ಮಕ್ಕಳನ್ನು ಶಾಲೆಗಳತ್ತ ಆಕರ್ಷಿಸಲು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುವುದು. ಯಾವ ಮಗುವೂ ಶಿಕ್ಷಣದಿಂದ ವಂಚಿತವಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.