ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ನಾಳೆ ವಿದ್ಯುತ್ ವ್ಯತ್ಯಯ

Srinivasa Murthy VN
Updated On : 22 Mar 2014, 11:57 am

ಹಾವೇರಿ: ಹಾವೇರಿಯ 110 ಕೆವಿ ವಿದ್ಯುತ್ ಕೇಂದ್ರದಿಂದ ಕೆರಿಮತ್ತಿಹಳ್ಳಿಯ 33, 11 ಕೆವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ವಿದ್ಯುತ್ ಕಂಬಗಳ ಸ್ಥಳಾಂತರ ಕಾಮಗಾರಿ ಇರುವುದರಿಂದ 33 ಕೆವಿ ಕೆರಿಮತ್ತಿಹಳ್ಳಿ ಸ್ಟೇಷನ್‌ನಿಂದ ಹೊರಡುವ ಎಲ್ಲ ಫೀಡರ್‌ಗಳಲ್ಲಿ ಮಾ. 23ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. 33 ಕೆವಿ ಕೆರಿಮತ್ತಿಹಳ್ಳಿ ಕೇಂದ್ರದಿಂದ ವಿದ್ಯುತ್ ಪೂರೈಕೆಯಾಗುವ ಎಸ್‌ಪಿ ಆಫೀಸ್, ಕೆರಿಮತ್ತಿಹಳ್ಳಿ, ಕಬ್ಬೂರ, ಸಂಗೂರ ಫೀಡರ್‌ನಿಂದ ವಿದ್ಯುತ್ ಪೂರೈಕೆಯಾಗುವ ಕೆರಿಮತ್ತಿಹಳ್ಳಿ, ಕಬ್ಬೂರ, ಸಂಗೂರ, ದಿಡಗೂರ, ಗೌರಾಪುರ, ತಿಮ್ಮಾಪುರ ಇನ್ನಿತರ ಪ್ರದೇಶಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.

ನಾಳೆ ಯೋಗ ಮಹೋತ್ಸವ  
ಹಾವೇರಿ: ಹುತಾತ್ಮ ವೀರ ಭಗತ್‌ಸಿಂಗ್, ರಾಜಗುರು, ಸುಖದೇವರ ಬಲಿದಾನದ ದಿನವಾದ ಮಾ. 23ರಂದು ಯೋಗ ಗುರು ಬಾಬಾ ರಾಮದೇವ ಅವರ ಸೂಚನೆಯಂತೆ ದೇಶಾದ್ಯಂತ ಯೋಗ ಆಚರಿಸಲಾಗುತ್ತಿದ್ದು, ಅಂದು ಮಧ್ಯಾಹ್ನ 3ರಿಂದ ಸಂಜೆ 7ರವರೆಗೆ ನಗರದ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದ ಆವರಣದಲ್ಲಿ ಯೋಗ ಮಹೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪತಂಜಲಿ ಯೋಗ ಸಮಿತಿ ಜಿಲ್ಲಾಧ್ಯಕ್ಷ ಲಕ್ಷ್ಮಣ ಚಿಂತಾ ತಿಳಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ ಟ್ರಸ್ಟ್, ಮಹಿಳಾ ಪತಂಜಲಿ ಯೋಗ ಸಮಿತಿ ನೇತೃತ್ವದಲ್ಲಿ ಯೋಗ ಮಹೋತ್ಸವ ಹಮ್ಮಿಕೊಳ್ಳಲಾಗಿದ್ದು, ದೆಹಲಿ ಸೇರಿದಂತೆ ದೇಶದ 625 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಯೋಗ ಆಚರಿಸಲಾಗುವುದು. ಈ ಹಿನ್ನೆಲೆಯಲ್ಲಿ ಅಂದು ಉಚಿತ ಯೋಗ ಕಾರ್ಯಕ್ರಮ ಏರ್ಪಡಿಸಲಾಗಿದ್ದು, 10 ಕೋಟಿಗೂ ಹೆಚ್ಚು ಜನರು ಯೋಗ ಆಚರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಬಾಲೇಹೊಸೂರು ದಿಂಗಾಲೇಶ್ವರ   ಶ್ರೀ, ಹುಕ್ಕೇರಿಮಠದ ಸದಾಶಿವಶ್ರೀ, ಬೊಮ್ಮನಳ್ಳಿ ಶಿವಯೋಗಿ ಶ್ರೀ, ಅಕ್ಕಿಆಲೂರ ಶಿವಬಸವ ಶ್ರೀ, ಹೊಸರಿತ್ತಿ ಗುದ್ದಲಿ ಶಿವಯೋಗೀಶ್ವರ ಶ್ರೀ, ಗುಡ್ಡದ ಆನ್ವೇರಿಯ ಶಿವಯೋಗೀಶ್ವರ ಶ್ರೀ, ರಾಣಿಬೆನ್ನೂರಿನ ಗುರುಬಸವ ಶ್ರೀ, ಗಂಗಾಪುರದ ಮರುಳುಶಂಕರ ಶ್ರೀ, ರಾಣಿಬೆನ್ನೂರು ರಾಮಕೃಷ್ಣಾಶ್ರಮದ ಪ್ರಕಾಶಾನಂದಜಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಕ್ಕೂ ಮುನ್ನ ನಗರದ ಮೈಲಾರ ಮಹಾದೇವಪ್ಪ ವೃತ್ತದಿಂದ ಹುಕ್ಕೇರಿ ಮಠದವರೆಗೆ ಪತಂಜಲಿ ಯೋಗ ಸಮಿತಿ ಕಾರ್ಯಕರ್ತರು, ಸಾರ್ವಜನಿಕರಿಂದ ಪಥಸಂಚಲನ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಕಳೆದ 4 ತಿಂಗಳಿಂದ ಜಿಲ್ಲಾದ್ಯಂತ ನಮ್ಮ ನಡಿಗೆ ಯೋಗದ ಕಡೆಗೆ ಅಭಿಯಾನ ನಡೆಸಲಾಗುತ್ತಿದೆ ಎಂದರು. ಭಾರತ ಸ್ವಾಭಿಮಾನ ಟ್ರಸ್ಟ್ ಜಿಲ್ಲಾಧ್ಯಕ್ಷೆ ವಜ್ರೇಶ್ವರಿ ಲದ್ವಾ, ರವಿ ಬಿಜಾಪುರ,  ಜಂಟಿ ಕಾರ್ಯದರ್ಶಿ ಆರ್.ಎನ್. ರಾಠೋಡ, ಪಾರ್ವತಿ ಹುಲಿಹಳ್ಳಿ, ಎಂ.ಬಿ. ಮೋಟಳ್ಳಿ ಇತರರು ಇದ್ದರು.

ಮತದಾರರ ಜಾಗೃತಿಗಾಗಿ ಸ್ವೀಪ್ ಕಾರ್ಯಕ್ರಮ
ಹಾವೇರಿ:  ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಡಳಿತ, ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಆಶ್ರಯದಲ್ಲಿ ಜನಸಾಮಾನ್ಯರಿಗೆ ಮತದಾನದ ಮಹತ್ವ ಹಾಗೂ ಮತದಾನದಿಂದ ಪ್ರಜಾಪ್ರಭುತ್ವಕ್ಕೆ ಸಹಾಯಕ ಅಂಶಗಳ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಶುಕ್ರವಾರ ನಗರದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಎನ್. ಮಾಳಿಗೇರ ಚಾಲನೆ ನೀಡಿದರು. ನಗರದ ಜೆ.ಎಚ್. ಪಟೇಲ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ 18 ವರ್ಷ ತುಂಬಿದ ಎಲ್ಲರೂ ಮತ ಚಲಾಯಿಸುವ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಯಿತು.
ಹಾವೇರಿ ನಗರದ ಅಂಗನವಾಡಿ ಕಾರ್ಯಕರ್ತೆಯರು, ಶಿಶು ಅಭಿವೃದ್ಧಿ ಯೋಜನೆಯ ಮಹಿಳಾ ಮೇಲ್ವಿಚಾರಕಿಯರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಜೆ.ಎಚ್. ಪಟೇಲ ವೃತ್ತದಿಂದ ನಗರದ ಪ್ರಮುಖ ಬೀದಿಗಳಲ್ಲಿ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಾಗೃತಿ ಜಾಥಾ ಕೈಗೊಂಡರು.
ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಜಯಕುಮಾರ, ನಿರೂಪಣಾಧಿಕಾರಿ ಕೆ.ಎಚ್. ವಿಜಯಕುಮಾರ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಲಿತಾ ಡಿ.ಎಚ್. ಪಾಲ್ಗೊಂಡಿದ್ದರು.

ನಾಳೆ ಕಾಂಗ್ರೆಸ್ ಪಾದಯಾತ್ರೆ
ರಾಣಿಬೆನ್ನೂರು: ತಾಲೂಕಾದ್ಯಂತ ಹಾಗೂ ನಗರದಲ್ಲಿ ಕಾಂಗ್ರೆಸ್ ಸಂಘಟಿಸಿ ಬಲಪಡಿಸುವುದಕ್ಕಾಗಿ ಮಾ. 23ರಂದು ಬೆಳಗ್ಗೆ 10.30ಕ್ಕೆ ಮಾಜಿ ಸಚಿವ ಹಾಗೂ ರಾಣಿಬೆನ್ನೂರು ಶಾಸಕ ಕೆ.ಬಿ. ಕೋಳಿವಾಡ ನಗರದಲ್ಲಿ ಪಾದಯಾತ್ರೆ ನಡೆಸುವರು ಎಂದು ಕಾಂಗ್ರೆಸ್ ಪ್ರಕಟಣೆಯಲ್ಲಿ ತಿಳಿಸಿದೆ. ನಗರದ ಮೇಡ್ಲೇರಿ ರಸ್ತೆಯಲ್ಲಿರುವ ಆದಿಶಕ್ತಿ ದೇವಸ್ಥಾನದಿಂದ ಹೊರಡುವ ಪಾದಯಾತ್ರೆ ಮೇಡ್ಲೆರಿ ಕ್ರಾಸ್, ಪೋಸ್ಟ್ ಸರ್ಕಲ್, ಎಂ.ಜಿ. ರಸ್ತೆ, ದರ್ಗಾ ಸರ್ಕಲ್, ಕುರುಬಗೇರಿ ಕ್ರಾಸ್ ಮುಖಾಂತರ ಪಿ.ಬಿ. ರಸ್ತೆ ಮೂಲಕ ಕೆಇಬಿ ಗಣೇಶ ದೇವಸ್ಥಾನ ತಲುಪುವುದು. ಪಾದಯಾತ್ರೆಯಲ್ಲಿ ಜಿಲ್ಲೆಯ ಎಲ್ಲ ತಾಲೂಕಿನ ಹಿರಿಯ ಕಾಂಗ್ರೆಸ್ ಮುಖಂಡರು, ಯುವಕರು ಪಾಲ್ಗೊಳ್ಳುವುದರೊಂದಿಗೆ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ತಾಲೂಕು ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ಪ ಕಂಬಳಿ, ನಗರ ಘಟಕದ ಅಧ್ಯಕ್ಷ ಪುಟ್ಟಪ್ಪ ಮರಿಯಮ್ಮನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉದಾಸಿಯಿಂದ ಶ್ರೀಗಳ ಭೇಟಿ
ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಅವರು ನಗರದ ಹುಕ್ಕೇರಿ ಮಠಕ್ಕೆ ಶುಕ್ರವಾರ ಭೇಟಿ ನೀಡಿ ಮಠದ ಪೀಠಾಧಿಪತಿ ಸದಾಶಿವ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಶಿವರಾಜ ಸಜ್ಜನರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ, ಶಹರ ಘಟಕದ ಅಧ್ಯಕ್ಷ ಗುಡ್ಡನಗೌಡ ಅಂದಾನಿಗೌಡ್ರ, ಜಿಲ್ಲಾ ವಕ್ತಾರ ಪ್ರಭು ಹಿಟ್ನಳ್ಳಿ, ಪಕ್ಷದ ಮುಖಂಡರಾದ ಬಸವರಾಜ ಮಾಸೂರ, ಚನಬಸಪ್ಪ ಕೋಡಿಹಳ್ಳಿ, ಕಲ್ಯಾಣಕುಮಾರ ಶೆಟ್ಟರ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.

ವಿಜೃಂಭಣೆಯ ಬಸವೇಶ್ವರ ರಥೋತ್ಸವ
ಶಿಗ್ಗಾಂವಿ:  ತಾಲೂಕಿನ ಸದಾಶಿವಪೇಟೆ ಸುಕ್ಷೇತ್ರದಲ್ಲಿ 34ನೇ ವರ್ಷದ ಜಾತ್ರಾಮಹೋತ್ಸವದ ನಿಮಿತ್ತ ಗುರುವಾರ ಬೆಳಗ್ಗೆ ಶ್ರೀ ಶರಣ ಬಸವೇಶ್ವರನಿಗೆ ಅಭಿಷೇಕ ಜರುಗಿತು. ನಂತರ 11.15ಕ್ಕೆ  ಶಿರಹಟ್ಟಿಯ ಜಗದ್ಗುರು ಫಕ್ಕೀರ ಸಿದ್ದರಾಮ ಸ್ವಾಮಿಗಳು, ಕೂಡಲದ ಗುರು ನಂಜೇಶ್ವರ ಸ್ವಾಮಿಗಳು ಮತ್ತು ಬಂಕಾಪುರ ಅರಳೇಲೆಮಠದ ರೇವಣಸಿದ್ದೇಶ್ವರ ಸ್ವಾಮಿಗಳ ಸಮ್ಮುಖದಲ್ಲಿ ಸರ್ವಸಮಾಜ ಬಾಂಧವರ, ಧರ್ಮೀಯರ ಸಾಮೂಹಿಕ ವಿವಾಹ ಜರಗಿದವು. ನಂತರ ಸುತ್ತ-ಮುತ್ತಲಿನಿಂದ ಬಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರೀ ಶರಣ ಬಸವೇಶ್ವರ ಮಹಾರಥೋತ್ಸವ ಶ್ರದ್ಧಾ, ಭಕ್ತಿಯಿಂದ ವಿಜೃಂಭಣೆಯಿಂದ ಜರುಗಿತು.  ರಥೋತ್ಸವ ಪೂರ್ವದಲ್ಲಿ ವಿಧಿ ವಿಧಾನದ ಜತೆಗೆ ರಥವನ್ನು ತಳಿರು, ತೋರಣ, ಬಾಳೆಕಂಬ, ಹೂವಿನಹಾರ, ರುದ್ರಾಕ್ಷಿ ಮಾಲೆಯಿಂದ ಸಿಂಗರಿಸಲಾಗಿತ್ತು. ಸಂಜೆ 5 ಗಂಟೆಗೆ ರಥದಲ್ಲಿ ಉತ್ಸವ ಮೂರ್ತಿಯಾದ  ಶರಣಬಸಪ್ಪನನ್ನು ಪ್ರತಿಷ್ಠಾಪಿಸಿ ಶ್ರೀಮಠದ ಪೀಠಾಧಿಪತಿ ಶಿವದೇವ ಶರಣರಿಂದ ಪೂಜಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಸಕಲ ವಾದ್ಯ ವೈಭವಗಳೊಂದಿಗೆ ಭಕ್ತರ ವೇಧ ಘೋಷದಿಂದ ಪ್ರಮುಖ ಬೀದಿಗಳಲ್ಲಿ ಸಾಗಿತು. ನೂತನ ವಧು ವರರು, ಭಕ್ತರು ತೇರಿನ ಕಳಶಕ್ಕೆ ಬಾಳೆಹಣ್ಣು, ಉತ್ತತ್ತಿ ಸಮರ್ಪಿಸಿ ಭಕ್ತಿ ಭಾವ ಮೆರೆದರು. ನಂತರ ರಥೋತ್ಸವ ತಿರುಗಿ ಮಠಕ್ಕೆ ತಲುಪಿ ರಥೋತ್ಸವ ಸಮಾಪ್ತಿಗೊಂಡಿತು.

ಶಿಕ್ಷಣದಿಂದ ಪ್ರತಿಭೆಗಳ ಅನಾವರಣ
ಬ್ಯಾಡಗಿ: ಮಕ್ಕಳ ಬೌದ್ಧಿಕ ಶಕ್ತಿ ವೃದ್ಧಿಗಾಗಿ ಶಿಕ್ಷಣ ಅವಶ್ಯಕ. ಶೈಕ್ಷಣಿಕ ವ್ಯವಸ್ಥೆಯಿಂದ ವಿಶ್ವದಲ್ಲಿರುವ ಅಸಾಮಾನ್ಯ ಪ್ರತಿಭೆಗಳು ಬೆಳಕಿಗೆ ಬಂದಿದ್ದು, ಹೇರಳವಾಗಿರುವ ಮಾನವ ಸಂಪನ್ಮೂಲ ಸದ್ಬಳಕೆ ಮಾಡಿಕೊಳ್ಳಬೇಕಾಗಿದೆ ಎಂದು ತಹಸೀಲ್ದಾರ್ ಶಿವಶಂಕರ ನಾಯಕ್ ಅಭಿಪ್ರಾಯ ವ್ಯಕ್ತಪಡಿಸಿದರು. ತಾಲೂಕಿನ ಕದರಮಂಡಲಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ಜರುಗಿದ ವಾರ್ಷಿಕೋತ್ಸವ ಮತ್ತು ಬೀಳ್ಕೊಡುಗೆ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು. ಮಕ್ಕಳು ಶಿಕ್ಷಣ ವಂಚಿತರಾದಲ್ಲಿ ದೇಶ ಅಧೋಗತಿಗಿಳಿಯಲಿದೆ. ಜ್ಞಾನದಿಂದ ವ್ಯಕ್ತಿ ಸಮಾಜಕ್ಕೆ ಆದರ್ಶ ಪ್ರಾಯನಾಗಬಲ್ಲ. ಶಿಕ್ಷಣ ಪಡೆಯದವನು ಜೀವನದಲ್ಲಿ ಆರ್ಥಿಕ ಸಂಕಷ್ಟದಿಂದ ಬಳಲಬೇಕಾಗುತ್ತದೆ ಎಂದರು. ಗುರುಕುಲ ವ್ಯವಸ್ಥೆ ಮಾದರಿಯಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ನೀಡಿದಾಗ ಮಾತ್ರ ಪ್ರಾಮಾಣಿಕತೆ ಹಾಗೂ ಮೌಲ್ಯಗಳು ವೃದ್ಧಿಯಾಗಲಿವೆ. ಸರ್ಕಾರದ ಸೌಲಭ್ಯಗಳು ಶಿಕ್ಷಣವನ್ನು ಮನೆಬಾಗಿಲಿಗೆ ತಂದು ನಿಲ್ಲಿಸಿದ್ದು, ಅದನ್ನು ಪಡೆದಂತಹ ನೀವೇ ಧನ್ಯರು ಎಂದರು. ಬಿಇಒ ಪ್ರಸನ್ನಕುಮಾರ ಮಾತನಾಡಿ, ದೇಶವನ್ನು ಕಟ್ಟುವಂತಹ ಗುರುತರ ಜವಾಬ್ದಾರಿಯನ್ನು ನಿಭಾಯಿಸುವ ಶಕ್ತಿಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕಾಗುತ್ತದೆ. ವಿದ್ಯಾರ್ಥಿಗಳು ದೇಶಭಕ್ತರ, ದಾರ್ಶನಿಕರ ಆದರ್ಶಗಳನ್ನು ರೂಢಿಸಿಕೊಳ್ಳುವ ಮೂಲಕ ತತ್ವ, ಸಿದ್ಧಾಂತಗಳೊಂದಿಗೆ ಆದರ್ಶಪ್ರಾಯ ಬದುಕನ್ನು ನಡೆಸುವಂತೆ ಕರೆ ನೀಡಿದರು. ಡಿ.ಕೆ. ಹಳ್ಳೇರ ವರದಿವಾಚನ ಮಾಡಿದರು.
ಬಿ.ಕೆ. ಶ್ರೀನಿವಾಸ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮುಖ್ಯಶಿಕ್ಷಕ ಬಿ.ಎಂ. ಜಗಾಪುರ ಅಧ್ಯಕ್ಷತೆ ವಹಿಸಿದ್ದರು. ಎಂ.ಎನ್. ಚಳಗೇರಿ ಇತರರು ಉಪಸ್ಥಿತರಿದ್ದರು. ಆರ್.ಎಸ್. ವಿಭೂತಿ ಸ್ವಾಗತಿಸಿದರು. ಬಿ.ಬಿ. ಕೆಂಚನಗೌಡ್ರ ನಿರೂಪಿಸಿದರು. ಎಸ್.ವಿ. ಅಕ್ಕಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement