ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಬಳ್ಳಾರಿ ಕ್ಷೇತ್ರಕ್ಕೆ ಪತ್ರಕರ್ತ ಮಾಳಗಿ ಆಪ್ ಅಭ್ಯರ್ಥಿ

Srinivasa Murthy VN
Updated On : 22 Mar 2014, 11:53 am

ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಆಮ್ ಆದ್ಮಿ ಪಕ್ಷದಿಂದ ಪತ್ರಕರ್ತ ಶಿವಕುಮಾರ್ ಮಾಳಗಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ. ಬಿಜೆಪಿ, ಕಾಂಗ್ರೆಸ್‌ನಿಂದ ಮಾತ್ರ ಅಭ್ಯರ್ಥಿಗಳ ಘೋಷಣೆಯಾಗಿಛದ್ದು, ಇದೀಗ ಆಮ್ ಆದ್ಮಿ ತನ್ನ ಅಭ್ಯರ್ಥಿಯನ್ನು ಅಧಿಕೃತವಾಗಿ ಘೋಷಿಸುವ ಮೂಲಕ ಬಳ್ಳಾರಿ ಕ್ಷೇತ್ರದಲ್ಲಿ ತನ್ನ ಸತ್ವ ಪರೀಕ್ಷೆಗೆ ಇಳಿದಿದೆ.
ಮೂಲತಃ ಬಳ್ಳಾರಿ ಜಿಲ್ಲೆ ಕಮಲಾಪುರ ಗ್ರಾಮದವರಾದ ಶಿವಕುಮಾರ್ ಮಾಳಗಿ, ಬಿಎ ಪದವಿಯನ್ನು ಕರ್ನಾಟಕ ಕಾಲೇಜ್ ಧಾರವಾಡ, ಎಂಎ (ಸಮೂಹ ಸಂವಹನ ಮತ್ತ ಪತ್ರಿಕೋದ್ಯಮ) ಧಾರವಾಡದಲ್ಲಿ ಮಾಡಿದ್ದಾರೆ. ವಿವಿಧ ಖಾಸಗಿ ಸುದ್ದಿವಾಹಿನಿಯಲ್ಲಿ ಕೆಲಸ ಮಾಡಿರುವ ಶಿವಕುಮಾರ್, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ಸೇರಿದಂತೆ ಆಂಗ್ಲ ಭಾಷೆಯ ವಿವಿಧ ಪತ್ರಿಕೆಗಳಲ್ಲೂ ಕೆಲಸ ನಿರ್ವಹಿಸಿದ್ದಾರೆ.
ಪ್ರಸ್ತುತ ಬಳ್ಳಾರಿಯಲ್ಲಿ ಆಂಗ್ಲ ಭಾಷೆಯ ಪತ್ರಿಕೆಯ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಆಮ್ ಆದ್ಮಿ ಪಾರ್ಟಿಯಿಂದ ಬಳ್ಳಾರಿ ಲೋಕಸಭೆ ಕ್ಷೇತ್ರಕ್ಕೆ ಸ್ಪರ್ಧಿಸಲಿದ್ದಾರೆ. ಗಣಿಗಾರಿಕೆ ಕುರಿತಾಗಿ ವಿಸೃತ ವರದಿಯನ್ನು ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಶಿವಕುಮಾರ್ ಮಾಳಗಿ ಸಮಾಜ ಪರಿವರ್ತನ ಸಮುದಾಯದ ಸದಸ್ಯರು, ಜನ ಸಂಗ್ರಾಮ ಪರಿಷತ್ ರಾಜ್ಯ ಕಾರ್ಯಕಾರಣಿ ಸದಸ್ಯರು, ನ್ಯಾಷನಲ್ ಕಮಿಟಿ ಫರ್ ಪ್ರೊಟೆಕ್ಷನ್ ಆಫ್ ನ್ಯಾಚುರಲ್ ರಿಸೋರ್ಸ್‌ನ ಸದಸ್ಯರಾಗಿ ಕೆಲಸ ಮಾಡಿದ್ದಾರೆ.

30ರಂದು ಮೇಯರ್ ಆಯ್ಕೆ ಚುನಾವಣೆ
ಬಳ್ಳಾರಿ: ಲೋಕಸಭಾ ಚುನಾವಣೆ ಮತ್ತಿತರ ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದ್ದ ಬಳ್ಳಾರಿ ಮಹಾನಗರ ಪಾಲಿಕೆ ಮಹಾಪೌರ, ಉಪ ಮಹಾಪೌರ ಹಾಗೂ ಸ್ಥಾಯಿ ಸಮಿತಿಗಳ ಸದಸ್ಯರ 16ನೇ ಅವಧಿಯ ಆಯ್ಕೆ ಚುನಾವಣೆ ಮಾ. 30ರಂದು ಸಂಜೆ 5ಕ್ಕೆ ನಡೆಸಲಾಗುವುದು ಎಂದು ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ. ಚುನಾವಣೆ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆಯಲಿದ್ದು, ಮೇಯರ್ ಸ್ಥಾನವನ್ನು ಅನುಸೂಚಿತ ಜಾತಿ ಹಾಗೂ ಉಪ ಮೇಯರ್ ಸ್ಥಾನವನ್ನು ಹಿಂದುಳಿದ ವರ್ಗ ಬ(ಮಹಿಳೆ)ಗೆ ಮೀಸಲಿರಿಸಿ 2013ರ ಆಗಸ್ಟ್ 21ರಂದು ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದೆ. ಈ ಆಯ್ಕೆ ಚುನಾವಣೆ ನಾಮಪತ್ರಗಳನ್ನು ಸ್ವೀಕರಿಸಲು ಮಹಾನಗರ ಪಾಲಿಕೆ ಆಯುಕ್ತರನ್ನು ಅಧಿಕೃತ ಅಧಿಕಾರಿಯೆಂದು ನಿಯುಕ್ತಿಗೊಳಿಸಲಾಗಿದೆ. ಪಾಲಿಕೆ ಸದಸ್ಯರು ನಾಮಪತ್ರಗಳನ್ನು ಮಾ. 30ರ ಮಧ್ಯಾಹ್ನ 3 ಗಂಟೆಯೊಳಗಾಗಿ ಆಯುಕ್ತರಿಗೆ ಸಲ್ಲಿಸಬೇಕು. ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳಿಗೂ ನಾಮಪತ್ರ ಸ್ವೀಕರಿಸಿ ಅವಶ್ಯವಿದ್ದಲ್ಲಿ ಚುನಾವಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಜೂಜಾಟ: 16 ಜನ ಬಂಧನ
ಬಳ್ಳಾರಿ: ರಿಕ್ರಿಯೇಷನ್ ಕ್ಲಬ್ ಮೇಲೆ ಪೊಲೀಸರು ದಾಳಿ ಮಾಡಿ, 16 ಜನರನ್ನು ಬಂಧಿಸಿ ಹಣ ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಕುಡಿತಿನಿಯಲ್ಲಿ ನಡೆದಿದೆ. ಕುಡಿತಿನಿಯ ಬಸವೇಶ್ವರ ಸ್ಟೋರ್ಟ್ಸ್ ಆಂಡ್ ರಿಕ್ರಿಯೇಷನ್ ಕ್ಲಬ್‌ನಲ್ಲಿ ಅಂದರ್ ಬಾಹರ್ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ರುದ್ರಮುನಿ ಮಾರ್ಗದರ್ಶನದಲ್ಲಿ ಕುರುಗೋಡು ಸಿಪಿಐ ಲಕ್ಷ್ಮಿಕಾಂತಯ್ಯ, ಕುಡಿತಿನಿ ಪಿಎಸ್‌ಐ ವಾಸುಕುಮಾರ್, ಸಿಬ್ಬಂದಿ ದಾಳಿ ನಡೆಸಿ ರಾಮಕೃಷ್ಣ, ಹೊನ್ನೂರ್, ನಾಗೇಶ್ವರ ರಾವ್, ತಿಮ್ಮನಗೌಡ, ಮಂಜು, ಕುಮಾರಪ್ಪ ಸೇರಿ 16 ಜನರನ್ನು ಬಂಧಿಸಿ ರು. 53,950 ವಶಪಡಿಸಿಕೊಂಡು ಕುಡಿತಿನಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇಸ್ಪೀಟ್: 12 ಜನ ಅಂದರ್
ಬಳ್ಳಾರಿ: ಇಸ್ಪೀಟ್ ಜೂಜಾಟ ಅಡ್ಡೆ ಮೇಲೆ ಕುಡಿತಿನಿ ಪೊಲೀಸರು ದಾಳಿ ಮಾಡಿ 12 ಜನರನ್ನು ಬಂಧಿಸಿದ್ದು, ಬಂಧಿತರಿಂದ ನಗದು ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಸಿದ್ದಮನಹಳ್ಳಿಯಲ್ಲಿ ನಡೆದಿದೆ. ತಾಲೂಕಿನ ಸಿದ್ದಮನಹಳ್ಳಿಯಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ರುದ್ರಮುನಿ ಮಾರ್ಗದರ್ಶನದಲ್ಲಿ ಕುಡಿತಿನಿ ಪಿಎಸ್‌ಐ ವಾಸುಕುಮಾರ್ ಮತ್ತು ಸಿಬ್ಬಂದಿ ದಾಳಿ ಮಾಡಿ, ಕೊಂಡಾರೆಡ್ಡಿ, ನಾಗಿರೆಡ್ಡಿ, ಭೀಮರೆಡ್ಡಿ, ಹೇಮರೆಡ್ಡಿ, ದೇವೇಂದ್ರ ರೆಡ್ಡಿ, ಶ್ರೀನಿವಾಸ ರೆಡ್ಡಿ, ಎನ್. ವೀರಾರೆಡ್ಡಿ, ನಾರಾಯಣ ರೆಡ್ಡಿ, ರಾಮಚಾರಿ, ರುಕ್ಮಾಂಥ ರೆಡ್ಡಿ, ಹನುಮಂತ ರೆಡ್ಡಿ ಸೇರಿದಂತೆ ಇತರರನ್ನು ಬಂಧಿಸಿದ್ದು, ಬಂಧಿತರಿಂದ ರು. 19,200ವನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಕುಡಿತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ: ಇಬ್ಬರ ಬಂಧನ
ಬಳ್ಳಾರಿ: ಟಿಕೆಟ್ ಕೊಟ್ಟು ದುಡ್ಡು ಕೇಳಲು ಹೋದ ನಿರ್ವಾಹಕಿ ಮೇಲೆ ಕಿಡಿಗೇಡಿಗಳಿಬ್ಬರು ಹಲ್ಲೆ ಮಾಡಿರುವ ಘಟನೆ ನಗರದ ಗಡಿಗಿ ಚನ್ನಪ್ಪ ವೃತ್ತದಲ್ಲಿ ಶುಕ್ರವಾರ ಸಂಜೆ ನಡೆದಿದೆ. ಮೋಕಾದಿಂದ ಬಳ್ಳಾರಿಗೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಳ್ಳಾರಿ ಘಟಕದ ಬಸ್ಸಿನಲ್ಲಿ ಬಂದ ಹೊನ್ನೂರಪ್ಪ ಮತ್ತು ಶ್ರೀಧರ್ ಎನ್ನುವ ಕಿಡಿಗೇಡಿಗಳು ಟಿಕೆಟ್ ನೀಡಿ ದುಡ್ಡು ಕೇಳಲು ಹೋದಾಗ ನಿರ್ವಾಹಕಿ ಮೇಲೆ ಹಲ್ಲೆ ಮಾಡಿದ್ದಾರೆ. ಈ ಇಬ್ಬರನ್ನು ಗಾಂಧಿನಗರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಕುರಿತಾಗಿ ಬಳ್ಳಾರಿಯ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಪನ್ಯಾಸ ಕಾರ್ಯಕ್ರಮ
ಬಳ್ಳಾರಿ: ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಶಾಖೆಯಿಂದ ನಗರದಲ್ಲಿ ಕೃತಕ ಕಿವಿ ಆಲಿಸುವ ಯಂತ್ರದ ಕುರಿತು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರಿನ ತಜ್ಞ ವೈದ್ಯೆ ಶೀಲಾ ಶ್ರೀನಿವಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಒಂದು ವರ್ಷದೊಳಗಿನ ಚಿಕ್ಕಮಕ್ಕಳ ಕಿವುಡುತನ ಗುರುತಿಸಿ, ಅದನ್ನು ಇ ಕೃತಕ ಕಿವಿ ಆಲಿಸುವ ಯಂತ್ರವನ್ನು ಅಳವಡಿಸಿ, ಅವರ ನೋವನ್ನು ಹೋಗಲಾಡಿಸುವ ಕುರಿತು ಮಾಹಿತಿ ನೀಡಿದರು. ಐಎಂಎ ಜಿಲ್ಲಾಧ್ಯಕ್ಷ ಡಾ. ಪ್ರಭಂಜನ್ ಕುಮಾರ್, ಕಾರ್ಯದರ್ಶಿ ಡಾ. ಮಹ್ಮದ್ ಶಫಿವುದ್ದೀನ್ ಹಾಗೂ ಸಂಘದ ಸದಸ್ಯರು ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement