ಮೇ 23ರಿಂದ ಬಾಲೇಹೊಸೂರ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮ: ದಿಂಗಾಲೇಶ್ವರ ಸ್ವಾಮೀಜಿ
ಹಾವೇರಿ: ಗದಗ ಜಿಲ್ಲೆ ಶಿರಹಟ್ಟಿ ತಾಲೂಕು ಬಾಲೇಹೊಸೂರ ಮಠದ ನೂತನ ಕಟ್ಟಡ ಹಾಗೂ ದಾಸೋಹ ಭವನ ಉದ್ಘಾಟನೆ ಕಾರ್ಯಕ್ರಮದ ಅಂಗವಾಗಿ ಮೇ 23ರಿಂದ 25ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ನಾಡಿನ ಮಠಾಧೀಶರು, ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಎಂದು ಬಾಲೇಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.
ನಗರದ ಹುಕ್ಕೇರಿಮಠದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಮಾರ್ಚ್ ತಿಂಗಳಿನಲ್ಲಿ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿತ್ತು. ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಂದೂಡಲಾಗಿತ್ತು. ಇದೀಗ ಕಾರ್ಯಕ್ರಮದ ದಿನಾಂಕವನ್ನು ನಿಗದಿಗೊಳಿಸಲಾಗಿದೆ. ಮೇ 23ರಂದು 1001 ಕ್ಷೀರಕುಂಭ, ದೀಕ್ಷೆ, ಅಯ್ಯಾಚಾರ, ಪ್ರವಚನ ಮಂಗಲ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ಸ್ವಾಮೀಜಿಗಳನ್ನು ಗುರುತಿಸಿ ಸಾಮೂಹಿಕ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.
ಮೇ 24ರಂದು 200ಕ್ಕೂ ಹೆಚ್ಚು ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ವಿವಾಹವಾಗ ಬಯಸುವವರು ಮೇ 20ರೊಳಗೆ ಅಗತ್ಯ ದಾಖಲೆಗಳೊಂದಿಗೆ ಹೆಸರು ನೋಂದಾಯಿಸಬೇಕು. ಮೇ 24ರಂದು ರಾತ್ರಿ ಗಣ್ಯ ಮಠಾಧೀಶರಿಂದ ಸಮಾಜ ಪರಿವರ್ತನೆಯಲ್ಲಿ ಮಠಗಳ ಪಾತ್ರ ಕುರಿತು ಧಾರ್ಮಿಕ ಸಮಾರಂಭ ನಡೆಯಲಿದೆ. 25ರಂದು 5001 ಮಾತೆಯರಿಗೆ ಸೀರೆಯೊಂದಿಗೆ ಉಡಿತುಂಬುವ ಹಾಗೂ ಒಂದು ತೆಂಗಿನ, ಮಾವಿನ ಸಸಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉಡಿತುಂಬಿಸಿಕೊಳ್ಳುವ ಮಾತೆಯರಿಗೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿಗೈಯಲಾಗುವುದು ಎಂದರು.
ಏ. 20ರಂದು ಶ್ರೀಮಠದ ರಥೋತ್ಸವವಿದ್ದು, ರಥೋತ್ಸವದ ನಿಮಿತ್ತ ಅಂದಿನಿಂದ 33 ದಿನಗಳ ಕಾಲ ಮಠದ ಆವರಣದಲ್ಲಿ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಪ್ರವಚನ ಕಾರ್ಯಕ್ರಮಕ್ಕೆ ಪ್ರತಿದಿನ ನಾಡಿನ ಮೂರರಿಂದ ನಾಲ್ವರು ಗಣ್ಯ ಮಠಾಧೀಶರು ಆಗಮಿಸಿ ತಮ್ಮ ಸಂದೇಶ ನೀಡುವರು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಪ್ರತಿಭೆಗಳಿಗೆ, ಗಣ್ಯರನ್ನು ಸನ್ಮಾನಿಸಲಾಗುವುದು. ಈ ಪ್ರವಚನವು ಸಾಂಸ್ಕೃತಿಕ, ಸಾಮಾಜಿಕ, ಅಧ್ಯಾತ್ಮಿಕ ಕ್ರಾಂತಿಯನ್ನು ಉಂಟುಮಾಡುವ ಆಶಾಭಾವನೆ ಹೊಂದಲಾಗಿದೆ. ಪ್ರತಿದಿನ 20 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗುವುದು ಎಂದರು.
ಮೇ 23ರಿಂದ ಮೂರು ದಿನಗಳ ಕಾಲ ನಡೆಯುವ ಬೃಹತ್ ಧಾರ್ಮಿಕ ಕಾರ್ಯಕ್ರಮದ ದಾಸೋಹಕ್ಕೆ ಸೇವೆ ಸಲ್ಲಿಸುವ ಭಕ್ತರು ಏ. 20ರಿಂದ ಮೇ 20ರೊಳಗೆ ತಾವು ಈ ಹಿಂದೆ ವಾಗ್ದಾನ ಮಾಡಿದಂತಹ ದವಸ, ಧಾನ್ಯ, ರೊಟ್ಟಿ, ಚಟ್ನಿಗಳನ್ನು ಮಠಕ್ಕೆ ತಂದುಕೊಡಬಹುದು ಎಂದರು. ಈ ಕಾರ್ಯಕ್ರಮಕ್ಕೆ ನಾಡಿನ ಮಠಾಧೀಶರು, ಗಣ್ಯರು, ರಾಜಕೀಯ ಮುಖಂಡರನ್ನು ಆಹ್ವಾನಿಸಲಾಗುವುದು ಎಂದು ಅವರು ತಿಳಿಸಿದರು. ಹುಕ್ಕೇರಿಮಠದ ಮಠದ ಸದಾಶಿವ ಸ್ವಾಮೀಜಿ, ಪಿ.ಡಿ. ಶಿರೂರ, ಬಸವರಾಜಪ್ಪ ಇದ್ದರು.