ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಪ್ರತಿಜ್ಞಾವಿಧಿ ಬೋಧನೆ

Srinivasa Murthy VN
Updated On : 23 Mar 2014, 12:15 pm

ರಾಣಿಬೆನ್ನೂರು: ತಾಲೂಕಿನ ಗುಡಗೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಸಾಕ್ಷರತಾ ಪ್ರೇರಕರು, ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿನ ಮತದಾರರ ಮನೆಮನೆಗಳಿಗೆ ತೆರಳಿ ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವುದರೊಂದಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಮತದಾರರಿಗೆ ಪ್ರತಿಜ್ಞಾವಿಧಿ ಬೋಧಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಸಿ. ಮದ್ಲೆರ ಮಾತನಾಡಿ, ಪವಿತ್ರವಾದ ಮತವನ್ನು ಯೋಗ್ಯರಿಗೆ ನೀಡಬೇಕು ಎಂದು ಹೇಳಿದರು. ಗುಡಗೂರು ಗ್ರಾಪಂ ವ್ಯಾಪ್ತಿಗೊಳಪಟ್ಟಿರುವ ಗುಡಗೂರು, ಮೈದೂರು, ಯತ್ತಿನಹಳ್ಳಿ, ಬೇವಿನಹಳ್ಳಿ, ಗುಡಗೂರು ತಾಂಡಾ, ಚನ್ನಾಪುರ ತಾಂಡಾ, ಗಂಗಾಪುರ ಗ್ರಾಮಗಳ ಸುಮಾರು 6,500 ಮತದಾರರಿಗೆ ಪ್ರತಿಜ್ಞಾವಿಧಿ ಬೋಧಿಸಿರುವುದಾಗಿ ಎಸ್.ಸಿ. ಮದ್ಲೇರ ತಿಳಿಸಿದರು. ಹರನಗಿರಿ ಸಮೂಹ ಸಂಪನ್ಮೂಲ ಕೇಂದ್ರದ ಶಿಕ್ಷಕ ಬಿ.ಎಸ್. ದೊಡಮನಿ, ಪ್ರಧಾನಗುರು ಎಂ.ಬಿ. ಹಿರೇಮಠ, ಕಮಲಮ್ಮ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ವಿ.ಕೆ. ನಾಯ್ಕ, ಜಿ.ಎಫ್. ಬೆಳವಿಗಿ ಇದ್ದರು.

ಜಾಗೃತಿ ಜಾಥಾ
ರಾಣಿಬೆನ್ನೂರು: ತಾಪಂ, ತಾಲೂಕು ಲೋಕ ಶಿಕ್ಷಣ ಸಮಿತಿ ಹಾಗೂ ತಾಲೂಕು ಆಡಳಿತ ಆಶ್ರಯದಲ್ಲಿ ತಾಲೂಕಿನ 35 ಗ್ರಾಪಂ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಕ್ಷರತಾ ಪ್ರೇರಕರು ಶುಕ್ರವಾರ ನಗರದ ಪ್ರಮುಖ ಬೀದಿಗಳಲ್ಲಿ ಸ್ವೀಪ್ ಮತದಾನ ಜಾಗೃತಿ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಮತದಾನ ಕುರಿತು ಅರಿವು ಮೂಡಿಸಿದರು. ನಗರದ ತಾಲೂಕು ಪಂಚಾಯಿತಿ ಕಾರ್ಯಾಲಯದಿಂದ ಹೊರಟ ಜಾಗೃತಿ ಜಾಥಾ ಎಂ.ಜಿ. ರಸ್ತೆ, ಎಡಿಬಿ ರಸ್ತೆ, ಚರ್ಚ್ ರಸ್ತೆ, ಹೊಸನಗರ, ಮೇಡ್ಲೆರಿ ರಸ್ತೆ, ಅಶೋಕನಗರ, ಕೆಎಚ್‌ಬಿ ಕಾಲನಿ, ಪೂರ್ವ ಬಡಾವಣೆ, ವಿಕಾಸನಗರ ಹಾಗೂ ಚೌಡೇಶ್ವರಿ ಬಡಾವಣೆಗಳಲ್ಲಿ ಘೋಷಣೆ ಕೂಗಿದರು. ಬಳಿಕ ನಗರದ ಪೋಸ್ಟ್ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಿದರು. ತಾಪಂ ಆವರಣದಲ್ಲಿ ಜಾಗೃತಿ ಜಾಥಾಕ್ಕೆ ತಾಪಂ ಇಒ ಕೆ. ಕೃಷ್ಣಮೂರ್ತಿ ಚಾಲನೆ ನೀಡಿದರು. ಅಕ್ಷರ ದಾಸೋಹ ಕಾರ್ಯಕ್ರಮದ ಸಹಾಯಕ ನಿರ್ದೇಶಕ ಹೋಬಾ ನಾಯಕ, ತಾಲೂಕು ಲೋಕ ಶಿಕ್ಷಣ ಸಮಿತಿ ಸಂಯೋಜಕ ಆರ್.ಡಿ. ಹೊಂಬರಡಿ ಸಾಕ್ಷರತೆ ಹಾಗೂ ಮತದಾನ ಸಾಕ್ಷರತೆ ಕುರಿತು ಮಾತನಾಡಿದರು. ಗ್ರಾಪಂ ಪ್ರೇರಕ ದೊಣ್ಣೇಪ್ಪ ದುರುಗಮ್ಮನವರ, ಹನುಮಂತ ಸಾರಥಿ, ಸುನಿತಾ ಓಲೇಕಾರ, ಎನ್.ಬಿ. ಪಾಟೀಲ, ಯಶೋದಮ್ಮ, ಪ್ರೇಮಾ ಅರ್ಕಾಚಾರಿ, ಹಂಸಾ ಅಣ್ಣೇರ, ರೇಖಾ ಪದಕಿ, ಸಂತೋಷ ಹಾಡೂರ, ಮಹಿಳಾ ತಾಲೂಕು ಸಂಯೋಜಕಿ ಕವಿತಾ ಎಸ್.ಜಿ., ಇದ್ದರು.

ಜಾಗೃತಿ ಕಾರ್ಯಕ್ರಮ
ಹಾವೇರಿ:  ಲೋಕಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ತ ಸ್ವೀಪ್ ಕಾರ್ಯಕ್ರಮದಡಿ ತಾಲೂಕಿನ ದೇವಿಹೊಸೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಎಲ್ಲ ಆಶಾ ಕಾರ್ಯಕರ್ತೆಯರಿಂದ ಮತದಾರರಿಗೆ ಮತದಾನದ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮ ಶುಕ್ರವಾರ ದೇವಿಹೊಸೂರ ಗ್ರಾಮದಲ್ಲಿ ಜರುಗಿತು. ಇದೇ ಸಂದರ್ಭದಲ್ಲಿ ಪ್ರತಿಜ್ಞಾವಿಧಿ ಸ್ವೀಕಾರ ಮಾಡಿ, ಮನೆ ಮನೆಗೆ ಭೇಟಿ ನೀಡಿದ ಕಾರ್ಯಕರ್ತೆಯರು, ಸಾರ್ವಜನಿಕರಿಗೆ ಮತದಾನ ಮಹತ್ವ ಹಾಗೂ ಸಾಂವಿಧಾನಿಕ ಹಕ್ಕಿನ ಬಗ್ಗೆ ತಿಳಿಸಿದರು.  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಘವೇಂದ್ರಸ್ವಾಮಿ, ವೈದ್ಯಾಧಿಕಾರಿ ಡಾ. ಸರಿತಾ, ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ವಸಂತಕುಮಾರಿ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಹಂಪಣ್ಣನವರ, ಶಿವಯೋಗಿ ಬಣಕಾರ, ಸಾದಿಕ್ ಹುರಕಡ್ಲಿ ಹಾಗೂ ಶಂಕರ ಸುತಾರ ಹಾಜರಿದ್ದರು. ಅಲ್ಲದೆ ಗ್ರಾಮಸ್ಥರು ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಲಿ
ಹಾವೇರಿ:   ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ಅಂದಾಗ ತಮ್ಮ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕಿಂಗ್ ಕ್ಷೇತ್ರಗಳತ್ತ ಗಮನಹರಿಸಿ, ನಿಷ್ಠೆಯಿಂದ ಅಧ್ಯಯನ ಕೈಗೊಂಡ ಪರೀಕ್ಷೆಗಳಲ್ಲಿ ಉತ್ತಮ ಅಂಕಪಡೆದು, ಬ್ಯಾಂಕಿಂಗ್ ಕ್ಷೇತ್ರದಲ್ಲಿರುವ ಅನೇಕ ಉನ್ನತ ಉದ್ಯೋಗಗಳನ್ನು ಅಲಂಕರಿಸಬೇಕೆಂದು ಹಾವೇರಿ ಎಸ್‌ಬಿಐ ಶಾಖೆಯ ವ್ಯವಸ್ಥಾಪಕ ಜಿತೇಂದ್ರ ಪಾಟೀಲ ಹೇಳಿದರು. ಅವರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಆಂತರಿಕ ಗುಣಮಟ್ಟ ಭರವಸೆ ಕೋಶದ ಅಡಿಯಲ್ಲಿ ನಗರದ ನೌಕರರ ಸಮುದಾಯ ಭವನದಲ್ಲಿ ಜರುಗಿದ ಜಿಲ್ಲಾಮಟ್ಟದ ಒಂದು ದಿನದ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಜೆ.ಸಿ. ಹಾದಿಮನಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅದ್ಭುತವಾದ ಪ್ರತಿಭಾ ಶಕ್ತಿ ಇದೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದರು. ಐಕ್ಯೂಎಸಿಯ ಸಂಯೋಜಕ ಪ್ರೊ.ರಾಜಶೇಖರ ಮಾತನವರ ಪ್ರಾಸ್ತಾವಿಕವಾಗಿ ಮಾತನಾಡಿ, ಉನ್ನತ ಸ್ಥಾನವನ್ನು ಅಲಂಕರಿಸಬೇಕಾದರೆ ನಿರಂತರ ಅಧ್ಯಯನದ ಅಗತ್ಯತೆ ಇದೆ.  ವಿದ್ಯಾರ್ಥಿಗಳು ಕೇವಲ ಪಠ್ಯ ವಿಷಯಗಳಿಗೆ ಅಂಟಿಕೊಳ್ಳದೆ, ಹಲವಾರು ಬ್ಯಾಂಕಿಂಗ್ ಪರೀಕ್ಷೆಗಳನ್ನು ಎದುರಿಸಿ ತಮ್ಮ ಜೀವನನ್ನು ರೂಪಿಸಿಕೊಳ್ಳಬೇಕು ಎಂದರು. ಪ್ರೊ. ಡಿ.ಟಿ. ಪಾಟೀಲ ಸ್ವಾಗತಿಸಿದರು, ಪ್ರೊ. ಹಾರಾಳು ಮಹಾಬಲೇಶ್ವರ ಪರಿಚಯಿಸಿದರು. ಪ್ರೊ. ದೇವೇಂದ್ರ ಬಿ.ಎನ್. ಕಾರ್ಯಕ್ರಮ ನಿರೂಪಿಸಿದರೆ, ಡಾ. ವಿ.ಎಂ. ಕುಮ್ಮೂರ ವಂದಿಸಿದರು.

ಶ್ರುತಿ ಪ್ರಥಮ
ಹಾವೇರಿ:  ಶಿಗ್ಗಾಂವಿ ಗೊಟಗೋಡಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಸ್ತರಣೆ ಮತ್ತು ಸಲಹಾ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಸಾಂಪ್ರದಾಯಿಕ ರಂಗೋಲಿ ಮತ್ತು ಹಸೆ ಚಿತ್ತಾರ ಸ್ಪರ್ಧೆಯಲ್ಲಿ ಹಾವೇರಿಯ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿ ಶ್ರುತಿ ವಿ. ರಾಯ್ಕರ ಪ್ರಥಮ ಸ್ಥಾನ ಪಡೆದಿದ್ದಾರೆ. ಬಹುಮಾನದ ಪ್ರಶಸ್ತಿಪತ್ರ ಹಾಗೂ ರು. 5 ಸಾವಿರ ವಿವಿ ಕುಲಪತಿ ಅಂಬಳಿಕೆ ಹಿರಿಯಣ್ಣ ವಿತರಿಸಿದರು. ವಿಜೇತ ವಿದ್ಯಾರ್ಥಿನಿ ಶ್ರುತಿಯನ್ನು ಕಾಲೇಜಿನ ಉಪನ್ಯಾಸಕರು ಹಾಗೂ ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ.

ಪ್ರಕಾಶಗೆ ಪ್ರಥಮ ರ್ಯಾಂಕ್
ಹಾವೇರಿ: ಇಲ್ಲಿಯ ಟಿಎಂಎಇ ಸಂಸ್ಥೆಯ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿ ಪ್ರಕಾಶ ದುರಗಪ್ಪ ಬಾರ್ಕಿ 2012-13ನೇ ಸಾಲಿನಲ್ಲಿ ನಡೆದ ಬಿಪಿಎಡ್ ಪರೀಕ್ಷೆಯಲ್ಲಿ ಶೇ. 88.53 ಅಂಕಗಳನ್ನು ಪಡೆದು ಕರ್ನಾಟಕ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಹಾಗೂ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಮಾ .25ರಂದು ಜರುಗುವ 64ನೇ ಘಟಿಕೋತ್ಸವದ ಪದವಿ ಪ್ರಧಾನ ಕಾರ್ಯಕ್ರಮದಲ್ಲಿ ಸುವರ್ಣ ಪದಕ ಹಾಗೂ ಪ್ರಶಸ್ತಿ ಪತ್ರವನ್ನು ಸ್ವಿಕರಿಸುತ್ತಿದ್ದು, ವಿದ್ಯಾರ್ಥಿಯ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು, ಕಾಲೇಜಿನ ಪ್ರಾಚಾರ್ಯರು ಹಾಗೂ ಸಿಬ್ಬಂದಿ ಶುಭ ಹಾರೈಸಿದ್ದಾರೆ.

ಪದ್ಮಾವತಿ ನಿಧನ
ಬ್ಯಾಡಗಿ:  ಪಟ್ಟಣದ ಶೆಟ್ಟರ ಓಣಿ ನಿವಾಸಿ ಪದ್ಮಾವತಿ ಶ್ರೀನಿವಾಸ ಶಿವಪೂಜಿ (67) ಇವರು ಶನಿವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು. ಮೃತರಿಗೆ ಪತಿ ಸೇರಿದಂತೆ ಮೂವರು ಪುತ್ರರು ಹಾಗೂ ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗ ಇದ್ದಾರೆ. ಮೃತರ ಅಂತ್ಯಕ್ರಿಯೆಯು ಮಾ. 23ರ 9 ಗಂಟೆಗೆ ಬೆಟ್ಟದ ಮಲ್ಲೇಶ್ವರ ಗುಡ್ಡಕ್ಕೆ ಹೋಗುವ ರಸ್ತೆಯಲ್ಲಿರುವ ಮುಕ್ತಿಧಾಮದಲ್ಲಿ ನೆರವೇರಿಸುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement