ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮನಸೆಳೆದ ಮಡಕೆ ಒಡೆಯುವ ಸ್ಪರ್ಧೆ

Srinivasa Murthy VN
Updated On : 23 Mar 2014, 12:15 pm

ಹಾನಗಲ್ಲ:  ನಗರದಲ್ಲಿ ಭಾನುವಾರ ಹೋಳಿ ಹಬ್ಬ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಶನಿವಾರ ರಂಗಿನ ರಾತ್ರಿ ಕಾರ್ಯಕ್ರಮದಡಿ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಕದಂಬ ಯುವಶಕ್ತಿ ಸಂಘಟನೆ ಆಯೋಜಿಸಿದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಬಣ್ಣ ಬಣ್ಣದ ನೀರು ತುಂಬಿದ ಎತ್ತರದಲ್ಲಿ ಕಟ್ಟಿದ ಗಡಿಗೆ ಒಡೆಯುವ ಸ್ಪರ್ಧೆ ಅತ್ಯಂತ ಆಕರ್ಷಕವಾಗಿತ್ತು.   ಎತ್ತರಕ್ಕೆ ಕಟ್ಟಿದ ಒಂದು ಮಣ್ಣಿನ ಗಡಿಗೆಯಲ್ಲಿ ಬಣ್ಣ ಬಣ್ಣದ ನೀರು ತುಂಬಿದ್ದರು. ಇದನ್ನು ಒಡೆಯಲು ಹತ್ತು ಹನ್ನೆರಡು ಯುವಕರು ಸಜ್ಜಾಗಿ ಒಬ್ಬರ ಮೇಲೆ ಒಬ್ಬರು ಹತ್ತಿ ನಿಂತು, ಪಿರಾಮಿಡ್ ರೂಪದಲ್ಲಿ ಮೇಲೇರಿ ಗಡಿಗೆಯನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಒಡೆಯಬೇಕು. ಇದಕ್ಕಾಗಿ 5 ತಂಡಗಳು ಸಿದ್ಧವಾಗಿದ್ದವು.  ಭಾರತ ಯುವ ಸೇನೆ ತಂಡದ ಯುವಕರು ಕೇವಲ 24 ಸೆಕೆಂಡ್‌ಗಳಲ್ಲಿ ಗಡಿಗೆ ಒಡೆದು ಪ್ರಥಮ ಸ್ಥಾನ ಗಿಟ್ಟಿಸಿದರು.  ಮೈಲಾರಲಿಂಗೇಶ್ವರ ತಂಡದ ಯುವಕರು 56 ಸೆಕೆಂಡ್‌ಗಳಲ್ಲಿ ಗಡಿಗೆ ಒಡೆದು ದ್ವಿತೀಯ ಬಹುಮಾನ ಪಡೆದರು. ಗಡಿಗೆ ಒಡೆಯುವ ಸ್ಪರ್ಧೆಯಲ್ಲಿ ಮಹಿಳೆಯರಿಗೂ ಅವಕಾಶವಿತ್ತು. ಈ ಸ್ಪರ್ಧೆಯನ್ನು ನಗರದ ಪ್ರಸನ್ನ ಮಾರುತಿ ದೇವಸ್ಥಾನದ ಬಳಿಯ ಕ್ರಾಸ್‌ನಲ್ಲಿ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ನೇಹಾ ಕಲಾಲ 34 ಸೆಕೆಂಡ್‌ಗಳಲ್ಲಿ ಗಡಿಗೆ ಒಡೆದು ಪ್ರಥಮ ಸ್ಥಾನ ಪಡೆದರು. ರಕ್ಷಿತಾ ಕಲಾಲ 50 ಸೆಕೆಂಡ್‌ಗಳಲ್ಲಿ ಗಡಿಗೆ ಒಡೆದು ದ್ವಿತೀಯ ಸ್ಥಾನ ಪಡೆದರು. ಶಾರದಾ ಲಮಾಣಿ 56 ಸೆಕೆಂಡ್‌ಗಳಲ್ಲಿ ಗಡಿಗೆ ಒಡೆದು ತೃತೀಯ ಸ್ಥಾನ ಪಡೆದರು. ಸರಸ್ವತಿ ದೇವರ, ಸಂಗೀತಾ ಕಲಾಲ, ಸುಮಾ ದೇವರ, ನಿಖಿತಾ ಕಲಾಲ ಸಮಾಧಾನಕರ ಬಹುಮಾನ ಪಡೆದರು. ನಗರದ ಕದಂಬ ಯುವಶಕ್ತಿ ಸಂಘಟನೆ ಅಧ್ಯಕ್ಷ ಗುರುರಾಜ ನಿಂಗೋಜಿ, ಪದಾಧಿಕಾರಿಗಳಾದ ರವಿಚಂದ್ರ ಪುರೋಹಿತ, ದೀಪಕ್ ಕಲಾಲ, ಕೃಷ್ಣ ಪೂಜಾರ, ನಾಗೇಂದ್ರ ತುಮರೀಕೊಪ್ಪ   ಸ್ಪರ್ಧೆಯ ನೇತೃತ್ವ ವಹಿಸಿದ್ದರು.

ಪ್ರಾಂಶುಪಾಲರ ಸಮಾಲೋಚನೆ ಸಭೆ
ಶಿಗ್ಗಾಂವಿ:  ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ನಡುಮನೆ ಸಭಾಂಗಣದಲ್ಲಿ ಈಚೆಗೆ ಧಾರವಾಡ ವಿಭಾಗ ವ್ಯಾಪ್ತಿಯ ಪ್ರಥಮ ದರ್ಜೆ ಮಹಾವಿದ್ಯಾಲಯಗಳ ಪ್ರಾಂಶುಪಾಲರ ಸಮಾಲೋಚನೆ ಸಭೆ ಜರುಗಿತು.  ಅಧ್ಯಕ್ಷತೆವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ  ಮಾತನಾಡಿ, ಜಾನಪದ ವಿಶ್ವವಿದ್ಯಾಲಯವು ಪಾರಂಪರಿಕ ವಿಶ್ವವಿದ್ಯಾಲಯಗಳಿಗಿಂತ ಭಿನ್ನ ಹಾಗೂ ವಿಶಿಷ್ಟವಾಗಿರುವ ವಿಶ್ವವಿದ್ಯಾಲಯ. ಶೈಕ್ಷಣಿಕ ಕಾರ್ಯಚಟುವಟಿಕೆ ಜೊತೆಗೆ ಜಾನಪದವನ್ನು ಉಳಿಸುವ ಮತ್ತು ಬೆಳೆಸುವ ಉದ್ದೇಶದಿಂದ ಸಾಮಾಜಿಕ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದೆ. ವಿಶ್ವವಿದ್ಯಾಲಯದ ಸರ್ವಾಂಗೀಣ ಬೆಳವಣಿಗೆಗೆ ನಾಡಿನ ಜನಪದರು, ವಿದ್ವಾಂಸರು, ಶಿಕ್ಷಣತಜ್ಞರು ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡರು. ಕುಲಸಚಿವ ಪ್ರೊ. ಡಿ.ಬಿ. ನಾಯಕ, ಎಂಬಿಎ ವಿಭಾಗದ ಮುಖ್ಯಸ್ಥರು ಹಾಗೂ ಡೀನ್‌ರಾದ ಪ್ರೊ. ಎಂ. ಚಂದ್ರಪೂಜಾರಿ, ವಿಶ್ವವಿದ್ಯಾಲಯದ ಹಿರಿಯ ಸಂಶೋಧನಾ ಅಧಿಕಾರಿ ಡಾ. ಕೆ. ಪ್ರೇಮಕುಮಾರ, ಡಾ. ಶ್ರೀಶೈಲ ಹುದ್ದಾರ ಮಾತನಾಡಿದರು. ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಯ ವಿವಿಧ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರು ಸಲಹೆ ನೀಡಿದರು. ಪ್ರೊ. ಸ.ಚಿ. ರಮೇಶ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಎಂ.ಬಿ. ಶ್ವೇತಾ ನಿರ್ವಹಿಸಿದರು. ಡಾ. ಶ್ರೀಶೈಲ ಹುದ್ದಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement