ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸೇವಾ ನ್ಯೂನತೆ: ಗ್ರಾಹಕರ ವೇದಿಕೆಯಿಂದ ಬ್ಯಾಂಕಿಗೆ ದಂಡ

Srinivasa Murthy VN
Updated On : 23 Mar 2014, 12:15 pm

ಹಾವೇರಿ: ಆರೋಗ್ಯ ವಿಮೆಯ ಪ್ರೀಮಿಯಂ ಹಣವನ್ನು ಸಕಾಲದಲ್ಲಿ ವಿಮಾ ಕಂಪನಿಗೆ ಭರಿಸದೇ ಸೇವಾ ನ್ಯೂನತೆ ಮಾಡಿದ ನಗರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಶಾಖೆಯಿಂದಲೇ ಗ್ರಾಹಕನಿಗೆ ರು. 1,96,016 ವೈದ್ಯಕೀಯ ವೆಚ್ಚ ಹಾಗೂ ರು. 5 ಸಾವಿರ ಖರ್ಚು ಹಾಗೂ ರು. 3 ಸಾವಿರ ಮಾನಸಿಕ ವೇದನೆಗೆ ದಂಡ ವಿಧಿಸಿ ಜಿಲ್ಲಾ ಗ್ರಾಹಕರ ವೇದಿಕೆ ಆದೇಶ ಹೊರಡಿಸಿದೆ.
ನಗರದ ವಿನಾಯಕ ಸತ್ಯಪ್ಪ ಪಾಟೀಲ ಎಂಬುವರು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದು, ಬ್ಯಾಂಕ್ ಹಾಗೂ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಮಧ್ಯದ ಒಡಂಬಡಿಕೆಯಿಂದ ವಿನಾಯಕ ಪಾಟೀಲರು ವಿಕಾಸ ಆರೋಗ್ಯ ಮೆಡಿಕ್ಲೇಮ್ ಪಾಲಸಿ ಯೋಜನೆಯ ಪಾಲಸಿದಾರರಾಗಿದ್ದರು. ಅದರ ಅವಧಿ 2012ರ ಜನವರಿ 13ರಿಂದ 2013ರ ಜನವರಿ 12ರ ವರೆಗೆ ಇತ್ತು. ಪಾಲಸಿದಾರ ವಿನಾಯಕ ಅವರು 2012ರ ಜುಲೈ 9ರಂದು ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಬಲಗಾಲಿನ ಮಂಡಿ ನೋವಿನ ಕಾರಣದಿಂದ ಶಸ್ತ್ರ ಚಿಕಿತ್ಸೆ ಪಡೆದಿದ್ದರು. ಶಸ್ತ್ರಚಿಕಿತ್ಸೆ, ಔಷಧಿ ಹಾಗೂ ಆಸ್ಪತ್ರೆಯ ಬಿಲ್‌ನ್ನು ವಿಕಾಸ ಆರೋಗ್ಯ ಮೆಡಿಕ್ಲೇಮ್ ನಿಯಮಾನುಸಾರ ಮೊತ್ತ ಭರಿಸುವಂತೆ ಇನ್ಸೂರೆನ್ಸ್ ಕಂಪನಿಗೆ ಮೊರೆ ಹೋಗಿದ್ದರು. ಆದರೆ, ವಿಮಾ ಕಂಪನಿಯವರು ನೀವು ಸಕಾಲದಲ್ಲಿ ವಿಮಾ ಕಂತು ಪಾವತಿಸದ ಕಾರಣ ನಿಮ್ಮ ವಿಮೆ ರದ್ದಾಗಿದೆ ಎಂಬ ಉತ್ತರ ನೀಡಿದ್ದರು. ಆದರೆ, ಗ್ರಾಹಕ ಪಾಟೀಲರು 2012, ಜ. 11ರಂದೇ ಕರ್ನಾಟಕ ವಿಕಾಸ ಬ್ಯಾಂಕ್‌ಗೆ ವಿಮಾ ಕಂಪನಿಗೆ ಡಿಡಿ ಮೂಲಕ ಕಂತು ಪಾವತಿಸುವಂತೆ ವಿನಂತಿಸಿದ್ದರು. ಇದರಿಂದ ನೊಂದ ಗ್ರಾಹಕ ಪಾಟೀಲ ನ್ಯಾಯಕ್ಕಾಗಿ ಗ್ರಾಹಕರ ವೇದಿಕೆ ಮೊರೆ ಹೋಗಿದ್ದರು. ವಾದ-ವಿವಾದ ಆಲಿಸಿದ ಜಿಲ್ಲಾ ಗ್ರಾಹಕರ ವೇದಿಕೆ ಅಧ್ಯಕ್ಷ ಬಿ.ಎಸ್. ಶ್ರೀಹರ್ಷ, ಸದಸ್ಯ ರಾಜುನಾಮದೇವ ಮೈತ್ರಿ ಅವರು ಸೇವಾ ನ್ಯೂನತೆ ಮಾಡಿದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ಗೆ ಆಸ್ಪತ್ರೆ ವೆಚ್ಚ ರು. 1.96 ಲಕ್ಷ, ಮಾನಸಿಕ ವೇದನೆಗೆ ರು. 3 ಸಾವಿರ, ಕಟ್ಟಳೆ ಖರ್ಚು ರು. 5 ಸಾವಿರ ಹಾಗೂ ಪ್ರಕರಣದಲ್ಲಿ ವ್ಯತಿರಿಕ್ತ ಸಂಗತಿ ನೀಡಿ ವಾದ ಮಂಡನೆ ಮಾಡಿದ ಸಲುವಾಗಿ ಇನ್ಸೂರೆನ್ಸ್ ಕಂಪನಿಗೆ ರು. 5 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ.

ಸಾಮಾಜಿಕ ನ್ಯಾಯದಿಂದ ದೇಶಕ್ಕೆ ಉತ್ತಮ ಭವಿಷ್ಯ
ಹಾನಗಲ್ಲ:  ವೈಚಾರಿಕತೆಯ ಸೋಗಲಾಡಿತನ ಹೋಗಿ ನೈಜ ದೇಶಪ್ರೇಮ ವ್ಯಕ್ತವಾಗಿ ಸಾಮಾಜಿಕ ನ್ಯಾಯ ಸಿಗುವಂತಾದರೆ ಮಾತ್ರ ಭವಿಷ್ಯದಲ್ಲಿ ಭಾರತವನ್ನು ಸದೃಢವಾಗಿ ಕಟ್ಟಲು ಸಾಧ್ಯ ಎಂಬ ಸಂದೇಶದೊಂದಿಗೆ ನಡೆದ ಸಂವಾದ ಕಾರ್ಯಕ್ರಮ ಅರ್ಥಪೂರ್ಣತೆ ತಂದುಕೊಟ್ಟಿತು.
ಹಾನಗಲ್ಲ ತಾಲೂಕಿನ ಬೈಚವಳ್ಳಿ ಗ್ರಾಮದಲ್ಲಿ ಹಾನಗಲ್ಲಿನ ಶ್ರೀ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಅತಿಥಿ ಅಭ್ಯಾಗತರು ನಡೆಸಿದ ಯುವ ಜನತೆ ಹಾಗೂ ವೈಚಾರಿಕತೆ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಯುವ ವಿದ್ಯಾರ್ಥಿಗಳು ತಮ್ಮ ದಿಟ್ಟ ನಿಲುವನ್ನು ವ್ಯಕ್ತಪಡಿಸುವ ಮೂಲಕ ಗಟ್ಟಿ ರಾಷ್ಟ್ರಕಟ್ಟಲು ನಾವು ಬದ್ಧರಾಗಿದ್ದೇವೆ. ನಮ್ಮನ್ನಾಳುವವರು, ನಮ್ಮನ್ನು ಮುನ್ನಡೆಸುವವರಿಗೆ ರಾಷ್ಟ್ರಪರವಾದ ಬದ್ಧತೆ ಬೇಕು. ಅದು ಆದರ್ಶವಾಗಿ ಅನುಕರಣೆಯಾಗಬೇಕು. ಅಂದಾಗ ಮಾತ್ರ ಸಮನ್ವಯತೆ, ಸಹಕಾರದ ಮೂಲಕ ಬಲಿಷ್ಠ ಭಾರತ ಕಟ್ಟಲು ಸಾಧ್ಯ ಎಂಬ ವಿಚಾರಗಳು ವ್ಯಕ್ತವಾದವು.  
ಆರಂಭದಲ್ಲಿ ವಿಷಯ ಮಂಡಿಸಿದ ನ್ಯಾಯವಾದಿ ವಿಜಯಕಾಂತ ಪಾಟೀಲ, ವೈಚಾರಿಕತೆ ಎಂಬುವುದು ಒಂದು ಬುದ್ಧಿ ಭ್ರಮಣೆಯಾಗುವುದು ಬೇಡ. ಅದು ಕ್ರಿಯಾಶೀಲ ಚಟುವಟಿಕೆಗೆ ಶಕ್ತಿ ತುಂಬುವ ಪ್ರಕ್ರಿಯೆಯಾಗಬೇಕು. ಕಲುಷಿತ ಸಾಮಾಜಿಕ ವ್ಯವಸ್ಥೆಯನ್ನು ನೋಡಿ ಅಧೀರಗೊಳ್ಳುವುದು ಬೇಡ. ನಾಳೆಗಳನ್ನು ಸರಿಪಡಿಸಿಕೊಳ್ಳಲು ಸಾಧ್ಯ. ಇದಕ್ಕಾಗಿ ಸಾಮೂಹಿಕ ಪ್ರಯತ್ನ ನಡೆಯಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಿಷಯ ಮಂಡಿಸಿದ ಸಾಹಿತಿ ಮಾರುತಿ ಶಿಡ್ಲಾಪುರ, ದೇಶ ಕೆಟ್ಟಿದೆ, ವ್ಯವಸ್ಥೆ ಹದಗೆಟ್ಟಿದೆ ಎಂಬ ಚರ್ಚೆಗಳು ಸಹಜವಾಗಿಯೇ ಎಲ್ಲೆಡೆ ಕೇಳಿ ಬರುತ್ತಿವೆ. ಇದಕ್ಕಾಗಿ ನಿರಾಸೆಗೊಳ್ಳುವ ಅವಶ್ಯಕತೆಯಿಲ್ಲ. ಕಾಲಾಂತರದಲ್ಲಿ ನಡೆಯುವ ಸಾಮಾಜಿಕ ಬದಲಾವಣೆಗಳು ಒಮ್ಮೊಮ್ಮೆ ಅರಿವಿಲ್ಲದಂತೆ ಭ್ರಷ್ಟತೆಯತ್ತ ಸಾಗಿದ ಸಂದರ್ಭಗಳಿವೆ ಎಂದರು. ಈ ಸಂದರ್ಭದಲ್ಲಿ ಸಂವಾದಕ್ಕಿಳಿದ ವಿದ್ಯಾರ್ಥಿಗಳಾದ ಪಾರ್ವತಿ ಮಾಸನಕಟ್ಟಿ, ದೇಶ ಅಭಿವೃದ್ಧಿಯಾಗಬೇಕಾದರೆ ನಾಯಕತ್ವ ವಿಫಲಗೊಳ್ಳಬಾರದು. ದೇಶಕ್ಕೆ ಅನ್ನ ನೀರು ಕೊಟ್ಟರೆ ಸಾಲದು, ಸದೃಢ ಬುದ್ಧಿಶಕ್ತಿ, ದೇಶಭಕ್ತಿ ಜಾಗೃತಗೊಳಿಸದಿದ್ದರೆ ನಾವು ಮತ್ತೆ ಪರಕೀಯಗೊಳ್ಳುತ್ತೇವೆ ಎಂದು ಅಭಿಪ್ರಾಯಪಟ್ಟರು.
ನ್ಯಾಯವಾದಿ ರವಿ ಒಡೆಯರ, ಕಲಾವಿದ ರವಿ ಲಕ್ಷ್ಮೇಶ್ವರ, ಅರ್ಬನ್ ಬ್ಯಾಂಕ್ ನಿರ್ದೇಶಕ ಗಿರೀಶ ದೇಶಪಾಂಡೆ, ಉಪನ್ಯಾಸಕರಾದ ಪ್ರೊ. ಪಿ.ಎನ್. ಜೋಶಿ, ಡಾ. ಪ್ರಕಾಶ ಹೊಳೇರ, ನಾಗರಾಜ ಹಾವನೂರ, ಬಿ.ಎಚ್. ರಾಘವೇಂದ್ರ, ಸಿ.ಮಂಜುನಾಥ, ವಿ.ಎಲ್. ಪಾಟೀಲ, ಪಿ.ಎಫ್. ಪುರಾಣಮಠ, ಸಂತೋಷ ಗೌಡರ, ಐ.ಜಿ. ಹಿರೇಮಠ, ರಾಜಕುಮಾರ ಹಿತ್ಲೇರ, ಲಿಂಗರಾಜ ಗೌಳಿ ಮುಂತಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement