ಉದಾಸಿಯಿಂದ ಅವೈಜ್ಞಾನಿಕ ಹೆದ್ದಾರಿ
ರಾಣಿಬೆನ್ನೂರು: ರಾಷ್ಟ್ರೀಯ ಹೆದ್ದಾರಿ 4ನ್ನು ಅವೈಜ್ಞಾನಿಕ ಚತುಷ್ಪಥ ಹೆದ್ದಾರಿಯನ್ನಾಗಿ ಪರಿವರ್ತಿಸಿ, ಹೆದ್ದಾರಿಯ ಅಕ್ಕಪಕ್ಕದ ಗ್ರಾಮಗಳ ನೂರಾರು ಬಡವರ ಪ್ರಾಣಹಾನಿಗೆ, ರಸ್ತೆ ಅಕ್ಕಪಕ್ಕದಲ್ಲಿರುವ ಹೊಲಗಳಿಗೆ ಹೋಗಲು ರೈತರು ನಿತ್ಯ ಒಂದಿಲ್ಲ ಒಂದು ರೀತಿಯಿಂದ ತೊಂದರೆ ಅನುಭವಿಸುವಂತಹ ರೀತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿರುವುದೇ ಸಂಸದ ಶಿವಕುಮಾರ ಉದಾಸಿಯವರ ಮಹಾನ್ ಸಾಧನೆ ಎಂದು ಜೆಡಿಎಸ್ ಅಭ್ಯರ್ಥಿ ರವಿ ಮೆಣಸಿನಕಾಯಿ ವ್ಯಂಗ್ಯವಾಡಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಿವಕುಮಾರ ಉದಾಸಿಯವರು ಸಂಸದರಾದ ಕಾಲಾವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಮಾಡಿರುವ ಸಾಧನೆಯಾದರೂ ಏನು ಎಂದು ಪ್ರಶ್ನಿಸಿದ ಅವರು, ಯಾವುದೇ ರೀತಿಯ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಉದಾಸಿ ಮಾಡಿಲ್ಲ. ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಇತರೆ ಕೆಲಸಗಳನ್ನು ಗುತ್ತಿಗೆದಾರರಿಗೆ ನೀಡಿದ್ದೇ ಅವರ ಸಾಧನೆ ಎಂದು ಆರೋಪಿಸಿದರು.
ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪಿಯಲ್ಲಿ ಬರುವ ಹಾವೇರಿ, ಶಿಗ್ಗಾಂವಿ, ಸವಣೂರು, ರೋಣ, ಗದಗ ಪಟ್ಟಣಗಳು ಸೇರಿದಂತೆ ಸುಮಾರು 30ಕ್ಕೂ ಅಧಿಕ ಗ್ರಾಮಗಳಲ್ಲಿನ ಸಾರ್ವಜನಿಕರು ಕುಡಿಯುವ ನೀರಿಗಾಗಿ ಪರದಾಡುತ್ತಿರುವುದು ಇವರ ಕಣ್ಣಿಗೆ ಕಂಡಿಲ್ಲ. ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮಾಡಲಾಗದ ಇವರು ರೈತರ ಭೂಮಿಗೆ ಎಲ್ಲಿಂದ ನೀರು ಹಾಯಿಸುತ್ತಾರೆ. ವಿದ್ಯಾವಂತರ ಸಮಸ್ಯೆಗೆ ಹೇಗೆ ಪರಿಹಾರ ನೀಡುತ್ತಾರೆ. ಹಾವೇರಿ ಜಿಲ್ಲೆಯ ಮಧ್ಯದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ನಂ. 4ನ್ನು ಅವೈಜ್ಞಾನಿಕವಾಗಿ ಚತುಷ್ಫಥ ಹೆದ್ದಾರಿಯನ್ನಾಗಿ ಪರಿವರ್ತಿಸಿರುವ ಕಾರಣ, ಹೆದ್ದಾರಿಯ ಪಕ್ಕದಲ್ಲಿ ಬರುವ ಜಿಲ್ಲೆಯ ಶಿಗ್ಗಾಂವಿ, ಬಂಕಾಪುರ, ತವರಮಳಲಿಹಳ್ಳಿ, ಕಾಮನಹಳ್ಳಿ, ಕಾಟೇನಹಳ್ಳಿ, ತೋಟದ ಯಲ್ಲಾಪುರ, ಹಾವೇರಿ ಬೈಪಾಸ್ ಪೂರ್ವ ಭಾಗ ಮತ್ತು ಪಶ್ಚಿಮ ಭಾಗ ಮೂಟೇಬೆನ್ನೂರು, ಕುಮಾರಪಟ್ಟಣ ಗ್ರಾಮಗಳ ಲಕ್ಷಾಂತರ ಜನರು ನೂರಾರು ಸಮಸ್ಯೆ ಎದುರಿಸುವಂತಾಗಿದೆ. ರಸ್ತೆ ಅಕ್ಕಪಕ್ಕದಲ್ಲಿನ ಹೊಲಗಳಿಗೆ ಹೊಗಲು ರೈತರು ನಿತ್ಯ ಒಂದಿಲ್ಲ ಒಂದು ರೀತಿಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಈಗಾಗಲೆ ನೂರಾರು ಜನರು ರಸ್ತೆ ದಾಟಲು ಹೊಗಿ ತಮ್ಮ ಪ್ರಾಣ ಕಳೆದುಕೊಂಡಿರುವುದೇ ಇದಕ್ಕೆಲ್ಲ ಸಾಕ್ಷಿ ಎಂದು ದೂರಿದರು. ಸಂಸತ್ತಿನಲ್ಲಿ ಹಲವಾರು ವಿಷಯಗಳ ಕುರಿತು ಸಾವಿರಾರು ಪ್ರಶ್ನೆಗಳನ್ನು ಕೇಳುವುದೇ ಸಾಧನೆಯಲ್ಲ. ಕಾರ್ಯರೂಪದಲ್ಲಿ ಜನರ ಮನಸ್ಸಿಗೆ ಮುಟ್ಟುವಂತಹ ರೀತಿಯಲ್ಲಿ ಕೆಲಸ ಮಾಡುವುದೇ ಸಾಧನೆ. ನಮ್ಮ ತಂದೆಯವರಾದ ದಿ. ಬಿ.ಎಂ. ಮೆಣಸಿನಕಾಯಿ ಅವರು ಮಾಡಿರುವ ಸಾಧನೆಗಳೇ ನನ್ನ ಗೆಲುವಿಗೆ ಶ್ರೀರಕ್ಷೆ ಎಂದು ರವಿ ಮೆಣಸಿನಕಾಯಿ ತಿಳಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಬೇವಿನಮರದ, ಜೆಡಿಎಸ್ ಅಲ್ಪಸಂಖ್ಯಾತರ ರಾಜ್ಯ ಉಪಾಧ್ಯಕ್ಷ ಮನವರುದ್ದಿನ ಕಮದೋಡ, ಮಂಜುನಾಥ ಗೌಡಶಿವಣ್ಣನವರ, ಸಿ.ಸಿ. ಸಣ್ಣಗೌಡ್ರ, ತಾರಾಬಾಯಿ ದೊಡಮನಿ ಸೇರಿದಂತೆ ಅನೇಕರು ಇದ್ದರು.