ವಿದೇಶಿ ಹೈಬ್ರಿಡ್ ತಳಿಗೆ ಬ್ರೇಕ್ ಹಾಕದಿದ್ದರೆ ದೇಶವೆ ರೋಗಗ್ರಸ್ತ
ಬ್ಯಾಡಗಿ: ವಿದೇಶಿ ಹೈಬ್ರಿಡ್ ತಳಿಗಳಿಗೆ ಬ್ರೇಕ್ ಹಾಕದಿದ್ದರೆ ಕೆಲ ವರ್ಷಗಳಲ್ಲಿ ದೇಶವೇ ರೋಗ್ರಗಸ್ತವಾಗಲಿದೆ ಎಂದು ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಹೇಮಣ್ಣ ಬಾರಂಗಿ ಆತಂಕ ವ್ಯಕ್ತಪಡಿಸಿದರು.
ತಾಲೂಕಿನ ಘಾಳಪೂಜಿ ಗ್ರಾಮದಲ್ಲಿ ಕೃಷಿ ಇಲಾಖೆ, ಅರುಣೋದಯ ಸಂಸ್ಥೆ, ಆಂಜನೇಯ ಸಾವಯವ ಕೃಷಿ ಸಂಘ ಆಶ್ರಯದಲ್ಲಿ ಏರ್ಪಡಿಸಿದ್ದ ಸಾವಯವ ಕ್ಷೇತ್ರೋತ್ಸವ ಹಾಗೂ ಬೀಜ ಬ್ಯಾಂಕ್ ಉದ್ಘಾಟಿಸಿ ಅವರು ಮಾತನಾಡಿದರು.
ಹಸಿರು ಕ್ರಾಂತಿಯ ಪರಿಣಾಮ ದೇಶದ ರೈತರು ಹೈಬ್ರಿಡ್ ಬೀಜ, ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕ ಔಷಧಗಳನ್ನು ಬಳಕೆ ಮಾಡಲಾಯಿತು. ಇದರಿಂದ ದೇಶ ಎದುರಿಸುತ್ತಿದ್ದ ಆಹಾರ ಕ್ಷಾಮಕ್ಕೆ ತಾತ್ಕಾಲಿಕ ಬ್ರೇಕ್ ದೊರೆಯಿತಾದರೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಎಂಡೋಸಲ್ಫಾನ್ ದುಷ್ಪರಿಣಾಮಕ್ಕೆ ಜನಿಸುವ ಮಕ್ಕಳು ಇಂದಿಗೂ ಅಂಗವೈಕಲ್ಯದಿಂದ ಬಳಲುತ್ತಿವೆ ಎಂದರು.
ಪ್ರಸಕ್ತ ಸಾಲಿನಲ್ಲಿ ಬಿಟಿ ಕಳಪೆ ಬೀಜದಿಂದಾಗಿ ಸುಮಾರು 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ಹತ್ತಿ ಫಸಲು ನೀಡದೆ ಹೋಯಿತು. ಇನ್ನೂ ರಾಸಾಯನಿಕ ಗೊಬ್ಬರ ಕೃಷಿಕರಿಬ್ಬರ ಪ್ರಾಣ ತೆಗೆದು ದಾಖಲೆ ಸೃಷ್ಟಿಸಿದೆ. ವಿದೇಶಿ ಬೀಜ ಕಂಪನಿಗಳು ಜನರ ಬದುಕನ್ನೇ ಕಸಿದುಕೊಳ್ಳುತ್ತಿದ್ದರೂ ಜಾಣ ಕುರುಡು ಪ್ರದರ್ಶಿಸುತ್ತಿರುವ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.
ಕೃಷಿಕರು ಹಣದಾಸೆಗಾಗಿ ಆಧುನಿಕ ಕೃಷಿ ಪದ್ಧತಿಗೆ ಮಾರುಹೋಗಿ ಇದೀಗ ಸಂಕಷ್ಟ ಎದುರಿಸುವಂತಾಗಿದೆ. ತಲೆ ಮಾರಿನಿಂದಲೂ ನಡೆದು ಬಂದ ಸಾಂಪ್ರದಾಯಿಕ ಕೃಷಿಗೆ ವಿದಾಯ ಹೇಳಿದ ರೈತರು ಬೀಜ ಹಾಗೂ ರಾಸಾಯನಿಕ ಗೊಬ್ಬರಕ್ಕಾಗಿ ವಿದೇಶಿ ಕಂಪನಿಗಳ ಬಾಗಿಲು ತಟ್ಟುವಂತಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಾವಯವ ತಂಡದ ಮುಖ್ಯಸ್ಥ ನಂದೀಶ ನೆಲ್ಲಿಕೊಪ್ಪ, ದೇಶದ ಕೃಷಿಕರು ಪರಾವಲಂಬಿಗಳಾಗದೆ ಭೂಮಿ ಫಲವತ್ತತೆ ಹಾಳು ಮಾಡಿಕೊಳ್ಳದೇ ಸರ್ವ ರೀತಿಯಿಂದ ಸುಭಿಕ್ಷವಾಗಿರಬೇಕಾದಲ್ಲಿ ಸಾವಯವ ಕೃಷಿಯೊಂದೇ ಅಂತಿಮ ಸತ್ಯ. ಈ ಹಿನ್ನೆಲೆಯಲ್ಲಿ ಸಂಘವು ಗ್ರಾಮಕ್ಕೊಂದು ದೇಶಿ ತಳಿಯ ಬೀಜ ಬ್ಯಾಂಕ್ ಸ್ಥಾಪಿಸುವ ಗುರಿ ಹೊಂದಿದೆ ಎಂದರು.
ಕಾರ್ಯಕ್ರಮದಲ್ಲಿ ಅರುಣೋದಯ ಸಂಸ್ಥೆ ನಿರ್ದೇಶಕ ಗೋಪಿ ಬೂದಿಗೌಡ್ರ, ಅಶೋಕ ಶೆಟ್ಟರ್ ಕಾಗಿನೆಲೆ ಹೋಬಳಿ ಕೃಷಿ ಅಧಿಕಾರಿ ನಿಂಗಪ್ಪ ಕಳ್ಳೇರ, ಸಾವಯವ ಕೃಷಿಕ ಶಾಂತಪ್ಪ ಉಪ್ಪುಣಸಿ, ಜಯಶೀಲಪ್ಪ ಗೂಳೇರ, ಬಸವರಾಜ ನೆಲ್ಲಿಕೊಪ್ಪ, ಶಿದ್ರಾಮಪ್ಪ ಪಾಟೀಲ ಬಸವಂತಪ್ಪ ದೊಡ್ಡಗೌಡ್ರ ಇತರರು ಉಪಸ್ಥಿತರಿದ್ದರು.
ಗಣೇಶ ಪೂಜಾರ ಸ್ವಾಗತಿಸಿದರು. ಪ್ರಿಯಾಂಕ ಮಡ್ಲೂರು ನಿರೂಪಿಸಿದರು.