ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಶ್ಯಾಡಗುಪ್ಪಿ: ಕರಿಯಮ್ಮದೇವಿ ಜಾತ್ರೆ ಇಂದಿನಿಂದ

Srinivasa Murthy VN
Updated On : 24 Mar 2014, 11:10 am

ಹಾನಗಲ್ಲ:  ತಾಲೂಕಿನ ಶ್ಯಾಡಗುಪ್ಪಿ ಗ್ರಾಮದಲ್ಲಿ ಕರಿಯಮ್ಮ (ಗ್ರಾಮದೇವಿ) ಜಾತ್ರೆ ಮಾ. 24 ರಿಂದ ಪ್ರಾರಂಭಗೊಂಡು ಐದು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ. ಮಾ. 24 ರಂದು ಸೋಮವಾರ ಬಸವೇಶ್ವರ ರಥೋತ್ಸವ, 25ರಂದು ಗ್ರಾಮದೇವಿಗೆ ಉಡಿ ತುಂಬುವ ಕಾರ್ಯಕ್ರಮ, ರಾತ್ರಿ 9 ರಿಂದ ಬೆಳಗ್ಗೆ 4 ಗಂಟೆಯವರೆಗೆ ನಡೆಯಲಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷ ನಾಗೇಶ ಪಡೆಪ್ಪನವರ ತಿಳಿಸಿದರು. ಶನಿವಾರ ದೇವಸ್ಥಾನದಲ್ಲಿ ಜಾತ್ರಾ ನಿಮಿತ್ತ ಮಹಾ ಮಂಟಪದ ಸಿದ್ಧತಾಕಾರ್ಯ ಗ್ರಾಮಸ್ಥರಿಂದ ಭರದಿಂದ ಸಾಗಿತು. ಜಾತ್ರೆಯ ಸಿದ್ಧತೆಯಲ್ಲಿ ಗ್ರಾಮಸ್ಥರಾದ ವಿರೇಶ ಪಡೆಪ್ಪನವರ, ಕೆಂಚನಗೌಡ್ರ ಪಾಟೀಲ, ಗುಡ್ಡಪ್ಪ ಪೂಜಾರ, ಮೂಕಪ್ಪ ಪಡೆಪ್ಪನವರ, ಶಾಂತಪ್ಪ ಮರುಡೆಣ್ಣನವರ, ಶಿವನಗೌಡ್ರ ಪಾಟೀಲ, ಮೂಕಪ್ಪ ತಳವಾರ, ನಾಗನಗೌಡ ಪಾಟೀಲ, ನಾಗಪ್ಪ ಪಿಳ್ಳಿಕಟ್ಟಿ, ರಾಜು ಮಲಗುಂದ, ಮಂಜುನಾಥ ತಳವಾರ, ಪುಟ್ಟಪ್ಪ ಬಾರ್ಕಿ, ಮಹಲಿಂಗಪ್ಪ ಬಾರ್ಕಿ, ಮಲ್ಲೇಶಪ್ಪ ಪಡೆಪ್ಪನವರ, ಮಂಜುನಾಥಗೌಡ ಗಡಿಯಣ್ಣನವರ, ನಾಗಪ್ಪ ವರ್ಜಣ್ಣನವರ, ಪ್ರಕಾಶಗೌಡ ಪಾಟೀಲ, ಚಂದ್ರಗೌಡ ಪಾಟೀಲ, ನಾಗರಾಜ ಹರಿಜನ ಮುಂತಾದವರು ಪಾಲ್ಗೊಂಡಿದ್ದರು.

ಇಂದಿನಿಂದ ಕಲ್ಮೇಶ್ವರ ಜಾತ್ರಾಮಹೋತ್ಸವ
ಬ್ಯಾಡಗಿ:  ತಾಲೂಕಿನ ಕಲ್ಲೆದೇವರು ಗ್ರಾಮದ ಕಲ್ಮೇಶ್ವರ ದೇವರ ಜಾತ್ರಾಮಹೋತ್ಸವ ಮಾ. 24ರಿಂದ ಮೂರು ದಿನಗಳವರೆಗೆ ನಡೆಯಲಿದೆ. ಕೂಡಲದ ಗುರುನಂಜೇಶ್ವರ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಕಾರ್ಯಕ್ರಮಗಳು ಜರುಗಲಿದ್ದು, ಸೋಮವಾರ ಮುಂಜಾನೆ ರುದ್ರಾಭಿಷೇಕ, ಕಂಕಣ ಕಟ್ಟುವುದು, ಗ್ರಾಮದ ಎಲ್ಲ ದೇವರಿಗೆ ಪೂಜೆ ಸಲ್ಲಿಸಲಾಗುವುದು. ಬಳಿಕ ರಾತ್ರಿ 10 ಗಂಟೆಗೆ ಹೂವಿನ ತೇರು ಜರುಗಲಿದೆ.  ಮಾ. 25ರಂದು ರಾತ್ರಿ 10 ಗಂಟೆಗೆ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಕಲ್ಮೇಶ್ವರ ದೇವರ ಮಹಾರಥೋತ್ಸವ ಅಹೋರಾತ್ರಿ ಸಕಲ ವಾದ್ಯ ವೈಭವಗಳೊಂದಿಗೆ ಹಾಗೂ ಪುರವಂತರ ಒಡಪುಗಳೊಂದಿಗೆ ನಡೆಯಲಿದೆ. ಕಲ್ಮೇಶ್ವರ ಮತ್ತು ವಾಲ್ಮೀಕಿ ಭಜನಾ ಮಂಡಳಿಯಿಂದ ಭಜನೆಗಳು, ಡೊಳ್ಳಿನ ಮೇಳ, ಕೋಲಾಟ ವಿಶೇಷ ಆಕರ್ಷಣೆ ನೀಡಲಿವೆ. ಮಾ. 26 ರಂದು ಓಕುಳಿ ಹಾಗೂ ಬೆಲ್ಲದ ಬಂಡಿ ಮಜಲು ಜರುಗಲಿದೆ. ಭಕ್ತರು ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನ ಸಮಿತಿ ಅಧ್ಯಕ್ಷ ಶಂಭಣ್ಣ ದಾನಪ್ಪನವರ, ಕಾರ್ಯದರ್ಶಿ ಎಸ್.ಬಿ. ಹಿರೇಮಠ ಕೋರಿದ್ದಾರೆ.

ನರೇಗಲ್ಲ: ನಮ್ಮೂರ ಜಾತ್ರೆ, ಪುಣ್ಯಸ್ಮರಣೋತ್ಸವ
ಹಾವೇರಿ: ಹಾನಗಲ್ಲ ತಾಲೂಕು ನರೇಗಲ್‌ನ ಮಲ್ಲಿಕಾರ್ಜುನ ಸ್ವಾಮಿ ವಿರಕ್ತಮಠದ ಜಾತ್ರಾ ಮಹೋತ್ಸವ ನಮ್ಮೂರ ಜಾತ್ರೆ ಭಾನುವಾರದಿಂದ ಆರಂಭಗೊಂಡಿದ್ದು, 13 ದಿನಗಳ ಕಾಲ ಪುರಾಣ, ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ. ಶಾಂತವೀರ ಪಟ್ಟಾಧ್ಯಕ್ಷರ ಪುಣ್ಯಸ್ಮರಣೋತ್ಸವ ಹಾಗೂ ನೂತನ ಮಹಾರಥೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ನಿಂಗಪ್ಪ ಅಗಡಿ ತಿಳಿಸಿದರು. ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ರಾ ಕಾರ್ಯಕ್ರಮಗಳ ಕುರಿತು ಅವರು ಮಾಹಿತಿ ನೀಡಿದರು. ತೋಂಟದ ಡಾ. ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶ್ರೀಕುಮಾರ ಶಿವಯೋಗಿಗಳ 84ನೇ ಹಾಗೂ ಶಾಂತವೀರ ಪಟ್ಟಾಧ್ಯಕ್ಷರ 34ನೇ ಪುಣ್ಯಸ್ಮರಣೋತ್ಸವ, ಶ್ರೀಮಲ್ಲಿಕಾರ್ಜುನ ಶಿವಯೋಗಿಗಳ ನೂತನ ಮಹಾರಥೋತ್ಸವ ನಡೆಯಲಿದೆ. ಪ್ರತಿದಿನ ಮುಂಜಾನೆ ಮಲ್ಲಿಕಾರ್ಜುನಸ್ವಾಮಿ ಗದ್ದುಗೆಗೆ ವೇದಮೂರ್ತಿ ಕುಬೇರ ಶಾಸ್ತ್ರಿಗಳಿಂದ ರುದ್ರಾಭಿಷೇಕ, ಬಿಲ್ವಾರ್ಚನೆ ನಡೆಯಲಿದೆ. ಪ್ರತಿದಿನ ರಾತ್ರಿ 8 ಗಂಟೆಗೆ ಶ್ರೀಕುಮಾರ ಶಿವಯೋಗಿ ಕುರಿತ ಪುರಾಣ ಪ್ರವಚನ ನಡೆಯಲಿದ್ದು, ಬಸವರಾಜ ಶಾಸ್ತ್ರಿ ಶೀಲವಂತ ನಡೆಸಿಕೊಡುವರು. ಹೋತನಹಳ್ಳಿ ಶಂಭುಲಿಂಗ ಪಟ್ಟಾಧ್ಯಕ್ಷರು ಹಾಗೂ ಕೂಡಲ ಗುರುನಂಜೇಶ್ವರ ಮಠದ ಮಹೇಶದೇವರು ಸಾನ್ನಿಧ್ಯ ವಹಿಸುವರು.
ಸಾಂಸ್ಕೃತಿಕ ಕಾರ್ಯಕ್ರಮ: ಮಾ. 29 ಹಾಗೂ 30ರಂದು ರಾತ್ರಿ 9 ಗಂಟೆಗೆ ಎಸ್.ಎಸ್.ಪಿ.ಎಸ್. ಪ್ರೌಢಶಾಲೆ ಮಕ್ಕಳಿಂದ ನೀರಿಗಾಗಿ ಧ್ವನಿ ಎತ್ತಿರಿ ಅರ್ಥಾತ್ ಜಲ ಸಹಕಾರ ಮತ್ತು ಸಕಾಲ ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿವೆ. ಮಾ. 31ರಂದು ಬೆಳಗ್ಗೆ 8 ಗಂಟೆಗೆ ಕೂಡಲದ ಗುರುನಂಜೇಶ್ವರ ಸ್ವಾಮೀಜಿಯವರಿಂದ ನಂದಿ ಧ್ವಜಾರೋಹಣ ನಡೆಯಲಿದೆ. ಏ. 1ರಂದು ಬೆಳಗ್ಗೆ ನೂತನ ರಥದ ವಾಸ್ತುಶಾಂತಿ ಹಾಗೂ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 10 ಗಂಟೆಗೆ ಹಾವೇರಿ ಜೆಸಿಐ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಅಡ್ಡಪಲ್ಲಕ್ಕಿ: ಏ. 3ರಂದು ಶಂಭುಲಿಂಗ ಪಟ್ಟಾಧ್ಯಕ್ಷರ ಸಾನ್ನಿಧ್ಯದಲ್ಲಿ ಪುಷ್ಪಗಳಿಂದ ಅಲಂಕರಿಸಿದ ಅಡ್ಡಪಲ್ಲಕ್ಕಿಯಲ್ಲಿ ಹಾನಗಲ್ಲ ಕುಮಾರ ಶಿವಯೋಗಿಗಳು ಹಾಗೂ ಸಿಂಧಗಿ ಶಾಂತವೀರ ಪಟ್ಟಾಧ್ಯಕ್ಷರ ರೂಪ ಚಿತ್ರಗಳ ಮೆರವಣಿಗೆಯು ವಿವಿಧ ವಾದ್ಯ ವೈಭವದೊಂದಿಗೆ ನಡೆಯಲಿದೆ. ಏ. 4ರಂದು ಮಧ್ಯಾಹ್ನ 12 ಗಂಟೆಗೆ ಸಾಮೂಹಿಕ ವಿವಾಹ, ಸಂಜೆ 4 ಗಂಟೆಗೆ ಶ್ರೀಮಲ್ಲಿಕಾರ್ಜುನ ಶ್ರೀಗಳ ನೂತನ ರಥೋತ್ಸವ ತೋಂಟದ ಡಾ. ಸಿದ್ಧಲಿಂಗ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ನಡೆಯಲಿದೆ. ಬಳಿಕ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ, ಜಾತ್ರೆಗೆ ಸಹಕರಿಸಿದ ಗಣ್ಯರಿಗೆ ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದರು. ಜಾತ್ರಾ ಮಹೋತ್ಸವ ಸಮಿತಿ ಸದಸ್ಯರಾದ ತಿರುಕಪ್ಪ ಗೋದಿ, ನಿಂಗಪ್ಪ ಬಾಗವಾನ, ಸಂಗಮೇಶ ಕಮಡೋಳಿ, ಕರಸಬಪ್ಪ ಬಾಗವಾನ ಇದ್ದರು.

ವಸತಿ ಶಾಲೆ ಪರೀಕ್ಷೆ
ಹಿರೇಕೆರೂರು: ಪಟ್ಟಣದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಗೆ 2014-15ನೇ ಸಾಲಿಗಾಗಿ ಪ್ರವೇಶ ಪರೀಕ್ಷೆ ಭಾನುವಾರ ಸುಸೂತ್ರವಾಗಿ ಜರುಗಿದವು. ಪರೀಕ್ಷೆ ಬರೆಯಲು ಪ್ರವೇಶ ಪಡೆದ 1181 ವಿದ್ಯಾರ್ಥಿಗಳಲ್ಲಿ 16 ವಿದ್ಯಾರ್ಥಿಗಳು ಗೈರು ಉಳಿದಿದ್ದರು. ಒಟ್ಟು 1165 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಪಟ್ಟಣದ ವಿದ್ಯಾಸಂಸ್ಥೆಯ 5 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಏರ್ಪಡಿಸಲಾಗಿತ್ತು. ಸಿಇಎಸ್ ಪ್ರೌಢಶಾಲೆ, ಡಿಆರ್‌ಟಿ ಬಾಲಕರ ಪ್ರೌಢಶಾಲೆ, ತರಳಬಾಳು ಜಗದ್ಗುರು ಬಿಇಡಿ ವಿದ್ಯಾಲಯ, ನಾರಾಯಣಜಿ ಖಾನಜಿ ಪ್ರಾಥಮಿಕ ಶಾಲೆ, ಬಿಆರ್‌ಟಿ ಪ್ರಥಮ ದರ್ಜೆ ಮಹಾವಿದ್ಯಾಲಯಗಳಲ್ಲಿ ಪರೀಕ್ಷೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಪರೀಕ್ಷಾ ಉಸ್ತುವಾರಿಯನ್ನು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಹೊರಪೇಟ ಮಲ್ಲೇಶಪ್ಪ, ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ ಉಪನ್ಯಾಸಕರಾದ ವೈ.ಬಿ. ಹುಚ್ಚಣ್ಣನವರ, ಎಸ್.ವೈ. ಅಂತರವಳ್ಳಿ, ಪರೀಕ್ಷಾ ಕೇಂದ್ರಗಳ ಅಧೀಕ್ಷಕರಾಗಿ ಸಿ.ಆರ್. ಹುಲ್ಲತ್ತಿ, ಆರ್.ಕೆ. ಲಮಾಣಿ, ಮಾರುತೆಪ್ಪ, ಕೆ.ಜಿ. ಯಲಿವಾಲ, ಆರ್.ಐ. ಹಲಗೇರಿ ಪರೀಕ್ಷಾ ಕಾರ್ಯವನ್ನು ಯಶಸ್ವಿಗೊಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement