ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸಂಘ ಸಂಸ್ಥೆಗಳು ದೂರದೃಷ್ಟಿಯಿಂದ ಕಾರ್ಯನಿರ್ವಹಿಸಲಿ

Srinivasa Murthy VN
Updated On : 24 Mar 2014, 11:10 am

ಕನ್ನಡಪ್ರಭ ವಾರ್ತೆ, ಹಾನಗಲ್ಲ, ಮಾ. 23
ಸಶಕ್ತ, ಶೋಷಣೆ ಮುಕ್ತ ಸಮಾಜ ನಿರ್ಮಾಣದ ಕನಸನ್ನು ನನಸಾಗಿಸಲು ದೂರ ದೃಷ್ಟಿಯಿಂದ ಸಂಘ ಸಂಸ್ಥೆಗಳು ಕರ್ತವ್ಯ ನಿರ್ವಹಿಸುವ ಅಗತ್ಯವಿದ್ದು,  ಸ್ತ್ರೀಶಕ್ತಿ ಸಂಘ ಹಾಗೂ ಮಹಿಳಾ ಸಂಘಟನೆಗಳು ಮುಂದಿನ ಪೀಳಿಗೆಗೆ ಉತ್ತಮ ಸಂಸ್ಕಾರ ನೀಡುವುದಕ್ಕಾಗಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮಾರುತಿ ಶಿಡ್ಲಾಪುರ ಹೇಳಿದರು.
ಹಾನಗಲ್ಲಿನಲ್ಲಿ ಸ್ನೇಹಾ ಮಹಿಳಾ ಸಮಾಜದ 21ನೇ ವಾರ್ಷಿಕೋತ್ಸವ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜ ಸೇವೆಯಲ್ಲಿ ಕ್ರಿಯಾಶೀಲತೆ ಮೈಗೂಡಿಸಿಕೊಂಡಾಗ ಆರೋಪಗಳು ಅನಿವಾರ್ಯ. ಸಮಾಜ ಸೇವೆ ಲಾಭಾಪೇಕ್ಷೆ ಇಲ್ಲದ್ದು. ಆದಾಗ್ಯೂ ಸಂಘಟನೆಗಳ ಬಗೆಗೆ ಬರುವ ಟೀಕೆ ಟಿಪ್ಪಣೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ಸಂಘಟನೆ ಗುರಿ ತಲುಪಬೇಕಾಗುತ್ತದೆ. ಜಗತ್ತು ಜಾಗತೀಕರಣ, ಉದಾರೀಕರಣದ ನೆಲೆಯಲ್ಲಿ ನಿಂತಿರುವಾಗ ಸಂಪ್ರದಾಯಗಳು ಫಲ ನೀಡವು ಎಂಬ ಚರ್ಚೆ ನಡೆಯುತ್ತಿದ್ದರೂ, ಸಂಪ್ರದಾಯಗಳೇ ಸಾಮಾಜಿಕ ಸ್ವಾಸ್ಥ್ಯ ಕಾಪಾಡಬಲ್ಲವು ಎಂಬುವುದು ಎಲ್ಲರ ಅರಿವಿನಲ್ಲಿದೆ.
ಭಾರತ ಸಾಂಸ್ಕೃತಿಕ ಸಿರಿ ನಾಡು. ಇಲ್ಲಿನ ಬದುಕು ಇಡೀ ಜಗತ್ತಿಗೆ ಮಾದರಿ. ಆದರೆ, ಭಾರತೀಯ ಬದುಕಿನ ರೀತಿ ನೀತಿಗಳನ್ನು ಪಾಶ್ಚಾತ್ಯರು ಅನುಸರಿಸುತ್ತಿದ್ದರೂ ನಾವೇ ನಮ್ಮ ಸಂಸ್ಕೃತಿಯಿಂದ ದೂರ ಉಳಿಯುವ ಸಂದರ್ಭಗಳು ಆಘಾತಕಾರಿಯಾದವು. ಎಲ್ಲದಕ್ಕೂ ಪರರನ್ನು ಹೊಣೆ ಮಾಡಿ ಕೈ ಕಟ್ಟಿ ಕುಳಿತುಕೊಳ್ಳುವ ಕಾಲ ಇದಲ್ಲ. ಸಂಘಟಿತವಾಗಿ ಬದುಕನ್ನು ಸಮಚಿತ್ತದಿಂದ ಕಟ್ಟಿಕೊಳ್ಳದಿದ್ದರೆ ಸಾಮಾಜಿಕ ದೌರ್ಬಲ್ಯಗಳು ಇಡೀ ವ್ಯವಸ್ಥೆಯನ್ನೇ ದ್ವಂಸಗೊಳಿಸುವ ಪರಿಸ್ಥಿತಿ ಎದುರಾದೀತು ಎಂದು ಎಚ್ಚರಿಸಿದರು.
ನಮ್ಮ ಜನಪದ ಬದುಕು ಪುನರುತ್ಥಾನಗೊಂಡರೆ ಮತ್ತೊಮ್ಮೆ ಭಾರತ ಜಗತ್ತಿಗೆ ಜಗದ್ಗುರುವಾಗಬಲ್ಲದು. ಇದರಲ್ಲಿ ನಮ್ಮ ಭಾರತೀಯ ನಾರಿಯ ಜವಾಬ್ದಾರಿಯೇ ಅತ್ಯಂತ ಪ್ರಮುಖ ಎಂದರು.
ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಸ್ನೇಹಾ ಮಹಿಳಾ ಸಮಾಜದ ಅಧ್ಯಕ್ಷೆ ಮಧುಮತಿ ಪೂಜಾರ, ಮಹಿಳೆ ತನ್ನ ಹಕ್ಕಿಗಾಗಿ ಹೋರಾಟ ಮಾಡುವುದು ಅನಿವಾರ್ಯವೇ ಆಗಿದೆ. ಭಾರತೀಯ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಅವಿಸ್ಮರಣೀಯ ಸೇವೆ ಸಲ್ಲಿಸಿದ್ದಾರೆ.
ಪುರಾಣ ಕಾಲದಿಂದಲೂ ಮಹಿಳೆ ಪುರುಷನಿಗೆ ಸಮನಾಗಿ ಎಲ್ಲ ಕ್ಷೇತ್ರಗಳಲ್ಲೂ ದುಡಿದಿದ್ದಾಳೆ. ಆದರೆ, ಅದಕ್ಕನುಗುಣವಾಗಿ ಮಹಿಳೆಗೆ ಸಮಾಜದಲ್ಲಿ ಸಮಾನತೆ ಸಿಗುತ್ತಿಲ್ಲ. ಇಂತಹ ಸಾಮಾಜಿಕ ಅಸಮಾನತೆಯ ನಡುವೆಯೂ ಭ್ರೂಣ ಹತ್ಯೆಯಂತಹ ದುಷ್ಕೃತ್ಯಗಳಿಗೆ ಮಹಿಳೆಯೇ ಸಹಕರಿಸಿ ಹೆಣ್ಣಿಗೆ ಹೆಣ್ಣೇ ಶತ್ರುವಾಗುತ್ತಿರುವುದು ದುರಂತ. ಹೆಣ್ಣನ್ನು ತಿರಸ್ಕರಿಸುವುದರಿಂದ ಆಗುವ ಅಪಾಯಗಳಿಗೆ ಇಡೀ ಸಮಾಜ ಬೆಲೆ ತೆತ್ತಬೇಕಾದೀತು. ಮಹಿಳೆ ಪುರುಷ ಎಂಬ ಭೇದದಿಂದ ದೇಶ ಹೊರ ಬಂದಾಗ ಮಾತ್ರ ಉತ್ತಮ ಸಮಾಜದ ಕಲ್ಪನೆ ನನಸಾಗಬಲ್ಲದು ಎಂದರು.
ಅತಿಥಿಗಳಾಗಿ ರಾಣಿಬೆನ್ನೂರಿನ ಕಸ್ತೂರವ್ವ ಪಾಟೀಲ, ಸಾಹಿತಿ ಗಿರಿಜಾ ದುರ್ಗದಮಠ, ಭ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾಲಯದ ಬಿ.ಕೆ. ಶೈಲಾ, ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ಅನಿತಾ ಶಿವೂರ ಉಪಸ್ಥಿತರಿದ್ದರು. ರಾಧಿಕಾ ಪರಾಂಡೆ ಸ್ವಾಗತಿಸಿದರು. ಅಂಜನಾ ಕಲಾಲ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement