ಜನರ ವಿಶ್ವಾಸ ಗಳಿಸಿದ ಯುಪಿಎ
ಕನ್ನಡಪ್ರಭ ವಾರ್ತೆ ಶಿರಹಟ್ಟಿ ಮಾ. 24
ಯುಪಿಎ ನೇತೃತ್ವದ ಕೇಂದ್ರ ಸರ್ಕಾರ ದೇಶದ ಬಡ ಜನತೆಗೆ ಸಾಕಷ್ಟು ಯೋಜನೆಗಳನ್ನು ತಂದಿದ್ದು, ಪಕ್ಷ ಜನರ ವಿಶ್ವಾಸ ಗಳಿಸಿದೆ ಎಂದು ಮಾಜಿ ಶಾಸಕ ಡಿ.ಆರ್. ಪಾಟೀಲ ಹೇಳಿದರು.
ತಾಲೂಕಿನ ಬೆಳ್ಳಟ್ಟಿ ಗ್ರಾಮದ ಶಿವನಗೌಡ ಪಾಟೀಲ ಅವರ ತೋಟದಲ್ಲಿ ಸೋಮವಾರ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಜ್ಯ ಸರ್ಕಾರ ಕೂಡ ಇದೇ ರೀತಿ ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಅನೇಕ ಹೊಸ ಯೋಜನೆಗಳನ್ನು ನೀಡಿ ನುಡಿದಂತೆ ನಡೆದಿದೆ. ಪಕ್ಷ ಯಾರಿಗಾದರೂ ಟಿಕೆಟ್ ನೀಡಲಿ, ನಿಷ್ಠೆಯಿಂದ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಬಿಜೆಪಿ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ್ದು, ಆ ಪಕ್ಷದ ಕೆಲ ನಾಯಕರಲ್ಲಿಯೇ ಗೊಂದಲಗಳಿವೆ. ರಾಜ್ಯದಲ್ಲಿ ಮೋದಿ ಹವಾ ಇಲ್ಲ. ಪತ್ರಿಕೆಗಳು ಮತ್ತು ಟಿವಿ ವಾಹಿನಿಯವರು ಇತಿಹಾಸದ ಬಗ್ಗೆ ಸಂಪೂರ್ಣ ತಿಳಿದುಕೊಳ್ಳದೇ ಸುಳ್ಳು ವರದಿಗಳನ್ನು ಬಿತ್ತರಿಸುತ್ತಿವೆ ಎಂದರು.
2002ರ ಗುಜರಾತ್ ನರಮೇಧ ಮೆಲಕು ಹಾಕಿದ ಅವರು, ಈ ಗಲಭೆಯನ್ನು ನಿಯಂತ್ರಿಸದ ಮೋದಿ ಎಷ್ಟೋ ಜನ ಅಮಾಯಕರ ಜೀವದ ಜತೆ ಚೆಲ್ಲಾಟವಾಡಿದರು. ಅಂಥವರು ನಮ್ಮ ದೇಶದ ಪ್ರಧಾನಮಂತ್ರಿಯಾದರೆ ದೇಶದ ಸ್ಥಿತಿ ಎಲ್ಲಿಗೆ ಬರುತ್ತದೆ ಎಂದು ಯೋಚಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಗಡ್ಡದ್ದೇವರಮಠ ಮಾತನಾಡಿ, ಕೇಂದ್ರದಲ್ಲಿ ಮನಮೋಹನ ಸಿಂಗ್ ನೇತೃತ್ವದ ಯುಪಿಎ ಸರ್ಕಾರ 10 ವರ್ಷಗಳಲ್ಲಿ ಉತ್ತಮ ಸಾಧನೆ ಮಾಡಿದೆ. ಈ ಹಿಂದೆ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಅಧಿಕಾರ ಹಿಡಿದಿದ್ದ ಬಿಜೆಪಿ, ರಾಜ್ಯದ ಆರು ಕೋಟಿ ಜನರ ಕಣ್ಣಿಗೆ ಮಣ್ಣೆರಚಿದ್ದಲ್ಲದೇ ತತ್ವ, ಸಿದ್ಧಾಂತ ಹಾಗೂ ನೈತಿಕತೆಯನ್ನು ಸಂಪೂರ್ಣ ಕಳೆದುಕೊಂಡಿದ್ದರಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಕಾರಣವಾಯಿತು ಎಂದರು.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿವಿಧ ಅಪರಾಧಗಳಲ್ಲಿ ಸಿಲುಕಿಹಾಕಿಕೊಂಡು 24 ದಿನ ಜೈಲು ಸೇರಿದ್ದರು. ಅವರಿಗೆ ಜಾಮೀನು ಸಿಕ್ಕ ತಕ್ಷಣ ಅವರನ್ನು ಹಾರ, ತುರಾಯಿ ಹಾಗೂ ಪಟಾಕಿ ಸಿಡಿಸಿ ಕಾರ್ಯಕರ್ತರು, ಮುಖಂಡರು ನಡೆದುಕೊಂಡ ವರ್ತನೆ ತಲೆ ತಗ್ಗಿಸುವಂತಾಗಿತ್ತು. ಅವರೇ ಮತ್ತೆ ಮೋದಿಯವರನ್ನು ಪ್ರಧಾನಮಂತ್ರಿ ಮಾಡಲು ಬಿಜೆಪಿ ಸೇರಿ ಮತ್ತೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದು, ಜನ ತಕ್ಕ ಪಾಠ ಕಲಿಸಲಿದ್ದಾರೆ. ಜೊಳ್ಳು, ಸುಳ್ಳು ಆಶ್ವಾಸನೆ ನೀಡುವ ಜತೆಗೆ ಸಾವಿರಾರು ಕೋಟಿ ರು. ಹಣ ವ್ಯಯ ಮಾಡುತ್ತಾ ನರೇಂದ್ರ ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಲು ಹೊರಟಿರುವವರಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಶಾಸಕ ರಾಮಕೃಷ್ಣ ದೊಡ್ಡಮನಿ, ಯು.ಎನ್. ಹೊಳಲಾಪುರ, ವಾಸಣ್ಣ ಕುರಡಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಡಿ. ಪಾಟೀಲ, ವೀರಣ್ಣ ಅಂಗಡಿ, ಹೇಮಂತಗೌಡ್ರ ಪಾಟೀಲ, ವೈ.ಎಸ್. ಪಾಟೀಲ, ಶಿವನಗೌಡ ಪಾಟೀಲ, ಎಚ್.ಡಿ. ಮಾಗಡಿ, ಚನ್ನಪ್ಪ ಜಗಲಿ, ಕೋಟೆಪ್ಪ ವರ್ದಿ, ಬಸಣ್ಣ ಬೆಟಗೇರಿ, ಎನ್.ಎನ್. ಗೋಕಾವಿ, ಜಯಕ್ಕ ಕಳ್ಳಿ, ಎನ್.ಜಿ. ಹೊಂಬಳ, ಬಿ.ಎಸ್. ಮುಂಡವಾಡ, ಭೀಮಸಿಂಗ್ ರಾಠೋಡ, ಎಸ್.ಪಿ.ಬಳಿಗಾರ, ಪಿ.ವಿ. ಪರಬ, ಮಂಜು ಘಂಟಿ, ಪಿ.ಎಂ. ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹಲವರು ಬಿಜೆಪಿ, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.