ದೇಶಕ್ಕೆ ಸಾಂಸ್ಕೃತಿಕ ಹಿನ್ನೆಲೆ ಮುಖ್ಯ: ರವಿ ವಡೆಯರ
ಹಾನಗಲ್ಲ: ಒಂದು ದೇಶ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಬಲಿಷ್ಠವಾಗುವ ಅಗತ್ಯತೆ ಇದ್ದು, ರಾಜಕೀಯವಾಗಿಯೂ ಸದೃಢತೆ ಬೇಕೆ ಬೇಕು ಎಂದು ನ್ಯಾಯವಾದಿಗಳ ಸಂಘದ ಅಧ್ಯಕ್ಷ ರವಿ ವಡೆಯರ ಅಭಿಪ್ರಾಯ ಪಟ್ಟರು. ತಾಲೂಕಿನ ಬೈಚವಳ್ಳಿಯಲ್ಲಿ ಹಾನಗಲ್ಲಿನ ಶ್ರೀ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದಲ್ಲಿ ಮಾತನಾಡಿದರು. ಸಂವಿಧಾನ ಬದ್ಧವಾದ ನಡವಳಿಕೆ ನಮ್ಮವಾಗಿರಬೇಕು. ಜನಪ್ರತಿನಿಧಿಗಳು ಪಕ್ಷಬೇಧ ಮರೆತು ರಾಷ್ಟ್ರದ ಅಭಿವೃದ್ಧಿ, ಏಕತೆಗೆ ಶ್ರಮಿಸಬೇಕು. ಬದಲಾದ ಕಾಲಕ್ಕೆ ರಾಷ್ಟ್ರೀಯ ಹಿತಾಸಕ್ತಿಗಳನ್ನು ಬದಲಿಸಿಕೊಳ್ಳಬೇಕು. ರಾಷ್ಟ್ರ ಮುನ್ನಡೆಸುವ ನಾಳಿನ ಪ್ರಜೆಗಳಾದ ಇಂದಿನ ಯುವಕರಿಗೆ ಸರಿಯಾದ ಮಾರ್ಗದರ್ಶನ ನೀಡುವ ಅಗತ್ಯವಿದ್ದು ಯುವಶಕ್ತಿ ಪೋಲಾಗಬಾರದು ಎಂದರು. ಸಾಹಿತಿ ವಿಜಯಕಾಂತ ಪಾಟೀಲ, ವೈಚಾರಿಕತೆಯಿಂದ ಸಾಮಾಜಿಕ ರಾಷ್ಟ್ರೀಯ ಚಿಂತನೆಗೆ ಪುಷ್ಠಿ ದೊರೆಯುತ್ತದೆ. ನಾಳಿನ ಭಾರತದ ವೈಭವಕ್ಕೆ ಚ್ಯುತಿ ಬರದಂತೆ ಇಂದು ಜಾಗೃತವಾಗಬೇಕಾಗಿದೆ ಎಂದು ಎಚ್ಚರಿಸಿದರು. ಅಧ್ಯಕ್ಷತೆ ವಹಿಸಿ ಶ್ರೀ ಕುಮಾರೇಶ್ವರ ಕಲಾ ವಾಣಿಜ್ಯ ಮಹಾವಿದ್ಯಾಲಯದ ಉಪನ್ಯಾಸಕ ಪ್ರೊ. ಪಿ.ಎನ್. ಜೋಶಿ ಮಾತನಾಡಿದರು. ಸಾಹಿತಿ ಮಾರುತಿ ಶಿಡ್ಲಾಪುರ, ಕಲಾವಿದ ರವಿ ಲಕ್ಷ್ಮೇಶ್ವರ, ಅರ್ಬನ್ ಬ್ಯಾಂಕ್ ನಿರ್ದೇಶಕ ಗಿರೀಶ ದೇಶಪಾಂಡೆ, ಉಪನ್ಯಾಸಕರಾದ ನಾಗರಾಜ ಹಾವನೂರ, ಬಿ.ಎಚ್. ರಾಘವೇಂದ್ರ, ಸಿ. ಮಂಜುನಾಥ, ವಿ.ಎಲ್. ಪಾಟೀಲ, ಪಿ.ಎಫ್. ಪುರಾಣಮಠ, ಸಂತೋಷ ಗೌಡರ, ಐ.ಜಿ. ಹಿರೇಮಠ, ರಾಜಕುಮಾರ ಹಿತ್ಲೇರ, ಲಿಂಗರಾಜ ಗೌಳಿ ಪಾಲ್ಗೊಂಡಿದ್ದರು. ವಿದ್ಯಾ ಚೌಹಾಣ ಸ್ವಾಗತಿಸಿದರು. ಎನ್ಎಸ್ಎಸ್ ಅಧಿಕಾರಿ ಡಾ. ಪ್ರಕಾಶ ಹೊಳೇರ ಪ್ರಸ್ತಾವಿಕ ಮಾತುಗಳನ್ನಾಡಿದರು. ಕೀರ್ತಿ ಬಂಕಾಪುರ ನಿರೂಪಿಸಿದರು. ನಂದಿನಿ ದೊಡ್ಡಮನಿ ವಂದಿಸಿದರು.