ವಿದ್ಯಾರ್ಥಿಗಳು, ತಾಪಂ ನೌಕರರಿಂದ ಮತದಾನ ಪ್ರಮಾಣ ವಚನ
ರಾಣಿಬೆನ್ನೂರು: ಪ್ರಜಾಪ್ರಭುತ್ವದಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪ್ರಜೆಗಳಾದ ನಾವು ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳ ಮತ್ತು ಮುಕ್ತ ನ್ಯಾಯಸಮ್ಮತ ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆ ಎಂದು ತಾಲೂಕಾ ಬಿಸಿಎಂ ಮತ್ತು ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ವಿದ್ಯಾರ್ಥಿಗಳು ಹಾಗೂ ತಾಲೂಕಾ ಪಂಚಾಯತ ನೌಕರರು ಪ್ರಮಾಣ ವಚನ ಸ್ವೀಕರಿಸಿದರು. ತಾಲೂಕು ಆಡಳಿತ, ತಾಪಂ, ತಾಲೂಕು ಬಿಸಿಎಂ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಆಶ್ರಯದಲ್ಲಿ ನಗರದ ತಾಪಂ ಸಭಾಭವನದಲ್ಲಿ ಏರ್ಪಡಿಸಿದ್ದ ಮತದಾನ ಜಾಗೃತಿ ಹಾಗೂ ಪ್ರತಿಜ್ಞಾ ವಿಧಿ ಬೊಧನಾ ಕಾರ್ಯಕ್ರಮದಲ್ಲಿ ತಾಲೂಕು ಬಿಸಿಎಂ ವಿಸ್ತರಣಾಧಿಕಾರಿ ಜಿ.ಬಿ. ಬಾರಕೇರ ಮಾತನಾಡಿ, ಪ್ರಪಂಚದಲ್ಲಿನ ಎಲ್ಲ ದೇಶದವರಿಗೂ ಮಾದರಿಯಾಗಿರುವ ಹಾಗೂ ಪ್ರಜಾಪ್ರಭುತ್ವದಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪೌರರಾದ ನಾವೆಲ್ಲರು ತಪ್ಪದೆ ಮತದಾನದಲ್ಲಿ ತೋಡಗೋಣ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಕೆ. ಕೃಷ್ಣಮೂರ್ತಿ, ತಾಲೂಕು ನೀತಿ ಸಂಹಿತೆ ನೋಡಲ್ ಅಧಿಕಾರಿ ಎಚ್. ಹುಲಿರಾಜ, ನಗರಸಭೆ ಪೌರಾಯುಕ್ತ ಅಶ್ವಿನಿ ಬಿ.ಎಂ., ತಾಲೂಕು ಸಮಾಜ ಕಲ್ಯಾಣಾಧಿಕಾರಿ ವೈ. ಮಂಜುನಾಥ, ತಾಲೂಕು ಪಂಚಾಯಿತಿ ವ್ಯವಸ್ಧಾಪಕ ಬಸವರಾಜ ಶಿಡೆನೂರು ಕಾರ್ಯಕ್ರಮದ ಕುರಿತು ಮಾತನಾಡಿದರು. ನಿಲಯ ಮೇಲ್ವಿಚಾರಕ ಪ್ರಸಾದ ಆಲದಕಟ್ಟಿ, ಸಿ.ಬಿ. ಪ್ರಸಾದಿಮಠ, ವೈ.ಐ. ಕೊರವರ, ಎಸ್.ಕೆ. ಹಾವನೂರು, ಎಂ.ಕೆ. ಮಂಜುನಾಥ, ಡಿ.ವೈ. ದೊಡ್ಮನಿ, ಬಿ.ಐ. ಯರೆಸಿಮಿ, ಬಿ.ಎಂ. ಯಮ್ಮೇರ, ಸುಮಲತಾ ಎಸ್.ಪಿ., ಹಾಗೂ 150 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಚುನಾವಣೆ: 8 ನಾಮಪತ್ರ ಸಲ್ಲಿಕೆ
ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಐದನೇ ದಿನವಾದ ಸೋಮವಾರ 7 ಅಭ್ಯರ್ಥಿಗಳಿಂದ 8 ನಾಮಪತ್ರಗಳು ಸಲ್ಲಿಕೆಯಾಗಿವೆ. ಬಿಜೆಪಿಯಿಂದ ಶಿವಕುಮಾರ ಉದಾಸಿ 2 ನಾಮಪತ್ರ ಸಲ್ಲಿಸಿದ್ದಾರೆ. ಹಾವೇರಿಯ ಮಂಜುನಾಥ ತಿರಕಪ್ಪ ಬಿಷ್ಣಣ್ಣನವರ ಕಾಂಗ್ರೆಸ್ನಿಂದ, ರವಿ ಬಸವಣ್ಣೆಪ್ಪ ಮೆಣಸಿನಕಾಯಿ ಅವರು ಜೆಡಿಎಸ್ನಿಂದ, ಜಗದೀಶ ಮಲ್ಲೇಶಪ್ಪ ಯಲಿಗಾರ, ಮೆಹಬೂಬಖಾನ ಪಠಾಣ, ಶಿವಕುಮಾರ ಚಾಕರಿ ಮತ್ತು ವೀರಭದ್ರಪ್ಪ ಕಬ್ಬಿಣದ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎಂ. ಮಂಜುನಾಥ ನಾಯಕ ಅವರು ತಿಳಿಸಿದ್ದಾರೆ. ಈವರೆಗೆ ಒಟ್ಟು 11 ಅಭ್ಯರ್ಥಿಗಳಿಂದ 15 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಅವರು ತಿಳಿಸಿದ್ದಾರೆ.
ಹಾವೇರಿ: ಜೆಡಿಎಸ್ ಅಭ್ಯರ್ಥಿ ರವಿ ಮೆಣಸಿಕಾಯಿ ಆಸ್ತಿ ರು. 1.22 ಕೋಟಿ
ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ರವಿ ಮೆಣಸಿನಕಾಯಿ ಅವರ ಸ್ಥಿರ ಹಾಗೂ ಚರಾಸ್ತಿ ಮೌಲ್ಯ ರು. 1.22 ಕೋಟಿ ಎಂದು ಸೋಮವಾರ ನಾಮಪತ್ರದೊಂದಿಗೆ ಸಲ್ಲಿಸಿರುವ ಅಫಿಡೆವಿಟ್ನ ಆಸ್ತಿ ವಿವರದಲ್ಲಿ ಅವರು ಘೋಷಿಸಿಕೊಂಡಿದ್ದಾರೆ. ರವಿ ಮೆಣಸಿನಕಾಯಿ ಅವರಲ್ಲಿ ರು. 1 ಲಕ್ಷ ನಗದು, ರು. 53.51 ಲಕ್ಷ ಮೌಲ್ಯದ ಚರಾಸ್ತಿ ಹಾಗೂ ರು. 89 ಲಕ್ಷ ಮೌಲ್ಯದ ಸ್ಥಿರಾಸ್ತಿ ಸೇರಿದಂತೆ ಒಟ್ಟು ರು. 1,22,51,000 ಆಸ್ತಿ ಹೊಂದಿದ್ದಾರೆ. ಅಲ್ಲದೇ ರು. 22.60 ಲಕ್ಷ ಸಾಲ ಹೊಂದಿರುವುದಾಗಿ ತಿಳಿಸಿದ್ದಾರೆ. ಇವರ ಪತ್ನಿ ಶರ್ಮಿಳಾ ಹೆಸರಿನಲ್ಲಿ ರು. 44.56 ಲಕ್ಷ ಮೌಲ್ಯದ ಚರಾಸ್ತಿ ಹಾಗೂ ರು. 15 ಲಕ್ಷ ಮೌಲ್ಯದ ಸ್ಥಿರಾಸ್ತಿ ಇದೆ. ಮಗ ಅಕ್ಷಯ ಹೆಸರಿನಲ್ಲಿ ರು. 12.99 ಲಕ್ಷ ಮೌಲ್ಯದ ಚರಾಸ್ತಿಯಿದೆ ಎಂದು ಅವರು ಘೋಷಿಸಿಕೊಂಡಿದ್ದಾರೆ.
ಮತದಾನ ಜಾಗೃತಿ
ಬ್ಯಾಡಗಿ: ಪಟ್ಟಣದಲ್ಲಿ ಸೋಮವಾರ ಎಸ್ಎಸ್ಪಿಎನ್ ಪ್ರೌಢಶಾಲೆಯ ವಿದ್ಯಾರ್ಥಿ, ವಿಧ್ಯಾರ್ಥಿನಿಯರು ಮತದಾರರ ಜಾಗೃತಿ ಜಾಥಾ ನಡೆಸಿದರು. ಪಟ್ಟಣದ ಮುಖ್ಯರಸ್ತೆ, ಹಳೆ ಮೆಣಸಿಕಾಯಿ ಪೇಟೆ ಮುಂತಾದ ರಸ್ತೆಗಳಲ್ಲಿ ಜಾಥಾ ನಡೆಸಿ ಮತದಾರರಲ್ಲಿ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಪ್ರೌಢಶಾಲೆಯ ಉಪಪ್ರಾಚಾರ್ಯ ಎಂ.ಕೆ. ಹೊಸಮನಿ, ಎಂ.ವಿ. ನೆಲವಿಗಿ, ವೆಂಕಟೇಶ, ಪಿ.ಎಫ್. ಕರಿಯಣ್ಣನವರ, ಡಿ.ಎನ್. ಸವಿತಾ, ಸುಲೋಚನಾ ಶಹಾಪುರ ಜಾಥಾದಲ್ಲಿ ಪಾಲ್ಗೊಂಡಿದ್ದರು.
ಪ್ರತಿಜ್ಞಾವಿಧಿ ಬೋಧನೆ
ರಾಣಿಬೆನ್ನೂರು: ತಾಲೂಕು ಪಂಚಾಯಿತಿ, ತಾಲೂಕಾಡಳಿತ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ರಾಣಿಬೆನ್ನೂರು ಹಾಗೂ ಗ್ರಾಮ ಪಂಚಾಯಿತಿ ಉಕ್ಕುಂದ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉಕ್ಕುಂದ ಆಶ್ರಯದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮತದಾನ ಜಾಗೃತಿಗಾಗಿ ಜಾಥಾ ನಡೆಯಿತು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ.ಡಿ. ಗೊಂದಿ ಮತದಾರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಮುಖ್ಯ ಶಿಕ್ಷಕ ಹಂಚಿನಗೌಡ್ರ, ಗ್ರಾಪಂ ಕಾರ್ಯದರ್ಶಿ ತಿರುಕಪ್ಪ ಇದ್ದರು.
ವಿಷ ಸೇವಿಸಿ ಆತ್ಮಹತ್ಯೆ
ಗುತ್ತಲ: ಸಮೀಪದ ನೆಗಳೂರು ಗ್ರಾಮದ ಹನುಮಂತಪ್ಪ ನೀಲಪ್ಪ ಮಡಿವಾಳರ (50) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ. ಎಂದಿನಂತೆ ಹನುಮಂತಪ್ಪ ರಾತ್ರಿ ಹೊತ್ತು ಊಟ ಮಾಡಿಕೊಂಡು ಮನೆ ಮುಂದೆ ಮಲಗಿದ್ದರು. ಬೆಳಗಿನ ಜಾವ ಆತನ ಹೆಂಡತಿ ಅಕ್ಕವ್ವ ಎಬ್ಬಿಸಲಿಕ್ಕೆ ಹೋದಾಗ ಮೃತಪಟ್ಟಿರುವುದು ಕಂಡು ಬಂದಿದೆ. ಹನುಮಂತಪ್ಪ ರಾತ್ರಿ ಮದ್ಯಪಾನದಲ್ಲಿ ವಿಷ ಬೇರೆಸಿ ಕುಡಿದಿರಬಹುದು ಎಂದು ಶಂಕಿಸಲಾಗಿದೆ. ಮೃತನಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಈ ಕುರಿತಂತೆ ಮೃತನ ಹೆಂಡತಿ ಅಕ್ಕವ್ವ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.