ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಳಪೆ ಹತ್ತಿ ಬೀಜದ ಪರಿಹಾರ ಹಣಕ್ಕೆ ನೀತಿ ಸಂಹಿತೆ ಬೇಡ

Srinivasa Murthy VN
Updated On : 26 Mar 2014, 12:06 pm

ಬ್ಯಾಡಗಿ:   ಕೃಷಿಕನಿಗೆ ತಲುಪಬೇಕಾಗಿರುವ ಕಳಪೆ ಹತ್ತಿ ಬೀಜದ ಪರಿಹಾರದ ಮೊತ್ತವನ್ನು ನೀತಿ ಸಂಹಿತೆಗೆ ಪರಿಗಣಿಸದಿರುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತು ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷಿಕನಿಗೆ ನೀಡುವ ಪರಿಹಾರ ಆತನಿಗಾಗಿರುವ ನಷ್ಟಕ್ಕೆ ಸರ್ಕಾರ ವ್ಯತಿರಿಕ್ತವಾಗಿ ನೀಡುವಂತಹ ಹಣ ಇದಾಗಿದೆ. ಹೀಗಾಗಿ ಮತದಾರರನ್ನು ಆಮಿಷಕ್ಕೊಳಪಡಿಸುವಂತಹ ಸಂದರ್ಭಗಳು ಎದುರಾಗುವುದಿಲ್ಲ ಎಂದರು.
ಕಳಪೆ ಹತ್ತಿ ಬೀಜದಿಂದ ರೈತರು ಈಗಾಗಲೇ ಕಂಗೆಟ್ಟಿದ್ದಾರೆ. ಆದರೆ ಮುಂಗಾರು ಹಂಗಾಮು ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು, ಬೀಜ ಗೊಬ್ಬರ ಸೇರಿದಂತೆ ಇನ್ನಿತರ ಕೃಷಿ ಚಟುವಟಿಕೆ ಪ್ರಾರಂಭಿಸಲು ಪರಿಹಾರದ ಹಣ ಅನುಕೂಲವಾಗಲಿದೆ ಎಂದರು. ಪರಿಹಾರದ ಮೊತ್ತ ಪಡೆಯಲು ಕನಿಷ್ಠ ಎರಡು ತಿಂಗಳು ಅಂದರೆ ಪ್ರಸಕ್ತ ಸಾಲಿನ ಆಗಸ್ಟ್‌ವರೆಗೂ ಕಾಯಬೇಕಾಗುತ್ತದೆ. ಕೂಡಲೇ ಚುನಾವಣೆ ಆಯೋಗ ಪರಿಶೀಲನೆ ನಡೆಸಿ ಕೃಷಿಕರಿಗೆ ಪರಿಹಾರದ ಮೊತ್ತ ನೀಡಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಿದರು. ಗಂಗಣ್ಣ ಎಲಿ ಮಾತನಾಡಿ, ಕೃಷಿಕರ ನಷ್ಟಕ್ಕೆ ಪರ್ಯಾಯವಾಗಿ ನೀಡುವ ಪರಿಹಾರದ ಮೊತ್ತ ಮತದಾರರ ಆಮಿಷ ಎಂದು ಚುನಾವಣೆ ಆಯೋಗ ಪರಿಗಣಿಸುವುದಾದರೆ ಈಗಾಗಲೇ ಸರ್ಕಾರ ಘೋಷಿಸಿರುವ ಪಡಿತರ ಆಹಾರ ಧಾನ್ಯ, ಸಿಲಿಂಡರ್ ಮೇಲಿನ ಸಹಾಯಧನ, ಹೆರಿಗೆ ಭತ್ಯೆ ಸೇರಿದಂತೆ ಇನ್ನಿತರ ಜನಪ್ರಿಯ ಯೋಜನೆಗಳ ಹೆಸರಿನಲ್ಲಿ ನೀಡಲಾಗುತ್ತಿರುವ ಸಹಾಯಧನವೂ ಮತದಾರರಿಗೆ ಆಮಿಷವಾಗುವುದಿಲ್ಲವೇ? ಎಂದು ಪ್ರಶ್ನಿಸಿದರು.
ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಇತ್ತೀಚೆಗೆ ಸರ್ಕಾರದ ಒಂದಿಲ್ಲೊಂದು ಸೌಲಭ್ಯಗಳು ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ಲಭ್ಯವಾಗಿದ್ದು, ಇದರಲ್ಲಿ ಸರ್ಕಾರದ ಜನಪ್ರಿಯ ಯೋಜನೆಗಳೂ ಸೇರಿವೆ. ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ಕಳಪೆ ಹತ್ತಿ ಬೀಜದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು ಕೂಡಲೇ ಪರಿಹಾರದ ಮೊತ್ತವನ್ನು ಬಿಡುಗಡೆ ಮಾಡಲು ಚುನಾವಣಾ ಆಯೋಗ ಅನುಮತಿ ನೀಡುವಂತೆ ಆಗ್ರಹಿಸಿದರು.
ರುದ್ರಗೌಡ ಕಾಡನಗೌಡ್ರ, ಚಿಕ್ಕಪ್ಪ ಛತ್ರದ, ಬಸವರಾಜ ಸಂಕಣ್ಣನವರ, ಮಲಕಪ್ಪ ಹಾದರಗೇರಿ, ಪ್ರಶಾಂತ ಹಾಲನಗೌಡ್ರ, ಶಶಿಧರಸ್ವಾಮಿ ಛತ್ರದಮಠ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಮತದಾನ ಜಾಗೃತಿ ಜಾಥಾ
ರಾಣಿಬೆನ್ನೂರು:  ತಾಲೂಕಿನ ಸುಣಕಲ್ಲಬಿದರಿ ಗ್ರಾಪಂ ವ್ಯಾಪ್ತಿಯಲ್ಲಿನ  ಸರ್ಕಾರಿ ಮಾದರಿ ಕೇಂದ್ರ ಶಾಲೆ, ಪಶು ಆಸ್ಪತ್ರೆ, ಅಂಗನವಾಡಿ ಕೇಂದ್ರ, ಸಾಕ್ಷರತಾ ಪ್ರೇರಕರು, ಆಶಾ ಕಾರ್ಯಕರ್ತೆಯರು, ಮಂಗಳವಾರ ಸುಣಕಲ್ಲಬಿದರಿಯ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ, ಮತದಾರರಲ್ಲಿ ಜಾಗೃತಿ ಮೂಡಿಸಿದರು. ಗ್ರಾಪಂ ಪಿಡಿಒ ಕೆ.ಬಿ. ನಾಗರಾಜ, ಬಿ.ಎನ್. ರಾಟಿ, ಸಿ.ಎಚ್. ಯಮ್ಮೆರ, ರಾಜೇಂದ್ರ. ಸಿ ಬಿ, ಮರಿಬಸಪ್ಪನವರ, ಜಯಮ್ಮ ಉರಗಿ, ಶುಶಿಲಾ ಸಂಗಾಪುರ, ಪಿ..ಸಿದ್ದಪ್ಪ, ಪಶು ವೈದ್ಯಾಧಿಕಾರಿ ನಿಂಗಪ್ಪ, ದೈಹಿಕ ಶಿಕ್ಷಣ ಶಿಕ್ಷಕ ಕನಗೌಡ್ರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement