ರೈತರಿಗೆ ಬ್ಯಾಂಕಿನಿಂದ ನೋಟಿಸ್: ಅಧಿಕಾರಿಗಳ ಕ್ರಮಕ್ಕೆ ಕಿಡಿ
ಬ್ಯಾಡಗಿ: ರೈತರು ಕಳ್ಳರಲ್ಲ, ಪಡೆದ ಸಾಲ ತೀರಿಸದೇ ಜವಾಬ್ದಾರಿ ಹಿಂದೆ ಸರಿಯುವುದೂ ಇಲ್ಲ. ಆದರೆ, ವಾಸ್ತವ ಸಂಗತಿ ಅರಿತು ಅಧಿಕಾರಿಗಳು ನಡೆದುಕೊಳ್ಳುವಂತೆ ಕುಮ್ಮೂರಿನ ರೈತ ಮುಖಂಡ ತಿರಕಪ್ಪ ಬಾಸೂರ ಸಾಲ ತೀರುವಳಿ ಕುರಿತು ವಕೀಲರಿಂದ ನೋಟಿಸ್ ನೀಡುತ್ತಿರುವ ಪಿಎಎಲ್ಡಿ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಈ ಕುರಿತು ಮಂಗಳವಾರ ಬ್ಯಾಂಕಿನ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದ ಮಾತನಾಡಿದ ಅವರು, ಕಳೆದ 4 ವರ್ಷಗಳಿಂದ ರೈತರು ಅತಿವೃಷ್ಟಿ, ಅನಾವೃಷ್ಟಿ ಬೆಲೆ ಕುಸಿತ ಸೇರಿದಂತೆ ಒಂದಿಲ್ಲೊಂದು ಕಾರಣಕ್ಕೆ ಕೈಸುಟ್ಟುಕೊಳ್ಳುತ್ತಾ ಬಂದಿದ್ದಾರೆ. ಇದನ್ನರಿತ ಸರ್ಕಾರ ಕೂಡ ಜಿಲ್ಲೆಯ ಬಹುತೇಕ ತಾಲೂಕುಗಳನ್ನು ಬರಗಾಲ ಪೀಡಿತವೆಂದು ಘೋಷಿಸಿದೆ. ಹೀಗಿರುವಾಗ ನೋಟಿಸ್ ನೀಡುವ ಮೂಲಕ ಬೆದರಿಕೆ ತಂತ್ರ ಒಡ್ಡುತ್ತಿರುವ ಬ್ಯಾಂಕಿನ ಅಧಿಕಾರಿಗಳ ಕ್ರಮ ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಬಿಟಿ ಕಂಪನಿಗಳು ಕಳಪೆ ಬೀಜ ಮಾರಾಟ ಮಾಡಿದ್ದರಿಂದ ತಾಲೂಕಿನ ಬಹುತೇಕ ರೈತರು ವರ್ಷದ ಗಂಜಿಯನ್ನು ಕಳೆದುಕೊಂಡಿದ್ದಾರೆ. ಕೃಷಿಭೂಮಿಯಲ್ಲಿ ದಿನವಿಡೀ ಕೆಲಸ ಮಾಡಿ ದೇಶಕ್ಕೆ ಅನ್ನಹಾಕಬೇಕಿದ್ದ ರೈತರು ಸರ್ಕಾರದ ಬೇಜಬ್ದಾರಿ ವರ್ತನೆಯಿಂದಾಗಿ ಬೀದಿಗಿಳಿದು ಹೋರಾಟ ಮಾಡಬೇಕಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕೃಷಿಕರು ಇಂತಹ ನೋಟಿಸ್ಗಳಿಗೆ ಜಗ್ಗುವ ಪ್ರಶ್ನೆಯೇ ಇಲ್ಲ ಎಂದರು. ಸಾಲ ತೀರಿಸಲಾಗದೇ ರಾಜ್ಯದಲ್ಲಿ ಸುಮಾರು 55 ಸಾವಿರಕ್ಕೂ ಹೆಚ್ಚು ಹಾಗೂ ದೇಶದಲ್ಲಿ 3 ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೃಷಿ ಪ್ರಧಾನ ಭಾರತದಲ್ಲಿಯೇ ಕೃಷಿಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಸರ್ಕಾರಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದ್ದು, ಕೂಡಲೇ ಬ್ಯಾಂಕಿನ ಅಧಿಕಾರಿಗಳು ನೋಟಿಸ್ ನೀಡುತ್ತಿರುವುದನ್ನು ಸ್ಥಗಿತಗೊಳಿಸಬೇಕು. ಅಲ್ಲದೇ ರೈತರ ಸಭೆ ಕರೆದು ಸಾಲ ತೀರುವಳಿ ಬಗ್ಗೆ ಯಾವ ಕ್ರಮಗಳನ್ನು ಜರುಗಿಸಿದರೇ ಸೂಕ್ತ ಎಂಬುದನ್ನು ಚರ್ಚಿಸುವಂತೆ ಆಗ್ರಹಿಸಿದ ಅವರು, ಇಲ್ಲದಿದ್ದರೆ ಬ್ಯಾಂಕಿನ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ನಾಗಪ್ಪ ಹಿರೇಹಳ್ಳಿ, ಕುಮಾರ ತಳವಾರ, ಸೋಮಶೇಖರ ಬಾಸೂರ, ಕರಿಯಪ್ಪ ಪುಟ್ಟನಗೌಡ್ರ, ಶಂಕರಗೌಡ ಪುಟ್ಟನಗೌಡ್ರ, ಷಣ್ಮುಕಪ್ಪ ತೋಟದ, ದಾನಪ್ಪಗೌಡ ತೋಟದ, ಅಶೋಕ ದ್ಯಾಮಣ್ಣನವರ, ವೀರನಗೌಡ ಚೂರಿ, ಕಲ್ಲಪ್ಪ ರೊಡ್ಡಮ್ಮನವರ, ವೀರನಗೌಡ ತೋಟದ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ರಂಗೋಲಿ ಸ್ಪರ್ಧೆಯಲ್ಲಿ ಶ್ರುತಿ ಪ್ರಥಮ
ಹಾವೇರಿ: ಶಿಗ್ಗಾಂವ ತಾಲೂಕಿನ ಗೊಟಗೋಡಿಯ ಜಾನಪದ ವಿಶ್ವವಿದ್ಯಾಲಯದ ವಿಸ್ತರಣೆ ಹಾಗೂ ಸಲಹಾ ಕೇಂದ್ರದ ವತಿಯಿಂದ ಆಯೋಜಿಸಿದ ಸಾಂಪ್ರದಾಯಿಕ ರಂಗೋಲಿ ಸ್ಪರ್ಧೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬಿಎ ದ್ವಿತೀಯ ವಿದ್ಯಾರ್ಥಿನಿ ಶ್ರುತಿ ರಾಯ್ಕರ ಭಾಗವಹಿಸಿ, ಪ್ರಥಮ ಬಹುಮಾನ ರು. 5000 ಹಾಗೂ ಪ್ರಶಸ್ತಿ ಪತ್ರ ಪಡೆದಿದ್ದಾರೆ. ಈ ವಿದ್ಯಾರ್ಥಿನಿಯನ್ನು ಮಹಾವಿದ್ಯಾಲಯದ ಆಡಳಿತ ಮಂಡಳಿಯವರು, ಪ್ರಾಚಾರ್ಯರು, ಬೋಧಕ ಹಾಗೂ ಬೋಧಕೇತರ ವರ್ಗದವರು ಅಭಿನಂದಿಸಿದ್ದಾರೆ.
ರಾಘವೇಂದ್ರ ಶ್ರೀಧರ ಕುಲಕರ್ಣಿ ನಿಧನ
ಶಿಗ್ಗಾಂವಿ: ಸಂಪೂರ್ಣ ಭಗವದ್ಗೀತ ಪಾಠ ಪ್ರವೀಣ, ಆಕಾಶವಾಣಿಯ ಅಂಧ ಕಲಾವಿದ ರಾಘವೇಂದ್ರ ಶ್ರೀಧರ ಕುಲಕರ್ಣಿ (38) ಪಟ್ಟಣದಲ್ಲಿ ನಿಧನರಾಗಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆಗೈದು ಹಿಂದುಸ್ಥಾನೀ ಸಂಗೀತ ಸೀನಿಯರ್ ಪರೀಕ್ಷೆಯಲ್ಲಿ ಹಾವೇರಿ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗಿದ್ದ ಕುಲಕರ್ಣಿಯವರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಗೀತ ಕಚೇರಿ ನಡೆಸಿ ಅನೇಕ ಪುರಸ್ಕಾರಗಳಿಗೆ ಭಾಜನರಾಗಿದ್ದರು. ಮೃತರು ತಂದೆ, ತಾಯಿ, ತಮ್ಮ ಮತ್ತು ಇಬ್ಬರು ಸೋದರಿಯರೂ ಸೇರಿದಂತೆ ಅಪಾರ ಶಿಷ್ಯಬಳಗ ಹೊಂದಿದ್ದರು. ಮೃತರ ನಿಧನಕ್ಕೆ ಸಂಸದ ಪ್ರಹ್ಲಾದ ಜೋಶಿ, ಶಾಸಕ ಬಸವರಾಜ ಬೊಮ್ಮಾಯಿ, ವಿಪ ಸದಸ್ಯ ಸೋಮಣ್ಣ ಬೇವಿನಮರದ, ತಾಲೂಕು ಬ್ರಾಹ್ಮಣ ಸಂಘ, ವಿಪ್ರ ಮಹಿಳಾ ವೇದಿಕೆಯ ಪದಾಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
ಅವಿಭಕ್ತ ಕುಟುಂಬಗಳಿಂದ ಉತ್ತಮ ಸಂಸ್ಕಾರ: ಪ್ರೊ. ಇಂದುಮತಿ ಜೋಶಿ
ಹಾನಗಲ್ಲ: ಅವಿಭಕ್ತ ಕುಟುಂಬಗಳು ನಾಳಿನ ಪೀಳಿಗೆಗೆ ಉತ್ತಮ ಸಂಸ್ಕಾರ ನೀಡುವ ಸಾಮರ್ಥ್ಯ ಹೊಂದಿದ್ದು, ಮಹಿಳೆ ಕಷ್ಟಸಹಿಷ್ಣುವಾಗಿ ಕುಟುಂಬದ ಹಿತಕ್ಕೆ ತನ್ನನ್ನು ಸಮರ್ಪಿಸಿಕೊಳ್ಳಬೇಕು ಎಂದು ಉಪನ್ಯಾಸಕಿ ಪ್ರೊ. ಇಂದುಮತಿ ಜೋಶಿ ಕರೆ ನೀಡಿದರು. ಹಾನಗಲ್ಲಿನ ಶಂಕರಮಠದಲ್ಲಿ ಹಾನಗಲ್ಲ ತಾಲೂಕು ವಿಪ್ರ ಮಹಿಳಾ ವೇದಿಕೆ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಮಹಿಳೆ ಪುರುಷ ಸಮಾನವಾಗಿ ದುಡಿಯುತ್ತಿದ್ದಾಳೆ. ಮಹಿಳೆಗೆ ಪುರುಷ ಶತ್ರುವಾಗಿಲ್ಲ. ಹೆಣ್ಣಿಗೆ ಹೆಣ್ಣೇ ಶತ್ರುವಾಗಿ ಸಾಮಾಜಿಕ ವ್ಯವಸ್ಥೆ ಹದಗೆಡುತ್ತಿದೆ ಎಂದರು.
ಮಹಿಳೆ ಮುಂಚೂಣಿ: ವಾಸಂತಿ ಪ್ರಭಾಕರ ನಾಯಕ, ಮಹಿಳೆ ಸಮಾಜದ ನೋವು ನಲಿವಿಗೆ ಸ್ಪಂದಿಸುವಂತಹವಳಾಗಿದ್ದಾಳೆ. ನಮ್ಮ ಸಂಸ್ಕೃತಿಯ ಅಳಿವು-ಉಳಿವು ಮುಖ್ಯವಾಗಿ ಮಹಿಳೆಯನ್ನೇ ಆಧರಿಸಿದೆ. ಎಲ್ಲ ಕಾಲಕ್ಕೂ ತಾಯಿಯ ಮಹತ್ವ ಹೆಚ್ಚುತ್ತಲೇ ಇದೆ. ಕೆಲವು ಸಂದರ್ಭಗಳಲ್ಲಿ ಮಹಿಳೆ ತಾಳ್ಮೆ, ಶಿಸ್ತನ್ನು ಅಳವಡಿಸಿಕೊಂಡು ಕೌಟುಂಬಿಕ, ಸಾಮಾಜಿಕ, ಸಾಮರಸ್ಯಕ್ಕೆ ಶ್ರಮಿಸಬೇಕಾಗುತ್ತದೆ. ವೈಜ್ಞಾನಿಕ ಯುಗದಲ್ಲಿ ಪುರುಷ ಸಮಾಜದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿರುವ ಮಹಿಳೆ ಸಾಂಸ್ಕೃತಿಕವಾಗಿಯೂ ಮುಂಚೂಣಿಯಲ್ಲಿದ್ದಾಳೆ ಎಂದರು. ವಿಪ್ರ ಮಹಿಳಾ ವೇದಿಕೆ ತಾಲೂಕು ಘಟಕದ ಅಧ್ಯಕ್ಷೆ, ನಿವೃತ್ತ ಪಾಚಾರ್ಯ ಲಲಿತಾ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ವಿಪ್ರ ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷೆ ಪಾರ್ವತಿಬಾಯಿ ಕಾಶೀಕರ, ತಾಲೂಕು ಘಟಕದ ಉಪಾಧ್ಯಕ್ಷೆ ಶುಭಾ ಜೋಶಿ ಇದ್ದರು. ವಿದ್ಯಾ ದೇಶಪಾಂಡೆ ನಿರೂಪಿಸಿದರು. ಮಾಲತಿಬಾಯಿ ದೇಶಪಾಂಡೆ ವಂದಿಸಿದರು.