ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸರ್ಕಾರದ ಸಾಧನೆಯೇ ಶ್ರೀರಕ್ಷೆ: ಸಲೀಂ ಅಹ್ಮದ್

Srinivasa Murthy VN
Updated On : 26 Mar 2014, 12:04 pm

ಹಾವೇರಿ: ಕಳೆದ ಎರಡು ಅವಧಿಯಲ್ಲಿ ಬಡವರು ಹಾಗೂ ದೇಶದ ಅಭಿವೃದ್ಧಿಗಾಗಿ ಯುಪಿಎ ಸರ್ಕಾರ ಹಾಗೂ ಕಳೆದ 10 ತಿಂಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿದ ಸಾಧನೆಗಳೇ ತಮಗೆ ಶ್ರೀರಕ್ಷೆಯಾಗಿದೆ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಂಗಳವಾರ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿ ಅವರು ಮಾತನಾಡಿದರು. ಕಳೆದ ಬಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಕಡಿಮೆ ಅಂತರದ ಮತಗಳಿಂದ ಸೋಲುವಂತಾಯಿತು. ಗೆದ್ದ ಅಭ್ಯರ್ಥಿ ಕಳೆದ 5 ವರ್ಷಗಳಲ್ಲಿ ಮಾಡಿದ ಸಾಧನೆಯೇನು ಎಂದು ಪ್ರಶ್ನಿಸಬೇಕಾಗಿದೆ. ಕೇವಲ ಸಂಸತ್ತಿನಲ್ಲಿ ಹಾಜರಿ ಇರುವುದು ಹಾಗೂ ಪ್ರಶ್ನೆ ಕೇಳುವುದೇ ದೊಡ್ಡ ಸಾಧನೆಯಲ್ಲ. ಕ್ಷೇತ್ರದ ಸಮಸ್ಯೆ ಬಗೆಹರಿಸಲು ಅವರು ಏನು ಮಾಡಿದ್ದಾರೆ ಎಂದು ಕಾರ್ಯಕರ್ತರು ಪ್ರಶ್ನಿಸಬೇಕು. ಯಾವ ಸಾಧನೆಯನ್ನೂ ಮಾಡದೇ ಈಗ ಯಾರದೋ ಭಾವಚಿತ್ರ ಹಿಡಿದುಕೊಂಡು ಮತ ಕೇಳುತ್ತಿದ್ದಾರೆ. ಈ ನಡುವೆ ಕಚ್ಚಾಡಿಕೊಂಡು ಬೇರೆ ಪಕ್ಷಕ್ಕೆ ಹೋಗಿ ಈಗ ಮತ್ತೆ ನಾವೆಲ್ಲ ಒಂದಾಗಿದ್ದೇವೆ ಎಂದು ಹೇಳುತ್ತ ಮತ ಕೇಳುತ್ತಿದ್ದಾರೆ. ಯಾವ ನೈತಿಕತೆ ಇಟ್ಟುಕೊಂಡು ನೀವು ಮತ ಕೇಳುತ್ತಿದ್ದೀರಿ ಎಂದು ಜನ ಕೇಳಬೇಕು ಎಂದರು. ಕಾಂಗ್ರೆಸ್ 120 ವರ್ಷಗಳ ಇತಿಹಾಸ ಹೊಂದಿರುವ ಪಕ್ಷವಾಗಿದೆ. ಪಕ್ಷ ತನ್ನದೇ ನೀತಿ, ಸಿದ್ಧಾಂತ, ವಿಚಾರಧಾರೆ ಹೊಂದಿದೆ. ಬಿಜೆಪಿ ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುವ ಪಕ್ಷವಾಗಿದೆ. ಅಣ್ಣ ತಮ್ಮಂದಿರಲ್ಲೇ ಕೋಮುವಾದ ಬಿತ್ತಿ ಲಾಭ ಪಡೆಯುವ ಪಕ್ಷ ಬಿಜೆಪಿ. ಯುಪಿಎ ಸರ್ಕಾರದ ಅವಧಿಯಲ್ಲಿ ದೀನ ದಲಿತರು, ಬಡವರ ಪರವಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಅವರ ನಾಯಕತ್ವದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ. ಆದ್ದರಿಂದ ರಾಜ್ಯದಲ್ಲಿ 20 ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲಲಿದ್ದು, ಕೇಂದ್ರದಲ್ಲಿ ಮತ್ತೆ ಯುಪಿಎ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ಒಂದೂವರೆ ವರ್ಷದಿಂದ ಕೇಂದ್ರ ಸರ್ಕಾರದ ನೆಹರು ಯುವ ಕೇಂದ್ರದ ಮಹಾನಿರ್ದೇಶಕನಾಗಿ ಯುವಕರಿಗಾಗಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದೇನೆ. ಮುಖ್ಯವಾಗಿ ಹಾವೇರಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಯುವಕರಲ್ಲಿ ಶಕ್ತಿ ತುಂಬುವ ಕಾರ್ಯ ಮಾಡಿದ್ದೇನೆ. ದೇಶದಲ್ಲಿ ಹಾವೇರಿಯನ್ನು ಮಾದರಿ ಕ್ಷೇತ್ರ ಮಾಡುವ ಗುರಿ ಹೊಂದಿದ್ದೇನೆ. ಆದ್ದರಿಂದ ನನ್ನ ಮೇಲೆ ಪಕ್ಷದ ಹಿರಿಯ ನಾಯಕರು ಭರವಸೆ ಇಟ್ಟು ಮತ್ತೊಮ್ಮೆ ಟಿಕೆಟ್ ನೀಡಿದ್ದಾರೆ. ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ. ಆದ್ದರಿಂದ ಎಲ್ಲ ಕಾರ್ಯಕರ್ತರು ತಾವೇ ಕ್ಷೇತ್ರದ ಅಭ್ಯರ್ಥಿ ಎಂದು ತಿಳಿದು ಹಗಲಿರುಳು ಶ್ರಮಿಸಬೇಕು. ಕಾರ್ಯಕರ್ತರು ಕೆಲಸ ಮಾಡಿದರೆ ನಮ್ಮನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ಬಾರಿ ಗೆಲುವುದು ಪಕ್ಷದ್ದೇ ಎಂದು ಭರವಸೆ ವ್ಯಕ್ತಪಡಿಸಿದರು. ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಈಗ ನಮಗೆ ಚುನಾವಣೆ ಎದುರಿಸಲು ಹೆಚ್ಚಿನ ಸಮಯವಿಲ್ಲ. ಆದ್ದರಿಂದ ಇಂದಿನಿಂದಲೇ ಕಾರ್ಯಕರ್ತರು ಅಭ್ಯರ್ಥಿ ಗೆಲುವಿಗಾಗಿ ಪ್ರಚಾರ ಕಾರ್ಯ ಆರಂಭಿಸಬೇಕು ಎಂದರು. ಹಾವೇರಿ ಶಾಸಕ ರುದ್ರಪ್ಪ ಲಮಾಣಿ, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾಡಿದ ಯೋಜನೆಗಳನ್ನು ತಿಳಿಸುವ ಮೂಲಕ ಕಾರ್ಯಕರ್ತರು ಪ್ರಚಾರ ಮಾಡಬೇಕು. ಒಗ್ಗಟ್ಟಿನಿಂದ ಅಭ್ಯರ್ಥಿ ಗೆಲ್ಲಿಸಬೇಕು ಎಂದು ಹೇಳಿದರು. ರಾಣಿಬೆನ್ನೂರು ಶಾಸಕ ಕೆ.ಬಿ. ಕೋಳಿವಾಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹಾನಗಲ್ಲ ಶಾಸಕ ಮನೋಹರ ತಹಶೀಲ್ದಾರ, ಮಾಜಿ ಶಾಸಕ ಬಿ.ಸಿ. ಪಾಟೀಲ ಇತರರು ಮಾತನಾಡಿದರು.

'ಕೌರವ' ಅಸಮಾಧಾನ
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಕರೆದ ಕಾರ್ಯಕರ್ತರ ಪ್ರಥಮ ಸಭೆಯಲ್ಲೇ ಮಾಜಿ ಶಾಸಕ ಬಿ.ಸಿ. ಪಾಟೀಲ ಪಕ್ಷದ ಜಿಲ್ಲಾಧ್ಯಕ್ಷರ ವಿರುದ್ಧ ಅಸಮಾಧಾನ ಹೊರಹಾಕಿದ ಘಟನೆ ನಡೆಯಿತು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ತಮ್ಮ ಸೋಲಿಗೆ ಕಾರಣರಾದವನ್ನು ಹಾಗೂ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡವರನ್ನು ಸ್ಥಳೀಯ ಮುಖಂಡರ ಗಮನಕ್ಕೂ ತಾರದೇ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಹಿರೇಕೆರೂರು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಅಭಿಪ್ರಾಯ ಕೇಳದೇ ಏಕಾಏಕಿ ಕೆಪಿಸಿಸಿ ಕಚೇರಿಯಲ್ಲಿ ಪಕ್ಷಕ್ಕೆ ಡಿ.ಎಂ. ಸಾಲಿ ಅವರನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. ಇಂಥ ಚಟುವಟಿಕೆಗಳೇ ನನ್ನ ಸೋಲಿಗೆ ಕಾರಣವಾದವು. ಇವು ಕಾಂಗ್ರೆಸ್ ಪಕ್ಷದ ನೀತಿಗಳೇ ಎಂದು ಎಂದು ಮನೋಹರ ತಹಶೀಲ್ದಾರ ವಿರುದ್ಧ ಹರಿಹಾಯ್ದರು.
ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಕಿಂಚತ್ತೂ ಮೋದಿ ಅಲೆ ಇಲ್ಲ. ಇಲ್ಲಿ ಬರೀ ಸಿದ್ದರಾಮಯ್ಯ ಅವರ ಅಲೆ ಇದೆ. ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಗೆಲುವು ಖಚಿತವಾಗಿದ್ದು, ಕಾರ್ಯಕರ್ತರು ಕಳೆದ ಬಾರಿಯ ಸೋಲಿನ ಸೇಡು ತೀರಿಸಿಕೊಳ್ಳಲು ಸನ್ನದ್ಧರಾಗಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement