ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸಾರಿಗೆ ಘಟಕದ ಲೋಪದೋಷ ಸರಿಪಡಿಸಿ

Srinivasa Murthy VN
Updated On : 26 Mar 2014, 12:06 pm

ಹಿರೇಕೆರೂರು:  ಹಿರೇಕೆರೂರು ಘಟಕದಲ್ಲಿರುವ ಸಾರಿಗೆ ವಾಹನಗಳ ಲೋಪದೋಷಗಳನ್ನು ಸರಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ತಾಲೂಕು ರೈತ ಸಂಘದ ಸದಸ್ಯರು ಹಿರೇಕೆರೂರು ಘಟಕ ವ್ಯವಸ್ಥಾಪಕರ ಮೂಲಕ ಹುಬ್ಬಳ್ಳಿ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ರೈತ ಸಂಘದ ತಾಲೂಕಾಧ್ಯಕ್ಷ ರಾಜಶೇಖರ ದೂದೀಹಳ್ಳಿ ಮಾತನಾಡಿ, ಹಿರೇಕೆರೂರು ಘಟಕವು ಹಲವಾರು ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸಿದ್ದು, ಇದೀಗ ವಿಭಾಗ ಮಟ್ಟದ ಅಧಿಕಾರಿಗಳಿಂದ ಹಾನಿ ಅನುಭವಿಸುತ್ತಿದ್ದು, ಇದಕ್ಕೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ನೇರ ಹೊಣೆಗಾರರಾಗಿದ್ದಾರೆ. ಏಕೆಂದರೆ, ಯಾವುದೇ ಮಾರ್ಗಗಳು ಆರಂಭವಾದ ಮೇಲೆ ಒಂದು ವಾಹನ ಆದಾಯ ತರಲು ಕನಿಷ್ಠ 3 ತಿಂಗಳಾದರೂ ಓಡಿಸಬೇಕು. ಆದರೆ, ಈ ಘಟಕದ ವ್ಯವಸ್ಥಾಪಕರು 2-3 ದಿನಗಳಲ್ಲಿ ಮಾರ್ಗ ಬದಲಾವಣೆ ಮಾಡುವುದು ಹಿರೇಕೆರೂರು-ಧರ್ಮಸ್ಥಳ, ಹಿರೇಕೆರೂರು-ವಾಸ್ಕೋ, ಹಿರೇಕೆರೂರು-ಸೊರಬ-ಬೆಂಗಳೂರು, ಕಾರ್ಗಲ್-ದಾವಣಗೆರೆ, ಶಿರಾಳಕೊಪ್ಪ-ಹಿರೇಕೆರೂರು ಮೊದಲಾದ ಮಾರ್ಗದಲ್ಲಿ ಬೆಳಗ್ಗೆ 8ಗಂಟೆ ನಂತರ ಉಳಿದ ಸಮಯದಲ್ಲಿ ಯಾವುದೇ ವಾಹನಗಳು ಓಡುತ್ತಿಲ್ಲ. ಈ ನ್ಯೂನತೆ ಸರಿಪಡಿಸಬೇಕು. ಪಟ್ಟಣದ ಸಾರಿಗೆ ಘಟಕದ ನಿಲ್ದಾಣದಲ್ಲಿ ಆಸನದ ವ್ಯವಸ್ಥೆ, ಕುಡಿಯುವ ನೀರು ಸೇರಿದಂತೆ ಮೂಲಸೌಲಭ್ಯ ಒದಗಿಸಬೇಕು.
ಹಿರೇಕೆರೂರು ಘಟಕದಲ್ಲಿರುವ ದುರಸ್ತಿ ವಾಹನಗಳನ್ನು ತೆಗೆದು ಹೊಸ ವಾಹನಗಳನ್ನು ನೀಡಬೇಕು.
2013ರ ಜೂನ್ 19ರಂದು ಶಿವಮೊಗ್ಗ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ನೀಡಿದ 110 ಪರ್ಮಿಟ್‌ಗಳಲ್ಲಿ ವಾಯವ್ಯ ಸಾರಿಗೆ ಸಂಸ್ಥೆಗೆ 32 ಮಾರ್ಗಗಳು ಮಂಜೂರಾಗಿದ್ದವು. ಆದರೆ, ಇದುವರೆಗೂ ಆ ಮಾರ್ಗಗಳಲ್ಲಿ ಬಸ್‌ಗಳನ್ನು ಓಡಿಸಿರುವುದಿಲ್ಲ. ತಕ್ಷಣ ಓಡಿಸಬೇಕು. ಹಿರೇಕೆರೂರು ಸೊರಬಕ್ಕೆ 4 ಬಾರಿ ಓಡಿಸಲು ಮನವಿ ಕೊಟ್ಟಿದ್ದರು. ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಡಬಲ್ ಡೋರ್ ವಾಹನಗಳನ್ನು ಒದಗಿಸಬೇಕು.
ಜಿಲ್ಲಾ ಕೇಂದ್ರವಾದ ಹಾವೇರಿಗೆ ದೈನಂದಿನ ಕೆಲಸ, ಕಾರ್ಯಗಳಿಗೆ ಹೋಗಿ ಬರಲು ಹಳೆಯ ವಾಹನಗಳಿದ್ದು, ಈ ಮಾರ್ಗಗಳಲ್ಲಿ ನೂತನ ಬಸ್ಸುಗಳನ್ನು ಓಡಿಸಬೇಕು. ರಾಷ್ಟ್ರೀಕೃತ ಮಾರ್ಗಗಳಲ್ಲಿ ವೇಗದೂತ ಹಾಗೂ ಸಾಮಾನ್ಯ ಬಸ್‌ಗಳಲ್ಲಿ ದರ ಪ್ರೋತ್ಸಾಹಕ ದರವೆಂದು ಒಂದೇ ದರ ನಿಗದಿಪಡಿಸಬೇಕು. ಹಿರೇಕೆರೂರು ಘಟಕದಿಂದ ಪವಿತ್ರ ಕ್ಷೇತ್ರವಾದ ಸಿಗಂಧೂರಗೆ ನೇರ ಬಸ್ ಸಂಚಾರ ಆರಂಭಿಸಬೇಕು.
ಈ ಕುರಿತ ಮನವಿಯನ್ನು ಘಟಕ ವ್ಯವಸ್ಥಾಪಕ ನಂಜುಂಡಸ್ವಾಮಿ ಮುಖಾಂತರ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರೈತ ಸಂಘದ ಕಾರ್ಯಕರ್ತರಾದ ಶಿವಯೋಗಿ ಕೆಂಚಳ್ಳಿ, ಶಿವನಗೌಡ ಪಾಟೀಲ, ಟಿ.ಕೆ. ಮೂಡಿ, ಬಸನಗೌಡ ದೊಡ್ಡಗೌಡ್ರ, ಭೀಮಪ್ಪ ನರೇಗೌಡ್ರ, ವೀರಪ್ಪ ಮಳವಳ್ಳಿ, ಪರಮೇಶಪ್ಪ ಕೆ, ಸುನೀಲ ಕೆಂಗಣ್ಣನವರ, ಸುರೇಶ ಕೊರವರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement