ಯುದ್ಧಕ್ಕೂ ಮುನ್ನ ಸಿಂಗ್ ಶರಣು: ಉದಾಸಿ
ಬ್ಯಾಡಗಿ: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಭಂಗ ಅನುಭವಿಸಲಿದೆ. ಪ್ರಧಾನಿ ಅಭ್ಯರ್ಥಿ ನಾನಲ್ಲ ಎಂದು ಹೇಳಿಕೆ ನೀಡುವ ಮೂಲಕ ಯುದ್ದಕ್ಕೂ ಮುನ್ನ ಶಸ್ತ್ರ ಕೆಳಗಿಳಿಸಿ ಮನಮೋಹನ ಸಿಂಗ್ ಶರಣಾಗಿದ್ದಾರೆ ಎಂದು ಮಾಜಿ ಸಚಿವ ಸಿ.ಎಂ. ಉದಾಸಿ ಲೇವಡಿ ಮಾಡಿದರು.
ತಾಲೂಕಿನ ಕಾಗಿನೆಲೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಲೆಏರಿಕೆ, ರೂಪಾಯಿ ಅಪಮೌಲ್ಯ, 2ಜಿ, ಕಲ್ಲಿದ್ದಲು, ಕಾಪ್ಟರ್ ಖರೀದಿ, ಕಾಮನ್‌ವೆಲ್ತ್, ಡಿಎಚ್‌ಎಲ್ ಸೇರಿದಂತೆ ರು. 8 ಲಕ್ಷ ಕೋಟಿ ಹಗರಣಗಳಲ್ಲಿ ಭಾಗಿಯಾಗಿರುವ ಯುಪಿಏ ಸರ್ಕಾರ ದೇಶದ ಜನತೆಗೆ ಉತ್ತರಿಸಲು ಹಿಂದೇಟು ಹಾಕುತ್ತಿದೆ.
ಇದಕ್ಕೆ ಹಿರಿಯ ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕಿದ್ದೇ ಇದಕ್ಕೆ ಕಾರಣವೆಂದರು.
ಮೋದಿ ಎಂದರೆ ಕಾಂಗ್ರೆಸ್‌ಗೆ ನಡುಕ: ಅಭಿವೃದ್ಧಿಯಲ್ಲಿ ದೇಶವನ್ನು 107 ಸ್ಥಾನಕ್ಕೆ ತಳ್ಳಿದ್ದೇ ಕಾಂಗ್ರೆಸ್‌ನ ಕಳೆದ 10 ವರ್ಷಗಳ ಸಾಧನೆ. ದೇಶದ ಜನತೆ ಸ್ವಾವಲಂಬಿಗಳಾದರೇ ನಿಮ್ಮನ್ನು ಕೈಬಿಡುವ ಭಯವಿದೇಯೇ? ಬಿಜೆಪಿಗೆ ತನ್ನದೇ ಆದ ಸಿದ್ಧಾಂತಗಳಿವೆ, ಮುಖಂಡರೊಬ್ಬರನ್ನು ಪಕ್ಷದ ಪ್ರಧಾನಿಯನ್ನಾಗಿ ಘೋಷಣೆ ಮಾಡುವುದು ಸಹಜ ಪ್ರಕ್ರಿಯೆ. ಇಂತಹ ಧೈರ್ಯ ಕಾಂಗ್ರೆಸ್‌ಗೇಕಿಲ್ಲ? ಸುಮಾರು 57 ವರ್ಷಗಳ ಕಾಲ ದೇಶವನ್ನಾಳಿದರೂ ಬಡತನ ಜೀವಂತವಾಗಿರಲು ಕಾರಣವಾಗಿರುವ ಕಾಂಗ್ರೆಸ್ ಬಡವರ ಪರ ಎಂದು ಹೇಳುವುದಕ್ಕೆ ನಾಚಿಕೆಯಾಗಬೇಕು ಎಂದರು.
ಮತ ಜಾಗೃತಿಗಾಗಿ ಮಾನವ ಸರಪಳಿ
ರೋಣ: ಮತದಾನ ಹೆಚ್ಚಳ ಮತ್ತು ಮತದಾನ ಪ್ರಕ್ರಿಯೆಯಲ್ಲಿ ಮತದಾರ ಕಡ್ಡಾಯವಾಗಿ ಪಾಲ್ಗೊಳ್ಳುವ ಕುರಿತು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ, ಸಿಇಒ ವೀರಣ್ಣ ತುರಮರಿ ನೇತೃತ್ವದಲ್ಲಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರು ಬುಧವಾರ ಪಟ್ಟಣದ ಭಾರತ ರತ್ನ ಡಾ. ಭೀಮಸೇನ ಜೋಶಿ ಸಾರ್ವಜನಿಕ ಆಸ್ಪತ್ರೆ ಹತ್ತಿರ ರಾಜ್ಯ ಹೆದ್ದಾರಿ ಮೇಲೆ ಮಾನವ ಸರಪಳಿ ನಿರ್ಮಿಸಿ ಜಾಗೃತಿ ಮೂಡಿಸಲಾಯಿತು.
ಈ ವೇಳೆ ನೂರಾರು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಅಂಗನವಾಡಿ ಮೇಲ್ವಿಚಾರಕರು, ಸಿಡಿಪಿಒ ಇಲಾಖೆ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.