ಸಲೀಂ ಅಹ್ಮದ್ ನಾಮಪತ್ರ ಸಲ್ಲಿಕೆ
ಹಾವೇರಿ: ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಅವರು ಬುಧವಾರ ಸಾವಿರಾರು ಕಾರ್ಯಕರ್ತರೊಂದಿಗೆ ನಗರದಲ್ಲಿ ರೋಡ್ ಶೋ ನಡೆಸಿ, ಪಕ್ಷದ ಹಿರಿಯ ನಾಯಕರೊಂದಿಗೆ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಿದ ಬಳಿಕ ನಗರದ ಕಾಂಗ್ರೆಸ್ ಕಚೇರಿಯಿಂದ ಮಾಗಾವಿ ಸಭಾಭವನದವರೆಗೆ ನಡೆದ ಮೆರವಣಿಗೆಯಲ್ಲಿ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡು ಜಯಕಾರ ಹಾಕಿದರು. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಹಾಗೂ ಮೆರವಣಿಗೆಯಲ್ಲಿ ಸಚಿವ ಎಚ್.ಕೆ. ಪಾಟೀಲ, ಮಾಜಿ ಸಚಿವೆ ರಾಣಿ ಸತೀಶ್, ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಬಿ.ಸಿ. ಪಾಟೀಲ, ಜಿ.ಎಸ್. ಗಡ್ಡದೇವರಮಠ, ಮಾಜಿ ಸಂಸದ ಐ.ಜಿ. ಸನದಿ, ಶಾಸಕರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣವರ, ಕೆ.ಬಿ. ಕೋಳಿವಾಡ, ಮನೋಹರ ತಹಶೀಲ್ದಾರ್, ಜಿ.ಎಸ್. ಪಾಟೀಲ, ರಾಮಕೃಷ್ಣ ದೊಡ್ಡಮನಿ ಸೇರಿದಂತೆ ಗದಗ ಮತ್ತು ಹಾವೇರಿ ಜಿಲ್ಲೆಗಳ ನೂರಾರು ಮುಖಂಡರು ಪಾಲ್ಗೊಂಡಿದ್ದರು.
ಮಾಗಾವಿ ಸಭಾಭವನದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಪಕ್ಷದ ನಾಯಕರು, ರಾಜ್ಯದಲ್ಲಿ ಯಾವ ಮೋದಿ ಅಲೆಯೂ ಇಲ್ಲ. ಕಾಂಗ್ರೆಸ್ ಅಲೆ ಇದೆ. ಕಾಂಗ್ರೆಸ್ ಅಭ್ಯರ್ಥಿಯನ್ನು ಭಾರಿ ಅಂತರದಿಂದ ಗೆಲ್ಲಿಸಬೇಕು ಹಾಗೂ ಎದುರಾಳಿ ಬಿಜೆಪಿ ಅಭ್ಯರ್ಥಿಯ ಠೇವಣಿ ಜಪ್ತಿಯಾಗುವಂತೆ ಮಾಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಸಲೀಂ ಅಹ್ಮದ್ ಅವರು ನಗರದ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಜತೆಗೆ ವಿವಿಧ ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದರು.
ಸಲೀಂ ಅಹ್ಮದ್ ದಂಪತಿ ಆಸ್ತಿ ರು. 5.95 ಕೋಟಿ
ಹಾವೇರಿ: ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ದಂಪತಿಯ ಒಟ್ಟು ಅಸ್ತಿ ಮೌಲ್ಯ ರು. 5.95 ಕೋಟಿ ಇದೆ. ಹಾವೇರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬುಧವಾರ ಜಿಲ್ಲಾ ಚುನಾವಣಾಧಿಕಾರಿಗೆ ನಾಮಪತ್ರದೊಂದಿಗೆ ಸಲ್ಲಿಸಿರುವ ಅಫಿಡೆವಿಟ್‌ನಲ್ಲಿ ಅವರು ತಮ್ಮ ಆಸ್ತಿ ವಿವರ ಘೋಷಿಸಿಕೊಂಡಿದ್ದಾರೆ. ಸಲೀಂ ಅಹ್ಮದ್ ಅವರಲ್ಲಿ ರು. 12.50 ಲಕ್ಷ ನಗದು, ವಿವಿಧ ಬ್ಯಾಂಕ್‌ಗಳಲ್ಲಿ ರು. 3,87,774 ರು. ಠೇವಣಿ ಹೊಂದಿದ್ದಾರೆ. ರು. 31,90,800 ಸಾಲ ನೀಡಿದ್ದಾರೆ. ರು. 1.90 ಲಕ್ಷ ಮೌಲ್ಯದ 1996 ಮಾಡೆಲ್‌ನ ಮಾರುತಿ-800 ಕಾರಿದೆ. ಬೇರೆ ವಾಹನವಿಲ್ಲ. ರು. 18.18 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿ ರು. 68,38,574 ಮೌಲ್ಯದ ಚರಾಸ್ತಿಯನ್ನು ಸಲೀಂ ಅಹ್ಮದ್ ಹೊಂದಿದ್ದಾರೆ. ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರೋಡ್‌ನಲ್ಲಿ ರು. 4.50 ಕೋಟಿ ಮೌಲ್ಯದ ಮನೆ ಹಾಗೂ ಅಪಾರ್ಟ್‌ಮೆಂಟ್ ಇವರ ಹೆಸರಿನಲ್ಲಿದೆ.
ಪತ್ನಿ ಆಸ್ಮಾ ಅಹ್ಮದ್ ಅವರಲ್ಲಿ ರು. 15,75,000 ನಗದು, ವಿವಿಧ ಬ್ಯಾಂಕ್‌ಗಳಲ್ಲಿ ರು. 12,443 ಠೇವಣಿ ಇರಿಸಿದ್ದು, ರು. 17,65,500 ಸಾಲ ನೀಡಿದ್ದಾರೆ. 1.565 ಕೆಜಿ ತೂಕದ ಚಿನ್ನಾಭರಣ ಹೊಂದಿದ್ದು, ಇದರ ಮೌಲ್ಯ ರು. 43,82,000 ಎಂದು ಘೋಷಿಸಿಕೊಂಡಿದ್ದಾರೆ. ಸಲೀಂ ಅಹ್ಮದ್ ದಂಪತಿಯ ಆಸ್ತಿ ಮೌಲ್ಯ ರು. 5,95,73,517 ಆಗಿದೆ. ಸಲೀಂ ಹಾಗೂ ಅವರ ಪತ್ನಿ ಆಸ್ಮಾ ಯಾವ ಕಂಪನಿಯಲ್ಲೂ ಜೀವ ವಿಮೆ ಮಾಡಿಸಿಲ್ಲ. ಸಾಲವನ್ನೂ ಮಾಡಿಲ್ಲ.