ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

1 ನಾಮಪತ್ರ ತಿರಸ್ಕೃತ, 25 ಕ್ರಮಬದ್ಧ

Srinivasa Murthy VN
Updated On : 28 Mar 2014, 11:08 am

ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣೆಗೆ 26 ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರಗಳ ಪೈಕಿ ಮಂಜುನಾಥ ಬಿಷ್ಟಣ್ಣನವರ ನಾಮಪತ್ರ ತಿರಸ್ಕೃತಗೊಂಡಿದ್ದು, ಉಳಿದ 25 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎಂ. ಮಂಜುನಾಥ ನಾಯಕ ತಿಳಿಸಿದ್ದಾರೆ.
ಕ್ರಮಬದ್ಧ ನಾಮಪತ್ರಗಳ ವಿವರ: ಶಿವಕುಮಾರ ಉದಾಸಿ (ಬಿಜೆಪಿ), ರವಿ ಮೆಣಸಿನಕಾಯಿ(ಜೆಡಿಎಸ್), ಸಲೀಂ ಅಹ್ಮದ್ (ಕಾಂಗ್ರೆಸ್), ಹಾಲಪ್ಪ ತಿಮ್ಮೇನಹಳ್ಳಿ (ಬಿಎಸ್ಪಿ), ಡಿ. ಪ್ರಸಾದ (ಆರ್‌ಪಿಐ(ಎ), ಬಸವಂತಪ್ಪ ಹುಲ್ಲತ್ತಿ (ಸರ್ವ ಜನತಾ ಪಕ್ಷ), ಎಚ್.ಎಂ. ಸರಕಾಜಿ (ಆಮ್‌ಆದ್ಮಿ ಪಾರ್ಟಿ), ಸುರೇಶ ಮುಂಡರಗಿ (ರಾಣಿ ಚನ್ನಮ್ಮ ಪಕ್ಷ) ಹಾಗೂ ಅಬ್ದುಲ್ ರೆಹಮಾನ್ ಬಿಲೋರಿ, ಅಶೋಕ ಜವಳಿ, ವೀರಭದ್ರಪ್ಪ ಕಬ್ಬಿಣದ, ಕುಬೇರ ವಾಸಣ್ಣ, ಗಿರೀಶಗೌಡ ಬಿಷ್ಟನಗೌಡ್ರ, ಚಂದ್ರಶೇಖರಯ್ಯಾ ಕುಲಕರ್ಣಿ, ಜಗದೀಶ ಯಲಿಗಾರ, ಬಿ.ಎಂ. ಜಯದೇವಮಠದ, ಶಖಿಲಾಭಾನು ದರಗಾದ, ವಿ.ಬಿ. ಬಿದರಗಡ್ಡಿ, ಮೆಹಬೂಬಖಾನ್ ಪಠಾಣ, ಮೋಹನ ನಣ್ಣೂರಿ, ರುದ್ರೇಶ ಹಡಗಲಿ, ಶಿದ್ದಪ್ಪ ಪೂಜಾರ, ಶಿವಕುಮಾರ ತಳವಾರ ಹಾಗೂ ಹನುಮಂತಪ್ಪ ಕಬ್ಬಾರ (ಎಲ್ಲರೂ ಪಕ್ಷೇತರರು). ನಾಮಪತ್ರ ಹಿಂದಕ್ಕೆ ಪಡೆಯಲು ಮಾ. 29ರ ಮಧ್ಯಾಹ್ನ 3 ಗಂಟೆವರೆಗೆ ಅವಕಾಶವಿದೆಯೆಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಂ. ಮಂಜುನಾಥ ನಾಯಕ ತಿಳಿಸಿದ್ದಾರೆ.

ಮತದಾನದಿಂದ ಪ್ರಜಾಪ್ರಭುತ್ವ ಗಟ್ಟಿ
ಹಾನಗಲ್ಲ: ವಿದ್ಯಾವಂತರೆಲ್ಲರೂ ಮತದಾನ ಮಾಡುವುದಲ್ಲದೇ, ಉಳಿದವರೂ ಮತದಾನ ಪ್ರಕ್ರಿಯೆಲ್ಲಿ ಪಾಲ್ಗೊಂಡರೆ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಿಷ್ಠಗೊಳಿಸಲು ಸಾಧ್ಯ ಎಂದು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಬಿ. ಲಕ್ಷ್ಮೇಶ್ವರ ಅಭಿಪ್ರಾಯಪಟ್ಟರು.
ನಗರದ ಅಂಬೇಡ್ಕರ್ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆಗಳ ಮೆಟ್ರಿಕ್ ನಂತರದ ಕಾಲೇಜು ವಿದ್ಯಾರ್ಥಿನಿಯರಿಗೆ ಆಯೋಜಿಸಿದ ಮತದಾನ ಜಾಗೃತಿ ಕಾರ್ಯಾಗಾರದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಕಾಲಕಾಲಕ್ಕೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಪರಿಶೀಲಿಸುತ್ತಿರಬೇಕು. ವಿಳಾಸ ಬದಲಾವಣೆ ಮತ್ತಿತರ ತಿದ್ದುಪಡಿಗಳನ್ನು ಚುನಾವಣಾಧಿಕಾರಿಗಳಲ್ಲಿ ಸೇರ್ಪಡೆಗೊಳಿಸಬೇಕು. ಮತದಾನ ದಿನದಂದು ನೀಡಲಾಗುವ ರಜೆಯನ್ನು ಅದಕ್ಕಾಗಿಯೇ ಬಳಸಿಕೊಳ್ಳಬೇಕು. ಮತದಾನ ಯಾವುದೇ ಆಮಿಷಕ್ಕೊಳಗಾಗದೇ ಪ್ರಾಮಾಣಿಕವಾಗಿ ಹಾಗೂ ಗುಪ್ತವಾಗಿರುವಂತೆ ನಡೆದುಕೊಳ್ಳಬೇಕು. ಅನಕ್ಷರಸ್ಥ ಮತದಾರರಿಗೆ ಮತಯಂತ್ರದ ಬಳಕೆ ಕುರಿತು ಸರಿಯಾದ ಮಾಹಿತಿ ನೀಡಬೇಕು ಎಂದು ತಿಳಿಸಿದರು. ಹಿಂದುಳಿದ ವರ್ಗಗಳ ಇಲಾಖೆ ವಸತಿ ನಿಲಯದ ವಾರ್ಡನ್ ಬಿ.ಎಂ. ಕುಳೇನೂರ ಮಾತನಾಡಿ, ಮತದಾನ ಪ್ರಮಾಣ ಹೆಚ್ಚಲು ಚುನಾವಣಾ ಅಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಇಲಾಖೆ ವಿಸ್ತೀರ್ಣಾಧಿಕಾರಿ ಎನ್.ಎಂ. ಪೂಜಾರ ಸ್ವಾಗತಿಸಿದರು. ಆನಂದ ಕಾರ್ಯಕ್ರಮ ನಿರೂಪಿಸಿದರು. ಸಮಾಜ ಕಲ್ಯಾಣ ಇಲಾಖೆ ಕಚೇರಿ ವ್ಯವಸ್ಥಾಪಕ ಪಿ.ಎಂ. ಮಾಳದಕರ ವಂದಿಸಿದರು.

ಬಿಜೆಪಿ, ಕಾಂಗ್ರೆಸ್‌ನಿಂದ ದೇಶ ಲೂಟಿ
ಹಾವೇರಿ:  ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವು ಜನವಿರೋಧಿ, ರೈತವಿರೋಧಿ, ಭಷ್ಟಾಚಾರದ ಮೂಲಕ ರಾಷ್ಟ್ರ ಸಂಪತ್ತನ್ನು ಲೂಟಿ ಹೊಡೆದ ಪಕ್ಷಗಳಾಗಿವೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಎಸ್ ಮಾಳಗಿ ಆರೋಪಿಸಿದರು. ಅವರು ಜೆಡಿಎಸ್ ಲೋಕಸಭಾ ಅಭ್ಯರ್ಥಿ ರವಿ ಮೆಣಸಿನಕಾಯಿ ಪರ ಮತಯಾಚನೆ ಮಾಡಿ ಮಾತನಾಡಿ, ನಮ್ಮ ಪಕ್ಷದ ಅಭ್ಯರ್ಥಿ ಹಾವೇರಿ ನಗರದ ಕಾಯಂ ನಿವಾಸಿ ಆಗಿದ್ದು, ಸಾರ್ವಜನಿಕರ, ಬಡವರ, ರೈತರ, ದುರ್ಬಲರ ಹಾಗೂ ಅಲ್ಪಸಂಖ್ಯಾತರ ಕಷ್ಟ ನೋವುಗಳ ಬಗ್ಗೆ ಆದ್ಯತೆ ನೀಡಲಿದ್ದಾರೆ. ಈ ಬಾರಿ ರವಿ ಮೆಣಸಿನಕಾಯಿ ಅವರಿಗೆ ಮತ ನೀಡುವ ಮೂಲಕ ಅವರ ಗೆಲುವಿಗೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಸಹರಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಂ.ಎಚ್. ಏರಿಮನಿ, ಜಿಲ್ಲಾ ಉಪಾಧ್ಯಕ್ಷ ಎಸ್.ಎಸ್. ಕಳ್ಳಿಮನಿ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಖಾಜಾಮೈನುದ್ದಿನ್ ಅಣ್ಣಿಗೇರಿ, ಅಮೀರಜಾನ್, ರಮೇಶ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.  

ಹುರಳಿಕುಪ್ಪಿಯಲ್ಲಿ ಜಾಗೃತಿ  
ಸವಣೂರು:  ತಾಲೂಕಿನ ಹುರಳಿಕುಪ್ಪಿ ಗ್ರಾಮ ಪಂಚಾಯಿತಿ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು. ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಉರ್ದು ಶಾಲೆ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತದಾನ ಜಾಗೃತಿ ನಡೆಸಿದರು. ಗ್ರಾಪಂ ಪಿಡಿಒ ಬೋದರಾಜ ಲಮಾಣಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ, ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು ಎಂದು ತಿಳಿಸಿದರು. ಗ್ರಾಪಂ ಕಾರ್ಯದರ್ಶಿ ಡಿ.ಕೆ. ಕುಲಕರ್ಣಿ, ಶಿಕ್ಷಕರಾದ ಎಸ್.ಜಿ. ಸಣ್ಣಗೌಡ್ರ, ಸಿ.ಎನ್. ಲಕ್ಕನಗೌಡ್ರ, ಆರೋಗ್ಯ ಇಲಾಖೆಯ ಕಾರ್ಯಕರ್ತೆಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ಡಾ. ಜಿ.ವಿ. ಕುಲಕರ್ಣಿ ಬೇಂದ್ರೆ ಸಾಹಿತ್ಯ ರತ್ನ
ಬೆಂಗಳೂರು: ಹಿರಿಯ ಸಾಹಿತಿ ಡಾ೤ ಜಿ.ವಿ. ಕುಲಕರ್ಣಿ ಅವರಿಗೆ ಬೇಂದ್ರೆ ಸಾಹಿತ್ಯ ರತ್ನ ಪ್ರಶಸ್ತಿ ಘೋಷಿಸಲಾಗಿದೆ. ಹುಬ್ಬಳ್ಳಿಯ ಡಾ೤ ದ.ರಾ. ಬೇಂದ್ರೆ ಸಂಶೋಧನಾ ಸಂಸ್ಥೆ ನೀಡುವ ಈ ಪ್ರಶಸ್ತಿಗೆ 30ಕ್ಕೂ ಅಧಿಕ ಕೃತಿಗಳನ್ನು ರಚಿಸಿರುವ ಕುಲಕರ್ಣಿ ಅವರನ್ನು ಆಯ್ಕೆ ಮಾಡಲಾಗಿದೆ. ವಿಶೇಷವೆಂದರೆ ಕುಲಕರ್ಣಿ ಅವರು ದ.ರಾ. ಬೇಂದ್ರೆ ಅವರಿಂದಲೇ 'ಜೀವಿ' ಎಂಬ ಕಾವ್ಯನಾಮ ಪಡೆದವರು. ಮುಂಬೈ ವಿಶ್ವವಿದ್ಯಾಲಯದಲ್ಲಿ ಏ. 5ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಯಲಿದೆ. ಪ್ರಶಸ್ತಿಯು 10 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಹೊಂದಿದೆ ಎಂದು ಸಂಸ್ಥೆ ನಿರ್ದೇಶಕ ಡಾ೤ ಕೆ.ಎಸ್. ಶರ್ಮಾ ತಿಳಿಸಿದ್ದಾರೆ.

ಎಸ್ಸೆಸ್ಸೆಲ್ಸಿ: ಶಿಗ್ಗಾಂವಿಯಲ್ಲಿ 2402 ಪರೀಕ್ಷಾರ್ಥಿಗಳು
ಶಿಗ್ಗಾಂವಿ:  ತಾಲೂಕಿನಲ್ಲಿ ಮಾ. 28 ರಿಂದ ಏ. 9ರವರೆಗೆ ಜರುಗಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಕ್ರಮ ಹಾಗೂ ಅವ್ಯವಹಾರ ನಡೆಯದಂತೆ ಮತ್ತು ಸುವ್ಯವಸ್ಥಿತವಾಗಿ ನಡೆಯಲು ಪರೀಕ್ಷೆ ನಡಯುವ ಸ್ಥಳದಿಂದ 200 ಮೀ ವ್ಯಾಪ್ತಿಯನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗಿದೆ. ಒಟ್ಟು 2402 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದು, ತಾಲೂಕಿನ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 11 ಕೇಂದ್ರಗಳನ್ನು ತೆರೆಯಲಾಗಿದ್ದು ಪೂರ್ವಭಾವಿಯಾಗಿ ಎಲ್ಲ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ. ತಾಲೂಕಿನಲ್ಲಿ 2402 ವಿದ್ಯಾರ್ಥಿಗಳಲ್ಲಿ 1234 ವಿದ್ಯಾರ್ಥಿನಿಯರು, 1168 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಬಂಕಾಪುರ ಹುಸೇನಿಯಾ ಉರ್ದು ಪ್ರೌಢ ಶಾಲೆ, ಲೈನ್ಸ್ ನವಭಾರತ ವಿದ್ಯಾ ಸಂಸ್ಥೆಯ ಪ್ರಾಥಮಿಕ ಶಾಲೆ, ಕುಂದೂರ ಕೊಟ್ಟೂರೇಶ್ವರ ಪ್ರೌಢ ಶಾಲೆ, ಹಿರೇಬೆಂಡಿಗೇರಿ ಸರ್ಕಾರಿ ಪ್ರೌಢ ಶಾಲೆ, ಕ್ಯಾಲಕೊಂಡ ಸರ್ಕಾರಿ ಪ್ರೌಢ ಶಾಲೆ, ಶಿಗ್ಗಾಂವಿ ಪಟ್ಟಣದ ಎಸ್‌ಬಿಬಿಎಂಡಿ ಪದವಿ ಪೂರ್ವ ಕಾಲೇಜ, ಚನ್ನಪ್ಪ ಕುನ್ನೂರ ಪದವಿ ಪೂರ್ವ ಕಾಲೇಜ, ಜೆಎಂಜೆ ಪ್ರೌಢ ಶಾಲೆ, ಶಿಶುವಿನಹಾಳ ಸಂತ ಶರೀಫ್ ಶಿವಯೋಗಿ ಪ್ರೌಢ ಶಾಲೆ, ದುಂಡಶಿಯ ಶ್ರೀ ಸ್ವಾಮಿ ವೀವೇಕಾನಂದ ಪ್ರೌಢ ಶಾಲೆ, ತಡಸನ ದುಂಡಿ ಬಸವೇಶ್ವರ ಪ್ರೌಢ ಶಾಲೆಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಲ್. ಭಜಂತ್ರಿ ತಿಳಿಸಿದ್ದಾರೆ.

ಹಗಲಲ್ಲಿ ಉರಿಯುತ್ತಿದೆ ಬೀದಿ ದೀಪ!
ಶಿಗ್ಗಾಂವಿ:  ವಿದ್ಯುತ್ ಉಳಿಸಿ ರಾತ್ರಿ ವೇಳೆ ಮಾತ್ರ ಉಪಯೋಗಿಸಿ ಎಂದು ವಿವಿಧ ವಾಲ್ ಪೋಸ್ಟರ್, ಕಲಾವಿದರು, ಇಲಾಖಾ ಅಧಿಕಾರಿಗಳು ಬೊಬ್ಬಿಟ್ಟು ಪ್ರಚಾರ ಮಾಡುತ್ತಿದ್ದರೆ,  ಇಲ್ಲಿನ ಗ್ರಾಪಂನವರು ಮಾತ್ರ ಹಗಲಿನಲ್ಲಿಯೂ ವಿದ್ಯುತ್ ದೀಪ ಉರಿಸುವ ದೃಶ್ಯ ತಾಲೂಕಿನ ಹೋಸೂರ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗಂಗಿಬಾವಿ ಬೀದಿಯಲ್ಲಿ ಪ್ರತಿನಿತ್ಯ ಕಂಡುಬರುತ್ತದೆ.

ರಮೇಶ ತೆವರಿಗೆ ಪಿಎಚ್‌ಡಿ ಪ್ರದಾನ
ಹಾವೇರಿ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖಸ್ಥರಾದ ರಮೇಶ ಎನ್. ತೆವರಿ ಅವರು ಕನ್ನಡ ನಾನು-ನುಡಿಗೆ ಡಾ. ರಾಜಕುಮಾರ ಅವರ ಕೊಡುಗೆ ಎಂಬ ವಿಷಯದ ಕುರಿತ ಸಂಶೋಧನೆ ನಡೆಸಿ ಮಂಡಿಸಿದ ಪ್ರಬಂಧಕ್ಕೆ ಕರ್ನಾಟಕ ವಿವಿಯ ಘಟಿಕೋತ್ಸವ ಸಮಾರಂಭದಲ್ಲಿ ಪಿಎಚ್‌ಡಿ ಪ್ರದಾನ ಮಾಡಲಾಗಿದೆ. ಡಾ.ಶಾಂತಿನಾಥ ಎಂ. ದಿಬ್ಬದ ಹಾಗೂ ಡಾ.ಆರ್.ಸಿ.ಹಿರೇಮಠ ಅವರ ಮಾರ್ಗದರ್ಶನದಲ್ಲಿ ರಮೇಶ ತೆವರಿ ಅವರು ಸಂಶೋಧನೆ ಮಂಡಿಸಿದ್ದರು. ಡಾ.ರಮೇಶ ಎನ್. ತೆವರಿ ಅವರಿಗೆ ಕಾಲೇಜಿನ ಪ್ರಾಂಶುಪಾಲರು, ಬೋಧಕ-ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಶುಭ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement