ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಮೇ 14
ಕಾರ್ಮಿಕರು ಕಾಯಕದ ಜತೆ ಸಂಘಟಿತರಾಗಿ ಹೋರಾಟ ಮನೋಭಾವ ರೂಢಿಸಿಕೊಂಡಾಗ ಸರ್ಕಾರದ ಮೂಲಸೌಲಭ್ಯ ಪಡೆದುಕೊಳ್ಳಲು ಸಾಧ್ಯ ಎಂದು ರೈತ ಮುಖಂಡ ಬಿ.ಎಸ್. ಸೊಪ್ಪಿನ ಹೇಳಿದರು.
ಸ್ಥಳೀಯ ಕಟ್ಟಿ ಬಸವೇಶ್ವರ ರಂಗ ಮಂದಿರದಲ್ಲಿ ಬುಧವಾರ ರೋಣ ತಾಲೂಕು ಸಿಐಟಿಯುದಿಂದ ನಡೆದ ವಿಶ್ವ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಮಿಕರು ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಾದರೆ ಸಂಘಟಿತರಾಗುವ ಅವಶ್ಯಕತೆಯಿದೆ. ಸದಾ ಸಾಮಾನ್ಯ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಹಗಲಿರುಳು ದುಡಿಯುತ್ತಿರುವ ಸಿಐಟಿಯು ಹುಟ್ಟಿದಾಗಿನಿಂದ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.
ಪುರಸಭೆ ಸದಸ್ಯ ಎಂ.ಎಸ್. ಹಡಪದ ಮಾತನಾಡಿ, ಕಾರ್ಮಿಕರು ಕೀಳಿರಿಮೆ ತೊರೆದು ಸಂಘಟನೆಯತ್ತ ಚಿಂತಿಸಿದಾಗ ಸಂಘಟನೆ ಬೆಳೆಸುವ ಜತೆ ಅಭಿವೃದ್ಧಿ ಹೊಂದಲು ಸಾಧ್ಯ. ಈ ದಿಸೆಯಲ್ಲಿ ಪ್ರತಿಯೊಬ್ಬ ಕಾರ್ಮಿಕರು ಚಿಂತಿಸುವ ಅಗತ್ಯವಿದೆ ಎಂದರು.
ಬಾಲು ರಾಠೋಡ, ಬಿ.ಎಸ್. ಶೀಲವಂತರ, ಮಾರುತಿ ಚಿಟಗಿ, ಪೀರು ರಾಠೋಡ ಮಾತನಾಡಿದರು. ಶಿವಾನಂದ ಬೋಸ್ಲೆ, ಫಯಾಜ ತೋಟದ, ಚನ್ನಮ್ಮ ಕಾಶನ್ನವರ, ಶಂಕ್ರಮ್ಮ ತಾಳಿಕೋಟಿ, ಗೌಸ ಪೀರಣವರ್, ಶಿವು ಚವ್ಹಾಣ, ಕಳಕೇಶ್ ಉಕ್ಕಿಸಲ ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಪಟ್ಟಣದ ಕಾಲಕಾಲೇಶ್ವರ ವೃತ್ತದಿಂದ, ಜೋಡು ವೃತ್ತ, ದುರ್ಗಾ ವೃತ್ತ, ಹಿರೇ ಬಜಾರ್ ವಿವಿಧ ಬಡಾವಣೆಗಳಲ್ಲಿ ಪಾದಯಾತ್ರೆ ಮೂಲಕ ಸಂಚರಿಸಿ ಕಾರ್ಮಿಕರಲ್ಲಿ ಜಾಗೃತಿ ಮೂಡಿಸಿದರು.