ಕಾರಟಗಿ: ಇಲ್ಲಿನ ರಾಜೀವ್ ಗಾಂಧಿ ನಗರದ ಹೊರವಲಯದ ಬೇವಿನ ಮರವೊಂದರಲ್ಲಿ ಪವಾಡ ಸದೃಶ ರೀತಿಯಲ್ಲಿ ಹಾಲು ಬರುತ್ತಿದ್ದು ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ತಂಡೋಪತಂಡವಾಗಿ ಸೋಮವಾರ ಜನ ಹರಿದು ಬಂದರು.
ಬೇವಿನಮರದಲ್ಲಿ ಇದ್ದಕ್ಕಿದ್ದಂತೆ ಬಿಳಿದ್ರವ ಉಕ್ಕಿ ಬರುತ್ತಿದ್ದು, ಇದು ದೇವರ ಪವಾಡ ಎಂದು ಜನ ಭಯ-ಭಕ್ತಿಯಿಂದ ಪೂಜಿಸಿದರು. ಸ್ಥಳಕ್ಕೆ ಬಂದ ಕೆಲವರು ಕುತೂಹಲದಿಂದ ವೀಕ್ಷಿಸಿದರೆ ಇನ್ನೂ ಕೆಲ ಮಹಿಳೆಯರು, ಮಕ್ಕಳು ದೇವರ ಪವಾಡವೆಂಬಂತೆ ಪಕ್ಕದಲ್ಲೇ ಇದ್ದ ಹುಲಿಗೆಮ್ಮ ದೇವಿ ಹಾಗೂ ಬೇವಿನ ಮರಕ್ಕೆ ಪೂಜೆ ಮಾಡಿದರು.
ನಂತರ ಬಿಳಿದ್ರವವನ್ನು ಮುಟ್ಟಿ ರುಚಿ ನೋಡಿದರು.
ಇದ್ದಕ್ಕಿದ್ದಂತೆ ಮರದಲ್ಲಿ ಹಾಲು ಬಂದಿದ್ದು ಜನರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಸ್ಥಳೀಯ ನಿವಾಸಿ ಕರಿಯಪ್ಪ, ಕಳೆದ 10 ವರ್ಷಗಳ ಹಿಂದೆ ಇದೇ ರೀತಿಯಲ್ಲಿ ಮರದಲ್ಲಿ ಹಾಲು ಬಂದಿತ್ತು. ಇದನ್ನು ದೇವರ ಪವಾಡವೆಂದು ತಿಳಿದು ಪಕ್ಕದಲ್ಲಿ ಹುಲಿಗೆಮ್ಮ ದೇವಿಯ ದೇವಸ್ಥಾನ ನಿರ್ಮಿಸಿದ್ದೆವು. ತದನಂತರದಲ್ಲಿ ಸುತ್ತಲಿನ ನಿವಾಸಿಗಳಿಗೆ ಶುಭವಾಗಿದೆ. ಈಗ ಮತ್ತೆ ಮತ್ತೊಮ್ಮೆ ಹಾಲು ಬರುತ್ತಿದ್ದು ಇದೂ ದೇವರ ಪವಾಡವೇ ಎಂದರು.