ಕಳ್ಳಹಾದಿ ಹಿಡಿದರೆ ಕಟ್ಟುನಿಟ್ಟಿನ ಕ್ರಮ
ಮಂಡ್ಯ: ನಂದಿನಿ ಹಾಲಿಗೆ ಉತ್ಪಾದಕರು ಮತ್ತು ಗ್ರಾಹಕರೇ ದೇವರು. ಇವರಿಬ್ಬರಲ್ಲಿ ಯಾರಿಗೆ ತೊಂದರೆಯಾದರೂ ಅದರ ಪರಿಣಾಮವನ್ನು ಹೈನೋದ್ಯಮ ಅನುಭವಿಸಬೇಕಾಗುತ್ತದೆ. ಹೀಗಾಗಿ ಗ್ರಾಹಕರ ವಿಶ್ವಾಸಾರ್ಹತೆ ಮತ್ತು ಉತ್ಪಾದಕರು ನಮ್ಮ ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸವನ್ನು ಉಳಿಸಿಕೊಂಡ ಹೋಗಲು ಒಕ್ಕೂಟ ಪ್ರಥಮ ಆದ್ಯತೆ ನೀಡುತ್ತದೆ.
ಇದು ಮಂಡ್ಯ ಹಾಲು ಒಕ್ಕೂಟದ ಅಧ್ಯಕ್ಷ ಎಂ. ಬಿ. ಹರೀಶ್ ಸ್ಪಷ್ಟ ನುಡಿಗಳು. ಕನ್ನಡಪ್ರಭದಲ್ಲಿ ಬರುತ್ತಿರುವ ವರದಿ ಗಮನಿಸಿ ಪ್ರತಿಕ್ರಿಯೆ ನೀಡಿದ ಹರೀಶ್, ಕೆಲವು ಚಿಲ್ಲರೆ ವ್ಯಾಪಾರಿಗಳು ತಮ್ಮ ಸಣ್ಣತನ ತೋರಿ, ಕಳ್ಳ ಹಾದಿ ಹಿಡಿಯುತ್ತಾರೆ. ಅಂತಹವರು ತಪ್ಪು ನಡೆದಿರುವುದು ಗಮನಕ್ಕೆ ಬಂದಾಗ ಮುಲಾಜಿಲ್ಲದೇ ಕ್ರಮ ಕೈಕೊಂಡ ಉದಾಹರಣೆಗಳಿವೆ ಎಂದು ಹೇಳಿದರು.
ಖಾಸಗಿ ಡೈರಿಗಳು ಕೆಲವು ಚಿಲ್ಲರೆ ವ್ಯಾಪಾರಿಗಳ ಮೇಲೆ ಪ್ರಭಾವ ಬೀರಿ, ಹೆಚ್ಚು ಕಮೀಷನ್ ಕೊಡುವ ಆಮಿಷ ಒಡ್ಡಿ, ನಂದಿನಿ ಗ್ರಾಹಕರ ಸೆಳೆಯುವ ಪ್ರಯತ್ನಗಳ ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಆದರೆ, ನಂದಿನ ಹಾಲಿಗೆ ಯಾರೂ ಮಾರುಕಟ್ಟೆ ಕಲ್ಪಿಸುವ ಅಗತ್ಯವಿಲ್ಲ. ಏಕೆಂದರೆ ಪ್ರತಿ ಗ್ರಾಹಕರೂ ನಂದಿನಿ ಹಾಲನ್ನು ಕೇಳಿ ಪಡೆಯುತ್ತಾರೆ. ಇದರಿಂದಾಗಿ ಚಿಲ್ಲರೆ ವ್ಯಾಪಾರಿಗಳು ಎಷ್ಟೇ ಆಟ ಆಡಿದರೂ ನಂದಿನಿ ಹಾಲು ಮಾತ್ರ ಗ್ರಾಹಕರ ಪಾಲಿಗೆ ಅಮೃತವಾಗಿಯೇ ಇರುತ್ತದೆ ಎನ್ನುತ್ತಾರೆ ಹರೀಶ್.
ಎಟಿಎಂ ಆರಂಭ: ಈ ಕಾರಣಕ್ಕಾಗಿ ಒಕ್ಕೂಟ ಮಾರುಕಟ್ಟೆಗಾಗಿ ಪ್ರತ್ಯೇಕ ನೀತಿ ಜಾರಿಗೆ ತರಲು ನಿರ್ಧರಿಸಿದೆ. ಕೆಲವು ಚಿಲ್ಲೆರೆ ವ್ಯಾಪಾರಿಗಳು ಮಾಡುವ ಸಣ್ಣ ದಂಧೆ, ಪ್ರಾಮಾಣಿಕ ವ್ಯಾಪಾರಸ್ಥರಿಗೂ ತೊಂದರೆ ಆಗುತ್ತದೆ. ಹೇಗಾದರೂ ಸರಿ ಗ್ರಾಹಕರಿಗೆ ಎಂಆರ್‌ಪಿ ದರದಲ್ಲೇ ನಂದಿನಿ ಹಾಲು ಸೇರಿದಂತೆ ಎಲ್ಲಾ ಉತ್ಪನ್ನಗಳು ಎಲ್ಲಾ ಕಾಲಕ್ಕೂ ಲಭ್ಯವಾಗಬೇಕು ಎನ್ನುವ ಕಾರಣಕ್ಕಾಗಿ ಮಂಡ್ಯದ ನೂರು ಅಡಿ ರಸ್ತೆ (ಹೊಸಳ್ಳಿ ರಸ್ತೆ) ಯಲ್ಲಿ ಒಕ್ಕೂಟದ ವತಿಯಿಂದಲೇ ಆಲ್ ಟೈಂ ಮಿಲ್ಕ್ (ಎಟಿಎಂ) ಕೇಂದ್ರ ಆರಂಭಿಸಲಾಗಿದೆ. ಈ ಕೇಂದ್ರದಲ್ಲಿ ಗ್ರಾಹಕರಿಗೆ ಯಾವುದೇ ಕಾರಣಕ್ಕೂ ತೊಂದರೆ ಆಗುವುದಿಲ್ಲ ಎಂದರು. ಮಂಡ್ಯ ನಗರದ ಇನ್ನೂ ನಾಲ್ಕು ಕಡೆ ಹಾಗೂ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ತಲಾ ಒಂದೊಂದು ಎಟಿಎಂ ಕೇಂದ್ರ ತೆರೆಯಲು ನಿರ್ಧರಿಸಲಾಗಿದೆ. ಈ ಯೋಜನೆ ಶೀಘ್ರದಲ್ಲೇ ಜಾರಿಗೆ ಬರಲಿದೆ. ಆಗ ಚಿಲ್ಲರೆ ವ್ಯಾಪಾರಿಗಳು ಗ್ರಾಹಕರಿಗೆ ಹೆಚ್ಚುವರಿಯಾಗಿ ಯಾವುದೇ ಹಣ ಪಡೆದುಕೊಳ್ಳಲು ಸಾಧ್ಯವಿಲ್ಲ. ಗ್ರಾಹಕರೂ ಎಟಿಎಂ ಸೌಲಭ್ಯ ಪಡೆದುಕೊಂಡರೆ ನ್ಯಾಯ ಸಿಗುತ್ತದೆ ಎಂದು ಹರೀಶ್ ಹೇಳಿದರು.
ನಂದಿನ ಹಾಲಿನ ಕೇಂದ್ರ ನಡೆಸುವ ಕೆಲವು ಚಿಲ್ಲರೆ ವ್ಯಾಪಾರಿಗಳು ಬೀಡಿ, ಸಿಗರೇಟು, ಟೀ, ಕಾಫಿ ಮಾಡಿ ಮಾರಾಟ ಮಾಡುವುದೂ ಒಕ್ಕೂಟದ ಗಮನಕ್ಕೆ ಬಂದಿದೆ. ಇವಕ್ಕೆಲ್ಲಾ ನಿಧಾನವಾಗಿ ಕಡಿವಾಣ ಹಾಕಿ ಗ್ರಾಹಕರ ಹಿತರಕ್ಷಣೆ ಮಾಡಲಾಗುವುದು ಎಂದರು.
ರೈತರಿಗೆ ಅನುಕೂಲ: ರೈತರು ಇನ್ನು ಮುಂದೆ ಜೈವಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ಹಿಪ್ಪೆ ಬೀಜ, ಹೊಂಗೆ ಬೀಜ ಇತ್ಯಾದಿಗಳನ್ನು ತಮ್ಮ ಜಮೀನಿನಲ್ಲಿ ಬೆಳೆದರೆ, ಗ್ರಾಮಗಳಲ್ಲಿರುವ ಹಾಲು ಖರೀದಿ ಕೇಂದ್ರಗಳಲ್ಲಿ ರೈತರ ಉತ್ಪನ್ನಗಳನ್ನು ಖರೀದಿ ಮಾಡಲು ಕಂಪನಿಯೊಂದು ಬಂದಿದೆ. ಸಂಘಗಳಲ್ಲಿ ಹಾಲು ಅಳತೆ ಮಾಡುವ ವ್ಯಕ್ತಿಗೆ ಈ ಕೆಲಸದ ಜವಾಬ್ದಾರಿ ವಹಿಸಿ ಆತನ ಜೀವನಕ್ಕೂ ಅನುಕೂಲವನಾಗುವಂತೆ ಮಾಡುವುದು ಹಾಗೂ ರೈತರಿಗೂ ಮತ್ತೊಂದು ವಿಧದಲ್ಲಿ ಆದಾಯ ತಂದು ಕೊಡುವ ವಿನೂತನ ಪ್ರಯೋಗಕ್ಕೆ ಒಕ್ಕೂಟ ಮುಂದಾಗಿದೆ. ಈ ಯೋಜನೆ ಇನ್ನೂ ಚರ್ಚೆ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಸಾಧಕ- ಬಾಧಕ ತಿಳಿದುಕೊಂಡು ಜಾರಿ ತರುವ ಪ್ರಯತ್ನ ಮಾಡಲಾಗುವುದು ಎಂದರು.
ಕಳೆದ ಮೂರು ವರ್ಷಗಳಲ್ಲಿ ಒಕ್ಕೂಟ ಸಾಕಷ್ಟು ಪ್ರಗತಿ ಸಾಧಿಸಿದೆ. 3,50 ಪೈಸೆ ಹಾಲಿನ ದರ ಇಳಿಕೆ ಮಾಡಿದಾಗ ರೈತರು ಶಾಪ ಹಾಕಿದರು. ಇದು ಅವರ ತಪ್ಪಲ್ಲ, ಅವರಿಗೆ ಆಗಿರುವ ನೋವು ತೋಡಿಕೊಂಡರು. ಹಾಲಿನ ದರ ಇಳಿಕೆ ಆ ದಿನಗಳಲ್ಲಿ ಅನಿವಾರ್ಯವಾಗಿತ್ತು. ನಾವು ಮತ್ತೆ ಸದ್ಯದಲ್ಲೇ ಹಾಲಿನ ಖರೀದಿ ಮತ್ತು ಮಾರಾಟದ ದರ ಏರಿಕೆ ಮಾಡುತ್ತೇವೆ. ಅದರ ಲಾಭದಲ್ಲಿ ಬಹುಪಾಲನ್ನು ರೈತರಿಗೆ ನೀಡಲು ನಿರ್ಧರಿಸಲಾಗಿದೆ. ಕಷ್ಟ- ಸುಖ ಎಲ್ಲವನ್ನೂ ಒಕ್ಕೂಟ ನಿಭಾಯಿಸುತ್ತದೆ. ಚಿನ್ನದ ಮೊಟ್ಟೆ ಇಡುವ ಕೋಳಿ( ಸಂಸ್ಥೆ) ಕೊಲ್ಲುವ ಪ್ರಯತ್ನ ಮಾಡುವುದಿಲ್ಲ. ರೈತರ ಆರೋಪಗಳನ್ನು ಸಹಿಸಿಕೊಂಡು ಸಂಸ್ಥೆ ಬಲವರ್ಧನೆ ಮಾಡುವ ಹೊಣೆ ಒಕ್ಕೂಟದ ಆಡಳಿತ ಮಂಡಳಿಯ ಮೇಲಿದೆ ಎಂದು ಹೇಳಿದರು.
-ಕೆ. ಎನ್. ರವಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.