ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮಂಡ್ಯ

ನಾಲೆ ಆಧುನೀಕರಣಕ್ಕೆ ವಿಳಂಬ ನೀತಿ: ಪುಟ್ಟಣ್ಣಯ್ಯ ಆರೋಪ

Parashurama
Updated On : 1 Feb 2013, 10:25 am

ಮಂಡ್ಯ: ಕೃಷ್ಣರಾಜಸಾಗರ ಜಲಾಶಯ ವ್ಯಾಪ್ತಿಯ ವಿ.ಸಿ. ನಾಲೆ ಹಾಗೂ ಉಪನಾಲೆಗಳ ಆಧುನೀಕರಣ ಅತಂತ್ರ ಸ್ಥಿತಿಯಲ್ಲಿ ಇದೆ. ಸರ್ಕಾರ ಮತ್ತು ಅಧಿಕಾರಿಗಳ ವಿಳಂಬ ನೀತಿಯಿಂದ ರೈತರು ಆತಂಕ ಸ್ಥಿತಿ ಎದುರಿಸುತ್ತಿದ್ದಾರೆ ಎಂದು ರೈತ ಸಂಘದ ನಾಯಕ ಕೆ.ಎಸ್. ಪುಟ್ಟಣ್ಣಯ್ಯ ಶುಕ್ರವಾರ ದೂರಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ಕೆಆರ್‌ಎಸ್ ಜಲಾಶಯ ವ್ಯಾಪ್ತಿಯ ವಿ.ಸಿ. ನಾಲೆ ಮತ್ತು ಇತರೆ ನಾಲೆಗಳ ಆಧುನೀಕರಣ ಕಾಮಗಾರಿ ಕೈಗೊಳ್ಳುವಲ್ಲಿ ಇದುವರೆಗೂ ಯಾವುದೇ ಖಚಿತ ನಿರ್ಧಾರ ಮಾಡಿಲ್ಲ. ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿ 3 ತಿಂಗಳಾದರೂ ಟೆಂಡರ್ ಪ್ರಕ್ರಿಯೆ ಮುಗಿಯುವ ಲಕ್ಷಣವೇ ಇಲ್ಲ ಆತಂಕದಿಂದ ಹೇಳಿದರು.
ಜೂನ್, ಜುಲೈ, ಆಗಸ್ಟ್‌ನಲ್ಲಿ ಕೃಷಿ ಚಟುವಟಿಕೆಗಳು ಆರಂಭವಾಗಬೇಕು. ಈ ಅವಧಿ ಮೀರಿದರೆ ಮುಂದಿನ 3 ವರ್ಷದ ಬೆಳೆ ನಷ್ಟವಾಗಲಿದೆ. ಇದರಿಂದ 18 ಲಕ್ಷ ಎಕರೆ ಫಸಲು ನಷ್ಟವಾಗಲಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಬರುವ 5 ಸಕ್ಕರೆ ಕಾರ್ಖಾನೆಗಳು ದಿವಾಳಿಯಾಗಲಿದೆ ಎಂದು ಹೇಳಿದರು. ಸರ್ಕಾರದ ನಿರ್ಲಕ್ಷ್ಯದಿಂದಾಗಿ ಇನ್ನೂ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಈಗಿನ ಸರ್ಕಾರ ಮತ್ತು ಆಧುನೀಕರಣ ಕಾಮಗಾರಿ ನಿರ್ಧಾರ  ಎರಡು ಅತಂತ್ರವಾಗಿವೆ. ಟೆಂಡರ್ ಕರೆದರೂ ಯಾರು ಅದರಲ್ಲಿ ಪಾಲ್ಗೊಳ್ಳುವ ಸ್ಥಿತಿಯಲ್ಲಿ ಇಲ್ಲ. ಕೊನೆ ಪಕ್ಷ ಸರ್ಕಾರವೇ ಆಧುನೀಕರಣ ಕಾಮಗಾರಿ ಆರಂಭಿಸಲಿ. ಇಲ್ಲದಿದ್ದರೆ ತುಂಡು ಗುತ್ತಿಗೆ ನೀಡಲಿ. ಇಲ್ಲದ ಹೋದರೆ ಯಾವುದಾದರೂ ದೊಡ್ಡ ಕಂಪನಿಗಾದರೂ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಸರ್ಕಾರ ಟೆಂಡರ್ ಪ್ರಕ್ರಿಯೆಯನ್ನು ವಿಳಂಬ ಮಾಡದೇ ಜೂನ್ 15ರೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲವಾದರೆ ಕೃಷಿ ನಂಬಿಕೊಂಡಿರುವ ರೈತರು ಗುಳೆ ಹೋಗುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಎಚ್ಚೆತ್ತುಕೊಂಡು ಕೂಡಲೇ ಜಿಲ್ಲೆಯ ಶಾಸಕರು, ರೈತ ಮುಖಂಡರೊಂದಿಗೆ ಚರ್ಚಿಸಿ ಮುಂದಾಗುವ ಅನಾಹುತ ತಡೆಯಲು ಮುಂದಾಗಬೇಕು ಎಂದು ಆಗ್ರಹಿಸಿದರು.
6ರಂದು ಸಭೆ: ವಿದ್ಯುತ್ ಸಮಸ್ಯೆ ನಿವಾರಣೆ, ಕುಡಿಯುವ ನೀರು, ಜನ- ಜಾನುವಾರುಗಳ ರಕ್ಷಣೆ, ಬ್ಯಾಂಕ್ ಸಾಲ ವಸೂಲಿ ತಡೆ, ಕಬ್ಬು ಬೆಲೆ, ಇತರೆ ಸಮಸ್ಯೆಗಳ ಸಮರ್ಪಕವಾಗಿ ಎದುರಿಸಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಫೆ. 6ರಂದು ಮಧ್ಯಾಹ್ನ 3 ಗಂಟೆಗೆ ಸಭೆ ಕರೆಯಲಾಗಿದೆ. ಈ ಸಭೆಗೆ ಹಲವು ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಪುಟ್ಟಣ್ಣಯ್ಯ ತಿಳಿಸಿದರು.
25 ರಂದು ಪ್ರತಿಭಟನೆ: ಬರ ಪರಿಹಾರ ಕಾಮಗಾರಿ, ವಿ.ಸಿ. ನಾಲೆ ಆಧುನೀಕರಣ, ಟ್ರ್ಯಾಕ್ಟರ್ ಬ್ಯಾಂಕ್ ಸಾಲ ವಿತರಣೆ, ಕೃಷಿ ಕಾರ್ಮಿಕರಿಗೆ ಉದ್ಯೋಗ, ಭೂಮಿ ಮಾರಾಟಕ್ಕೆ ತಡೆ, ಕೃಷಿಕರು ಗುಳೆ ಹೋಗುವುದನ್ನು ತಡೆಯುವುದು ಸೇರಿದಂತೆ ರೈತರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳದಿದ್ದರೆ ಫೆ. 25 ರೊಳಗೆ ಸಾವಿರಾರು ರೈತರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಕ್ಕರೆ ಬೆಲೆಯನ್ನು ಆಮದು ಮಾಡಿಕೊಳ್ಳುವ ದೃಷ್ಟಿಯಿಂದ ಸಕ್ಕರೆ ದರ ಇಳಿಕೆ ಮಾಡಿದೆ. ಜೀವನಾವಶ್ಯಕ ವಸ್ತುಗಳ ಬೆಲೆ ಗಗನಕ್ಕೇರಿಸಿದೆ. ಈ ಬಗ್ಗೆ ಮಣ್ಣಿನ ಮಗ ಎಂದು ಸದಾ ಹೇಳಿಕೊಳ್ಳುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸಂಸತ್ತಿನಲ್ಲಿ ಧ್ವನಿ ಎತ್ತಲಿ ಎಂದು ಹೇಳಿದರು.
ಕೋಣಸಾಲೆ ನರಸರಾಜು, ಸುರೇಶ್, ವರದರಾಜು, ಚಂದ್ರು, ಬಿ.ಟಿ.ಮಂಜುನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments