ಭ್ರಷ್ಟಾಚಾರ ಮುಕ್ತ ದೇಶ ಗಾಂಧೀಜಿ ಕನಸು
ಮದ್ದೂರು: ಭ್ರಷ್ಟಾಚಾರ ಮುಕ್ತ ದೇಶ ನಿರ್ಮಾಣ ಗಾಂಧೀಜಿಯವರ ಆಶಯವಾಗಿತ್ತು ಎಂದು ಸ್ವಾತಂತ್ರ್ಯ ಹೋರಾಟಗಾರ ಡಾ.ಎಚ್.ಎಸ್. ದೊರೆಸ್ವಾಮಿ ಶುಕ್ರವಾರ ಹೇಳಿದರು.
ಪಟ್ಟಣದ ಎಚ್.ಕೆ. ವೀರಣ್ಣಗೌಡ ಕಾಲೇಜಿನಲ್ಲಿ ಗಾಂಧಿ ವಿಚಾರ ಪ್ರಣೀತ ರಾಜ್ಯ ಮಟ್ಟದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಕಾರ್ಯಾಗಾರದಲ್ಲಿ ಸೇವಾಧಾರ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು.
ಸಮಾಜ ಸೇವಕನಾದವನು ಬಡತನ ಅಪ್ಪಿಕೊಳ್ಳಬೇಕು. ಜೀವನದಲ್ಲಿ ಪರಾವಲಂಬಿಯಾಗದೆ ಜೀವನ ನಡೆಸಬೇಕು. ಕೇವಲ ಹೊಟ್ಟೆಪಾಡಿಗಾಗಿ ಸಮಾಜ ಸೇವೆ ಮಾಡಬಾರದು. ಬಡತನವನ್ನು ಅಪ್ಪಿಕೊಳ್ಳುವ ಉದ್ದೇಶದಿಂದ ಸಮಾಜ ಸೇವೆ ಮಾಡಿ ದೇಶಕ್ಕೆ ಒಳ್ಳೆ ಕೊಡುಗೆ ನೀಡಬೇಕು ಎಂದರು.
ಗಾಂಧೀಜಿಯವರ ಬದುಕು ಒಂದು ಸತ್ಯಾನ್ವೇಷಣೆಯ ಬದುಕಾಗಿತ್ತು. ಭ್ರಷ್ಟಾಚಾರ ಮುಕ್ತ, ಜಾತಿ ವ್ಯವಸ್ಥೆಯ ವಿರೋಧ, ಬಡತನದ ನಿಗ್ರಹದ ಮೂಲ ಆಶಯದೊಂದಿಗೆ ಅವರು ಮೂರು ತತ್ವ ಅಳವಡಿಸಿಕೊಂಡಿದ್ದರು ಎಂದು ಹೇಳಿದರು.
ಇಂದಿನ ದಿನಗಳಲ್ಲಿ ಸ್ವಾತಂತ್ರ್ಯ ಶ್ವೇಚ್ಚಾಚಾರಕ್ಕೆ ಬಳಕೆಯಾಗುತ್ತಿದೆ. ಇದರಿಂದ ದೇಶದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಹೆಚ್ಚಾಗುತ್ತಿವೆ. ನಮಲ್ಲಿರುವ ಪಂಚೇಂದ್ರಿಯಗಳನ್ನು ನಿಗ್ರಹ ಮಾಡಲು ಸಾಧ್ಯವಾಗದೆ ಗೊಂದಲಮಯ ಪರಿಸ್ಥಿತಿ ಉಂಟಾಗಿದೆ ಎಂದು ವಿಷಾದಿಸಿದರು.
ಯುವಕರು ಗಾಂಧೀಜಿಯವರ ತತ್ವಗಳಲ್ಲಿ ಅಗತ್ಯವಾದವುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೆಟ್ಟದ್ದನ್ನು ಬಿಟ್ಟು ಒಳ್ಳೆಯ ಗುಣ ಮತ್ತು ಭಾವನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಾಗಾರದ ಅಂಗವಾಗಿ ಶಿವಪುರ ಧ್ವಜ ಸತ್ಯಾಗ್ರಹ ಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ದೊರೆಸ್ವಾಮಿ ಅವರು ಧ್ವಜಾರೋಹಣ ನೆರವೇರಿಸಿದರು. ನಂತರ ಶಾಸಕಿ ಕಲ್ಪನಾ ಸಿದ್ದರಾಜು ಶಾಂತಿಯಾತ್ರೆಗೆ ಚಾಲನೆ ನೀಡಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.