ಯುವಜನರು ಗಾಂಧಿ ಮಾರ್ಗ ಅನುಸರಿಸಲಿ
ಮದ್ದೂರು: ಯುವಜನರು ಗಾಂಧಿ ಮಾರ್ಗದಲ್ಲಿ ಮುನ್ನಡೆಯುವ ಮೂಲಕ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಕೆ.ಎಸ್. ರಂಗಪ್ಪ ಶುಕ್ರವಾರ ಹೇಳಿದರು.
ಪಟ್ಟಣದ ಎಚ್.ಕೆ. ವೀರಣ್ಣಗೌಡ ಕಾಲೇಜಿನಲ್ಲಿ ಗಾಂಧಿ ವಿಚಾರ ಪ್ರಣೀತ ರಾಜ್ಯಮಟ್ಟದ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರ 11ನೇ ವರ್ಷದ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಯುವಕರು ಆಧುನಿಕ ತಂತ್ರಜ್ಞಾನದ ಅಂತರ್ಜಾಲ ಮತ್ತು ಮೊಬೆಲ್ ಸಂಸ್ಕೃತಿಗೆ ಮಾರು ಹೋಗುತ್ತಿರುವುದರಿಂದ ಗಾಂಧೀಜಿ ಮತ್ತಿತ್ತರ ಮಹಾನ್ ವ್ಯಕ್ತಿಗಳ ತತ್ವಾದರ್ಶಗಳು ನೇಪತ್ಯಕ್ಕೆ ಸರಿದು ಹೋಗುತ್ತಿವೆ ಎಂದು ವಿಷಾದಿಸಿದರು.
ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ ಅವರ ತತ್ವ- ಸಿದ್ಧಾಂತಗಳನ್ನು ಯುವಜನರು ಮರೆಯುತ್ತಿದ್ದಾರೆ. ಇಂತಹ ಪರಿಸ್ಥಿತಿ ದೇಶದ ಅಭಿವೃದ್ಧಿಗೆ ಮಾರಕವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ದೇಶದ ಸಂಸ್ಕೃತಿಯನ್ನು ಯಾವುದೇ ಪಾಶ್ಚಿಮಾತ್ಯ ದೇಶಗಳಿಗೆ ಹೊಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಹೈಕೋರ್ಟ್ ನಿವೃತ್ತ ರಿಜಿಸ್ಟಾರ್ ಶಿವಲಿಂಗಯ್ಯ ಸ್ವಯಂಸೇವಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಎಚ್.ಎಚ್. ಚನ್ನೇಗೌಡ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ಟಿ. ಚಂದು ಪ್ರಸ್ತಾವಿಕ ಭಾಷಣ ಮಾಡಿದರು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಡಾ.ಎಚ್.ಎಸ್. ದೊರೆಸ್ವಾಮಿ, ಗಾಂಧಿ ಫೌಂಡೇಷನ್ ಅಧ್ಯಕ್ಷ ಡಾ. ಹೂಡಿ ಬಿ. ಕೃಷ್ಣ ಪ್ರಧಾನ ಭಾಷಣ ಮಾಡಿದರು. ಸರ್ವೋದಯ ಮಂಡಲ ಯುವ ವಿಭಾಗದ ಸಂಚಾಲಕ ಡಾ.ಎಚ್.ಎಸ್. ಸುರೇಶ್, ಗಾಂಧಿ ಸ್ಮಾರಕ ಸಮಿತಿ ಜಂಟಿ ಕಾರ್ಯದರ್ಶಿ ಪ್ರೊ. ಬಿ.ಬಿ. ಶಿವರಾಜು, ಬಲವೀರ್ ಸೇನ್, ನಿರ್ದೇಶಕರಾದ ಪ್ರೊ. ಸಿದ್ದರಾಜು, ಪ್ರೊ.ಪ್ರಕಾಶ್, ಕಾರ್ಯದರ್ಶಿ ಕೆ.ಎಂ. ಸುರೇಶ್, ಚಂದ್ರೇಗೌಡ, ಸಂಚಾಲಕ ಅಪೂರ್ವ ಚಂದ್ರ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.