ಆರೋಗ್ಯಶ್ರೀ ಯೋಜನೆಗೆ ಆಯ್ಕೆ
ಕಿಕ್ಕೇರಿ: ಬಡಜನರ ಆರೋಗ್ಯಕ್ಕೆ ವರದಾನವಾದ ವಾಜಪೇಯಿ ಆರೋಗ್ಯಶ್ರೀ ಯೋಜನೆಯ ಫಲ ಪಡೆದುಕೊಳ್ಳಲು ಹೋಬಳಿಯ ವಿವಿಧ ಗ್ರಾಮಗಳಿಂದ ಅರ್ಹರನ್ನು ತಾಲೂಕು ವೈದ್ಯಾಧಿಕಾರಿ ಡಾ. ಹರೀಶ್ ಮಾರ್ಗದರ್ಶನದಲ್ಲಿ ಮಂಡ್ಯಕ್ಕೆ ವಿಶೇಷ ವಾಹನದಲ್ಲಿ ಪಟ್ಟಣದ ಸರ್ಕಾರಿ ಆರೋಗ್ಯ ಕೇಂದ್ರದಿಂದ ಕಳಿಸಲಾಯಿತು. ಹೋಬಳಿಯ ಲಕ್ಷ್ಮೀಪುರ, ಮಾದಾಪುರ, ಆನೆಗೂಳ, ಕುಂದೂರು, ಕೋಡಿಮಾರನಹಳ್ಳಿ, ಸಾಸಲು, ಐಕನಹಳ್ಳಿಯಂತಹ ಹಲವಾರು ಗ್ರಾಮಗಳಿಗೆ ನೇರವಾಗಿ ಆಗಮಿಸಿ ಅರ್ಹರನ್ನು ಗುರುತಿಸಿಕೊಂಡು ಆರೋಗ್ಯ ಸಿಬ್ಬಂದಿ ಮಂಡ್ಯಕ್ಕೆ ತೆರಳಿದರು. ಆರೋಗ್ಯ ಸಿಬ್ಬಂದಿಗಳಾದ ರಾಜು, ಮಧು, ಚೋಂದಮ್ಮ, ಸರಸ್ವತಿ, ವಿಂದ್ಯಾ, ಶೀನಪ್ಪ, ರವಿರಾಜು, ರಂಗಸ್ವಾಮಿ, ಸರೋಜಮ್ಮ, ತುಳಸಿ, ರೇಣುಕಮ್ಮ, ಮಮತ, ಮಾರಪ್ಪ ಮೊದಲಾದವರು ಹಾಜರಿದ್ದರು.
ಬೀಗ ಮುರಿದು ಆಭರಣ ಕಳವು
ಮದ್ದೂರು: ದುಷ್ಕರ್ಮಿಗಳ ಗುಂಪು ಮನೆಯ ಬೀಗ ಮುರಿದು ಐದು ಲಕ್ಷ ರು. ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿರುವ ಘಟನೆ ತಾಲೂಕಿನ ಕೆ.ಹೊನ್ನಲಗೆರೆ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ವರ್ತಕ ಶಿವಕುಮಾರ್ ಅವರಿಗೆ ಸೇರಿದ ಮನೆ ಬೀಗ ಮುರಿದು ಒಳನುಗ್ಗಿರುವ ದುಷ್ಕರ್ಮಿಗಳು ಬೀರುವಿನಲ್ಲಿದ್ದ ಐದು ಲಕ್ಷ ಮೌಲ್ಯದ 250 ಗ್ರಾಂ ಚಿನ್ನಾಭರಣ ಹಾಗೂ 16 ಸಾವಿರ ನಗದು ದೋಚಿದ್ದಾರೆ. ಬೀರುವಿನಲ್ಲಿದ್ದ ಬೆಳ್ಳಿಯ ಪದಾರ್ಥ ಹಾಗೂ ಬಟ್ಟೆಗಳನ್ನು ಹೊರತುಪಡಿಸಿ ಚಿನ್ನದ ಆಭರಣ ದೋಚಿದ್ದಾರೆ. ಮನೆಯ ಮಾಲೀಕ ಶಿವಕುಮಾರ್ ಕುಟುಂಬ ಸಮೇತ ಬೆಂಗಳೂರಿನ ಸಂಬಂಧಿಕರ ಮನೆಗೆ ತೆರಳಿದ್ದಾಗ ಘಟನೆ ನಡೆದಿದೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಲಾರಿ-ಬೈಕ್ ಡಿಕ್ಕಿ: ಮೂವರ ಸಾವು
ನಾಗಮಂಗಲ: ಲಾರಿ- ಬೈಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಮೂವರು ಮೃತಪಟ್ಟಿರುವ ಘಟನೆ ತಾಲೂಕಿನ ಚಂದ್ರಶೇಖರಪುರ ಗೇಟ್ ಬಳಿಯ ಶ್ರೀರಂಗಪಟ್ಟಣ- ಬೀದರ್ ಹೆದ್ದಾರಿಯಲ್ಲಿ ಭಾನುವಾರ ನಡೆದಿದೆ. ಕೆ.ಆರ್. ಪೇಟೆ ತಾಲೂಕು ಸಿದ್ದನಕ್ಯಾತನಹಳ್ಳಿ ಗ್ರಾಮದ ಶಂಕರೇಗೌಡ (28), ರಾಜಯ್ಯ (50) ಹಾಗೂ ಶಂಕರೇಗೌಡ (30) ಮೃತಪಟ್ಟವರು. ಮೃತರು ಹೀರೋಹೊಂಡಾ ಬೈಕ್‌ನಲ್ಲಿ ತುಮಕೂರು ಜಿಲ್ಲೆ ಮಾಯಸಂದ್ರದಿಂದ ಕೆ.ಆರ್. ಪೇಟೆಗೆ ಬರುತ್ತಿದ್ದಾಗ ಚುಂಚನಗಿರಿಯಿಂದ ಮಾಯಸಂದ್ರದತ್ತ ತೆರಳುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಘಟನೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.