ಗ್ರಾಮ ವಾಸ್ತವ್ಯ ಚುನಾವಣೆ ಗಿಮಿಕ್: ಸುರೇಶ್ಗೌಡ
ಮದ್ದೂರು: ದಲಿತರನ್ನು ಓಲೈಸಿಕೊಳ್ಳಲು ಸಂಸದ ಚಲುವರಾಯಸ್ವಾಮಿ ನಡೆಸುತ್ತಿರುವ ಗ್ರಾಮ ವಾಸ್ತವ್ಯ ಚುನಾವಣಾ ಗಿಮಿಕ್ ಎಂದು ಶಾಸಕ ಕೆ. ಸುರೇಶ್ಗೌಡ ಭಾನುವಾರ ಟೀಕಿಸಿದರು.
ಕನ್ನಡಪ್ರಭದೊಂದಿಗೆ ಮಾತನಾಡಿ, ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಚಲುವರಾಯಸ್ವಾಮಿ ಅವರಿಗೆ ದಲಿತರು ನೆನಪಾಗಿದ್ದಾರೆ. ಶಾಸಕರಾಗಿ, ಸಚಿವರಾದಾಗ ಏಕೆ ದಲಿತರು ನೆನಪಿಗೆ ಬರಲಿಲ್ಲ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯಾರನ್ನು ಮುಖ್ಯಮಂತ್ರಿಯಾಗಿ ಮಾಡಬೇಕು ಎಂಬುದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ. ನಿಮಗೆ ತಾಕತ್ತಿದ್ದರೆ ದೇವೇಗೌಡರ ಕುಟುಂಬದವರನ್ನು ಬಿಟ್ಟು ಬೇರೆಯವರನ್ನು ಮುಖ್ಯಮಂತ್ರಿ ಎಂದು ಘೋಷಿಸಿ ನೋಡೋಣ ಎಂದು ಚಲುವರಾಯಸ್ವಾಮಿ ಅವರಿಗೆ ಸವಾಲು ಹಾಕಿದರು.
ದಲಿತರು ಕಾಂಗ್ರೆಸ್ನ ಬೆನ್ನೆಲುಬು. ಕಾಂಗ್ರೆಸ್ ಪಕ್ಷ ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ, ಪರಮೇಶ್ವರ್ ಸೇರಿದಂತೆ ಅನೇಕ ದಲಿತ ನಾಯಕರಿಗೆ ಉನ್ನತ ಹುದ್ದೆ ನೀಡಿದೆ. ಜೆಡಿಎಸ್ ದಲಿತರಿಗೆ ಯಾವ ಹುದ್ದೆ ನೀಡಿದೆ ಎಂದರು.
ಜೆಡಿಎಸ್ ದಲಿತ ವ್ಯಕ್ತಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುವುದು ಬೇಡ. ಕನಿಷ್ಠ ಮಂಡ್ಯ ಜಿಲ್ಲೆಯ ಜೆಡಿಎಸ್ ಅಧ್ಯಕ್ಷರನ್ನಾಗಿ ಒಬ್ಬ ದಲಿತ ವ್ಯಕ್ತಿಯನ್ನು ನೇಮಕ ಮಾಡಿ ತೋರಿಸಲಿ. ಚನ್ನಪಟ್ಟಣ ಮೂಲದ ವ್ಯಕ್ತಿಯನ್ನು ಆಮದು ಮಾಡಿಕೊಳ್ಳುವ ಅನಿವಾರ್ಯ ಏನಿತ್ತು ಎಂದು ಟೀಕಿಸಿದರು.
ಗ್ರಾಮ ವಾಸ್ತವ್ಯ ಮಾಡುತ್ತಿರುವ ನಾಯಕರು ಹಾಸಿಗೆ, ದಿಂಬು ಎಲ್ಲವನ್ನೂ ಬೆಂಗಳೂರಿನಿಂದ ತಂದು ಮಲಗುತ್ತಿದ್ದಾರೆ. ಇಂಥ ನಾಯಕರಿಂದ ಅಸಮಾನತೆ ಹೋಗಲಾಡಿಸಲು ಹೇಗೆ ಸಾಧ್ಯವಾಗುತ್ತದೆ ಎಂದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.