ಗಂಗಾಕಲ್ಯಾಣ ಯೋಜನೆ ಅಸಮರ್ಪಕ
ನಾಗಮಂಗಲ: ಗಂಗಾಕಲ್ಯಾಣ ಯೋಜನೆಯಲ್ಲಿ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವಲ್ಲಿ ತಾಲೂಕು ಸೆಸ್ಕಾಂ ವಿಫಲವಾಗಿದೆ ಎಂದು ದಸಂಸ ಜಿಲ್ಲಾ ಸಂಚಾಲಕ ಎಂ.ನಾಗರಾಜಯ್ಯ ಆಗ್ರಹಿಸಿದ್ದಾರೆ. ತಾಲೂಕಿನಾದ್ಯಂತ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಫಲಾನುಭವಿಗಳಿಗೆ ಸರ್ಕಾರ ಗಂಗಾಕಲ್ಯಾಣ ಯೋಜನೆಯಲ್ಲಿ ವೈಯಕ್ತಿಕ ಕೊಳವೆ ಬಾವಿ ಕೊರೆಸಿದೆ. ಕೊರೆಸಿರುವ ಬಾವಿಗಳಿಗೆ ಮೂರು ವರ್ಷ ಕಳೆದರೂ ವಿದ್ಯುತ್ ಸಂಪರ್ಕ ಒದಗಿಸಿಲ್ಲ. ಈ ನಿಟ್ಟಿನಲ್ಲಿ ದಲಿತ ಫಲಾನುಭವಿಗಳು ಸಂಕಷ್ಟದಲ್ಲಿದ್ದಾರೆ. ಈ ಬಗ್ಗೆ ಯಾವ ಅಧಿಕಾರಿಯೂ ಕ್ರಮ ಕೈಗೊಳ್ಳುತ್ತಿಲ್ಲ. ಈ ಸಂಬಂಧ ತಹಸೀಲ್ದಾರ್ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿಕೆಯಲ್ಲಿ ದೂರಿದ್ದಾರೆ. ದೇವಲಾಪುರ ಹೋಬಳಿ ಅಂಕನಹಳ್ಳಿ ಗ್ರಾಮದ ಬೋರಮ್ಮ ಎಂಬುವರ ಕೊಳವೆ ಬಾವಿಗೆ ಸಂಬಂಧಿಸಿದಂತೆ ನಾಲ್ಕು ವಿದ್ಯುತ್ ಕಂಬ ಬಿಟ್ಟರೆ ಬೇರೆ ಯಾವುದೆ ಸಲಕರಣೆ ನೀಡಿಲ್ಲ. ಆದರೆ, ಇ-4098,10-12-2010ರಲ್ಲಿ ನಂಬರ್ ಮಾಡಿ ಎನ್.ಐ.ಪಿ. 4833 ಎಂಬ ಕ್ರಮ ಸಂಖ್ಯೆ ಕೊಟ್ಟು ವಿದ್ಯುತ್ ಸಂಪರ್ಕ ಕಲ್ಪಿಸಿದೆ ಎಂಬ ದಾಖಲೆ ಸೃಷ್ಟಿಸಿಕೊಂಡಿದ್ದಾರೆ. ಇಂತಹ ವಂಚನೆ ಪ್ರಕರಣಗಳು ಇಲಾಖೆಯಲ್ಲಿ ಸಾಕಷ್ಟಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಅವರು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ಅಪರಿಚಿತ ಶವ ಪತ್ತೆ
ಮಂಡ್ಯ: ತಾಲೂಕಿನ ಪುರದಕೊಪ್ಪಲು ಗ್ರಾಮದ ತೋಟವೊಂದರಲ್ಲಿ ಅಪರಿಚಿತ ಪುರುಷನ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಗೆ ಸುಮಾರು 50 ವರ್ಷ ಎಂದು ಅಂದಾಜಿಸಲಾಗಿದೆ.ವಿಷ ಸೇವಿಸಿ ವ್ಯಕ್ತಿ ಸಾವನ್ನಪ್ಪಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೃತ ವ್ಯಕ್ತಿಯ ಕತ್ತು, ಬಲ ತೋಳಿನಲ್ಲಿ ಯಂತ್ರದ ದಾರ, ಬಲಗೈಯಲ್ಲಿ ಚಿಕ್ಕಹೈದಯ್ಯ ಎಂದು ಹಸಿರು ಹಚ್ಚೆ, ಹಿತ್ತಾಳೆಯ ಬಳೆ ಇದೆ. 168 ಸೆ.ಮೀ ಎತ್ತರ, ಗೋಧಿ ಮೈ ಬಣ್ಣ, ದೃಢಕಾಯ ಶರೀರ, ತಲೆಯಲ್ಲಿ ಕಪ್ಪು, ಬಿಳಿ ಮಿಶ್ರಿತ ಕೂದಲು, ಕುರುಚಲು ಗಡ್ಡ, ಕಂದು ಬಣ್ಣದ ಬನಿಯನ್, ಪಾಚಿ ಬಣ್ಣದ ಕಪ್ಪು ಗೀರುಳ್ಳ ಅರ್ಧ ತೋಳಿನ ಶರ್ಟ್, ನೀಲಿ ಅಂಡರ್ ವೇರ್, ಲುಂಗಿ ಧರಿಸಿದ್ದಾರೆ. ಶವವನ್ನು ಜಿಲ್ಲಾಸ್ಪತ್ರೆ ಶವಗಾರದಲ್ಲಿ ಇಡಲಾಗಿದೆ, ವಾರಸುದಾರರಿದ್ದಲ್ಲಿ ತಾಲೂಕಿನ ಶಿವಳ್ಳಿ ಪೊಲೀಸ್ ಠಾಣೆ ಸಂಪರ್ಕಿಸಬಹುದು.