ದುಷ್ಕರ್ಮಿಗಳ ಕೃತ್ಯ: ಬಾಳೆ ಬೆಳೆ ನಾಶ
ಮದ್ದೂರು: ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳ ಗುಂಪೊಂದು 3.60 ಲಕ್ಷ ರು. ಮೌಲ್ಯದ ಫಸಲು ಭರಿತ ಬಾಳೆ ತೋಟ ನಾಶ ಮಾಡಿರುವ ಘಟನೆ ತಾಲೂಕಿನ ಅರೆತಿಪ್ಪೂರು ಗ್ರಾಮದಲ್ಲಿ ಮಧ್ಯರಾತ್ರಿ ಜರುಗಿದೆ. ತಾಲೂಕಿನ ಕೂಳಗೆರೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಎ.ಎಂ.ಪುಟ್ಟಸ್ವಾಮಿ ಎಂಬುವವರಿಗೆ ಸೇರಿದ 900 ಫಸಲು ಭರಿತ ಯಾಲಕ್ಕಿ ಬಾಳೆ ಗಿಡಗಳನ್ನು ದುಷ್ಕರ್ಮಿಗಳು ನಾಶಪಡಿಸಿ ಪರಾರಿಯಾಗಿದ್ದಾರೆ. ಮಾಜಿ ಗ್ರಾಪಂ ಅಧ್ಯಕ್ಷ ಪುಟ್ಟಸ್ವಾಮಿ ತಮ್ಮ ಸ್ವಗ್ರಾಮ ಅರೆತಿಪ್ಪೂರು ಗ್ರಾಮದ ಗಡಿ ಭಾಗದಲ್ಲಿರುವ ಚನ್ನಪಟ್ಟಣ ತಾಲೂಕು ನೇರಳೂರು ಗ್ರಾಮದ ಸರ್ವೆ 252ರಲ್ಲಿ, 1.26 ಗುಂಟೆ ಜಮೀನಿನಲ್ಲಿ ಯಾಲಕ್ಕಿ ಬಾಳೆ ಬೆಳೆದಿದ್ದರು. ಕೆಲ ತಿಂಗಳ ನಂತರ ಕಟಾವು ಹಂತಕ್ಕೆ ಬಂದಿದ್ದ ಬಾಳೆ ಫಸಲನ್ನು ಶುಕ್ರವಾರ ರಾತ್ರಿ ನಾಲ್ವರು ದುಷ್ಕರ್ಮಿಗಳ ಗುಂಪು ನಾಶ ಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಗ್ರಾಮದಲ್ಲಿ ಚಾಮುಂಡೇಶ್ವರಿ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ನಾಟಕ ಪ್ರದರ್ಶನದಲ್ಲಿ ಗ್ರಾಮಸ್ಥರು ತಲೀನರಾಗಿದ್ದ ಸಂದರ್ಭ ದುರುಪಯೋಗ ಪಡಿಸಿಕೊಂಡ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ದೂರಲಾಗಿದೆ. ಪುಟ್ಟಸ್ವಾಮಿಯವರ ದೂರಿನ ಹಿನ್ನೆಲೆಯಲ್ಲಿ ಅಕ್ಕೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.