'ಪ್ರತಿ ಹಳ್ಳಿಗಳಲ್ಲಿ ಕಾವೇರಿ ರಥ ಸಂಚಾರ'
ಮಂಡ್ಯ: ಜನರಲ್ಲಿ ಕಾವೇರಿ ಬಗೆಗೆ ಶಾಶ್ವತ ಪೂಜ್ಯ ಭಾವನೆ ಮೂಡಿಸುವ ನಿಟ್ಟಿನಲ್ಲಿ ಶ್ರೀ ಕಾವೇರಿ ಟ್ರಸ್ಟ್ ನಿರ್ಮಿಸಿರುವ ಕಾವೇರಿ ರಥ ಜಿಲ್ಲೆಯ ಪ್ರತಿ ಹಳ್ಳಿಗಳಲ್ಲಿ ಸಂಚರಿಸಲಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ ತಿಳಿಸಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟ್ರಸ್ಟಿನ ಧ್ಯೈಯೋದ್ದೇಶಗಳನ್ನು ಸಾಧಿಸುವ ನಿಟ್ಟಿನಲ್ಲಿ ಮೊದಲ ಹಂತವಾಗಿ 15 ಲಕ್ಷ ವೆಚ್ಚದಲ್ಲಿ ಕಾವೇರಿ ರಥ ನಿರ್ಮಿಸಲಾಗಿದೆ. ಮಾ.13ರಂದು ಶ್ರೀ ರವಿಶಂಕರ ಗುರೂಜಿ ರಥ ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ ಎಂದರು. ಈಗಿನ ಯುವ ಜನತೆ ಕಾವೇರಿ ನದಿ ನೀರಿನ ಹೋರಾಟದಲ್ಲಿ ನಿರಾಸಕ್ತಿ ತೋರುತ್ತಿದ್ದಾರೆ. ಭಾವನಾತ್ಮಕ ಐಕ್ಯತೆಯಲ್ಲಿ ಕೊರತೆ ಕಂಡು ಬರುತ್ತಿದೆ. ಜಿಲ್ಲೆಯ ಸಮಸ್ತ ಜನರಲ್ಲಿ ಕಾವೇರಿ ಬಗ್ಗೆ ಶಾಶ್ವತವಾದ ಪೂಜ್ಯಭಾವನೆ ಮೂಡಿಸುವುದು ಟ್ರಸ್ಟಿನ ಉದ್ದೇಶಗಳಲ್ಲಿ ಒಂದಾಗಿದೆ ಎಂದು ಹೇಳಿದರು. ದಾನಿಗಳಿಂದ ಹಣ ಸಂಗ್ರಹಿಸಿ ಸುಮಾರು 8 ರಿಂದ 10 ಕೋಟಿ ರು. ವೆಚ್ಚದಲ್ಲಿ ಕಾವೇರಿ ಮಾತೆಯ ದೇಗುಲ ನಿರ್ಮಾಣ ಮಾಡಲಾಗುವುದು. ಜಿಲ್ಲೆಯ ಯುವಕರಲ್ಲಿ ಕಾವೇರಿ ನದಿ ನೀರಿನ ಹಂಚಿಕೆ ವಿಚಾರಗಳ ಹಾಗೂ ನೀರಿನ ಸದ್ಬಳಕೆ ಕುರಿತಂತೆ ಅರಿವು ಮೂಡಿಸಲಾಗುವುದು ಎಂದು ಶಿವಲಿಂಗಯ್ಯ ತಿಳಿಸಿದರು.