ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮಂಡ್ಯ

ಸ್ಥಳೀಯ ಚುನಾವಣಾ ಪ್ರಕ್ರಿಯೆ ಶುರು

Parashurama
Updated On : 17 Feb 2013, 12:30 pm

ಮಂಡ್ಯ: ಜಿಲ್ಲೆಯ ಒಂದು ನಗರಸಭೆ, 4 ಪುರಸಭೆ ಹಾಗೂ 2 ಪಪಂಗಳ ಚುನಾವಣೆಗೆ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ ಶನಿವಾರ ಅಧಿಕೃತ ಅಧಿಸೂಚನೆ ಹೊರಡಿಸಿದ್ದಾರೆ.
ಈ ಅಧಿಸೂಚನೆಯಂತೆ ಫೆ.16ರಿಂದಲೇ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗುತ್ತದೆ. ನಾಮಪತ್ರ ಸಲ್ಲಿಸಲು ಫೆ.23 ಕೊನೆ ದಿನ. ಫೆ.25 ನಾಮಪತ್ರ ಪರಿಶೀಲನೆ. ಫೆ.27 ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳಲು ಕೊನೆ ದಿನ. ಮಾ.7 ರಂದು ಬೆಳಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಮತದಾನ, ಮಾರ್ಚ್ 11 ರಂದು ಮತ ಎಣಿಕೆ ಕಾರ್ಯ ಬೆಳಗ್ಗೆ 8 ಗಂಟೆಯಿಂದ ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ ಎಂದು ಕೃಷ್ಣಯ್ಯ ಅವರು ತಿಳಿಸಿದ್ದಾರೆ.
ಮತಗಟ್ಟೆ, ಮತದಾರರ ವಿವರ: ಮಂಡ್ಯ ನಗರಸಭೆಯಲ್ಲಿ 35 ವಾರ್ಡ್‌ಗಳಿವೆ. 118 ಮತಗಟ್ಟೆಗಳು, 91,125 ಮತದಾರರು. ಮದ್ದೂರು ಪುರಸಭೆಯಲ್ಲಿ 23 ವಾರ್ಡ್‌ಗಳು, 23 ಮತಗಟ್ಟೆಗಳು, 18,993 ಮತದಾರರು., ಮಳವಳ್ಳಿ ಪುರಸಭೆಯಲ್ಲಿ 23 ವಾರ್ಡ್‌ಗಳು, 27 ಮತಗಟ್ಟೆಗಳು, 25,347 ಮತದಾರರು., ಶ್ರೀರಂಗಪಟ್ಟಣ ಪುರಸಭೆಯಲ್ಲಿ 23 ವಾರ್ಡ್‌ಗಳು, 23 ಮತಗಟ್ಟೆಗಳು, 16,052 ಮತದಾರರು.
ಕೆ.ಆರ್.ಪೇಟೆ ಪುರಸಭೆಯಲ್ಲಿ 23 ವಾರ್ಡ್‌ಗಳು, 23 ಮತಗಟ್ಟೆಗಳು, 13635 ಮತದಾರರು., ಪಾಂಡವಪುರ ಪಟ್ಟಣ ಪಂಚಾಯ್ತಿಯಲ್ಲಿ 18 ವಾರ್ಡ್‌ಗಳು, 18 ಮತಗಟ್ಟೆಗಳು, 12,639 ಮತದಾರರು., ನಾಗಮಂಗಲ ಪಟ್ಟಣ ಪಂಚಾಯ್ತಿಯಲ್ಲಿ 16 ವಾರ್ಡ್‌ಗಳು, 16 ಮತಗಟ್ಟೆಗಳು, 13,407 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಜಿಲ್ಲಾದ್ಯಂತ 7 ಸ್ಥಳೀಯ ಸಂಸ್ಥೆಗಳಲ್ಲಿ 161 ವಾರ್ಡ್‌ಗಳಿಗೆ 248 ಮತಗಟ್ಟೆಗಳು ಇವೆ. ಪುರುಷರು 97,336, ಮಹಿಳೆಯರು - 96,862 ( ಒಟ್ಟು - 1,91,198) ಮತದಾರರು ಮತ ಚಲಾಯಿಸಲಿದ್ದಾರೆ.
ಅಧಿಕಾರಿಗಳ ನೇಮಕ: ಮಂಡ್ಯ ನಗರಸಭೆಗೆ ಚುನಾವಣೆ ನಡೆಸಲು ಉಪವಿಭಾಗಾಧಿಕಾರಿಗಳನ್ನು ಚುನಾವಣಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಅದೇ ರೀತಿಯಲ್ಲಿ ತಹಸೀಲ್ದಾರ್ ಅವರನ್ನು ಉಪಚುನಾವಣಾಧಿಕಾರಿಯಾಗಿ ನೇಮಿಸಲಾಗಿದೆ. ಪುರಸಭೆ ಮತ್ತು ಪಟ್ಟಣ ಪಂಚಾಯ್ತಿಗಳಲ್ಲಿ ಚುನಾವಣೆ ನಡೆಸಲು ತಹಸೀಲ್ದಾರ್ ಹಾಗೂ ಶಿರಸ್ತೇದಾರ್ ಅವರನ್ನು ಕ್ರಮವಾಗಿ ಚುನಾವಣಾ ಮತ್ತು ಉಪಚುನಾವಣಾಧಿಕಾರಿಗಳಾಗಿ ನೇಮಿಸಲಾಗಿದೆ.
ಫೆ.15ರಿಂದಲೇ ಜಿಲ್ಲಾದ್ಯಂತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಚುನಾವಣಾ ಆಯೋಗದ ಅನುಮತಿ ಇಲ್ಲದೇ ಯಾವುದೇ ಸರ್ಕಾರಿ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ.
ನಾಮಪತ್ರಗಳ ಸ್ವೀಕೃತಿ: ಫೆ.16ರಿಂದ 23ರವರೆಗೆ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರ ಸ್ವೀಕರಿಸಲಾಗುವುದು. ನಾಮಪತ್ರ ಸಲ್ಲಿಸುವವರ ಜತೆ 5 ಜನ ಹಾಗೂ 2 ವಾಹನಗಳನ್ನು ಮಾತ್ರ ತರುವಂತೆ ಸೂಚಿಸಲಾಗಿದೆ. ಒಂದು ವಾರ್ಡ್‌ನಿಂದ ಗರಿಷ್ಠ 4 ನಾಮಪತ್ರಗಳನ್ನು ಸಲ್ಲಿಸಬಹುದು.
ನಗರಸಭೆಗೆ ಸಾಮಾನ್ಯ ಅಭ್ಯರ್ಥಿಗಳು 2 ಸಾವಿರ ರು., ಎಸ್ಸಿ ಎಸ್ಟಿ 1000 ರು., ಪುರಸಭೆ ಮತ್ತು ಪಟ್ಟಣ ಪಂಚಾಯ್ತಿಗಳಲ್ಲಿ ಸಾಮಾನ್ಯ ಅಭ್ಯರ್ಥಿಗಳು 1000 ರು., ಎಸ್ಸಿ ಎಸ್ಟಿ ಅಭ್ಯರ್ಥಿಗಳು 500 ರು. ಠೇವಣಿ ಇಡಬೇಕು.
ಚುನಾವಣಾ ಖರ್ಚು ವೆಚ್ಚದ ಮಿತಿ: ನಗರಸಭೆಗೆ 2 ಲಕ್ಷ ರು. ಮೀರುವಂತಿಲ್ಲ. ಪುರಸಭೆಗೆ 1.50 ಲಕ್ಷ ರು., ಪಟ್ಟಣ ಪಂಚಾಯ್ತಿಗೆ 1 ಲಕ್ಷ ರು. ಮೀರದಂತೆ ಖರ್ಚು ಮಾಡಬಹುದು. ಇದೇ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರ ಬಳಕೆ ಮಾಡಲಾಗುತ್ತಿದೆ.
ಚುನಾವಣಾ ವೀಕ್ಷಕರು: ಮಂಡ್ಯ ನಗರಸಭೆ, ಮದ್ದೂರು ಪುರಸಭೆ, ಮಳವಳ್ಳಿಗೆ ಬಿಬಿಎಂಪಿ ಬೆಂಗಳೂರು ಬೊಮ್ಮನಹಳ್ಳಿ ವಲಯದ ಜಂಟಿ ನಿರ್ದೇಶಕ ಎಚ್.ಜನ್ನಪ್ಪ, ಪಾಂಡವಪುರ, ಶ್ರೀರಂಗಪಟ್ಟಣ, ನಾಗಮಂಗಲ, ಕೆ.ಆರ್.ಪೇಟೆ ಪುರಸಭೆಗೆ ಬಿಬಿಎಂಪಿ ಬ್ಯಾಟರಾಯನಪುರ ವಲಯದ ಜಂಟಿ ಆಯುಕ್ತ ವೈ.ಎಂ.ರಾಮಚಂದ್ರಮೂರ್ತಿ ವೀಕ್ಷಕರಾಗಿ ಚುನಾವಣಾ ಆಯೋಗ ನೇಮಕ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement