ಕೆಂಪುಕೃಷ್ಣ ಪಾಂಡವಪುರ ಎಪಿಎಂಸಿ ಅಧ್ಯಕ್ಷ
ಪಾಂಡವಪುರ: ಪಾಂಡವಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎಂ.ಕೆ. ಕೆಂಪುಕೃಷ್ಣ, ಉಪಾಧ್ಯಕ್ಷರಾಗಿ ಲೋಲಾಕ್ಷಿ ಅವಿರೋಧ ಆಯ್ಕೆ ಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಹಸೀಲ್ದಾರ್ ಪಾಪಣ್ಣ ತಿಳಿಸಿದ್ದಾರೆ.
ಹಾಲಿ ಅಧ್ಯಕ್ಷ, ಉಪಾಧ್ಯಕ್ಷರ 20 ತಿಂಗಳ ಅವಧಿ ಮುಗಿದ ಹಿನ್ನಲೆಯಲ್ಲಿ ಇನ್ನು ಉಳಿದ 20 ತಿಂಗಳ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಶನಿವಾರ ಚುನಾವಣೆ ನಿಗದಿಯಾಗಿತ್ತು. ಅದರಂತೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾದ ಎಂ.ಕೆ. ಕೆಂಪುಕೃಷ್ಣ, ಲೋಲಾಕ್ಷಿ ನಾಮಪತ್ರ ಸಲ್ಲಿಸಿದರು. ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಈ ಇಬ್ಬರು ಅವಿರೋಧ ಅಯ್ಕೆ ಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪ್ರಕಟಿಸಿದರು.
ನೂತನ ಅಧ್ಯಕ್ಷರಾಗಿ ಅಯ್ಕೆಯಾದ ಎಂ.ಕೆ.ಕೆಂಪುಕೃಷ್ಣ ಮಾತನಾಡಿ, ಪಾಂಡವಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯನ್ನು ಜಿಲ್ಲೆಗೆ ಮಾದರಿಯಾಗಿ ಮಾಡುವುದೇ ನನ್ನ ಮುಖ್ಯ ಗುರಿಯಾಗಿದೆ ಪಕ್ಷಾತೀತವಾಗಿ ಎಲ್ಲಾ ನಿರ್ದೇಶಕರ ಸಹಕಾರ ಹಾಗೂ ಶಾಸಕ ಸಿ.ಎಸ್.ಪುಟ್ಟರಾಜು ಅವರ ಸಹಕಾರ ಮತ್ತು ಮಾರ್ಗದರ್ಶನದೊಂದಿಗೆ ಕೃಷಿ ಮಾರುಕಟ್ಟೆ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಎಳೆನೀರು ಮಾರುಕಟ್ಟೆಗೆ ಪ್ಲಾಟ್‌ಫಾರಂ ವ್ಯವಸ್ಥೆ ಕಲ್ಪಿಸುವುದು. ಮಾರುಕಟ್ಟೆಯ ಒಳಗೆ ರಸ್ತೆ ಅಭಿವೃದ್ಧಿ ಪಡಿಸಿ, ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಜಿಲ್ಲೆಗೇ ಮಾದರಿ ಮಾಡುವುದಾಗಿ ತಿಳಿಸಿದರು.
ಶಾಸಕ ಪುಟ್ಟರಾಜು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿ, ಪಕ್ಷಾತೀತವಾಗಿ ಅಭಿವೃದ್ಧಿಪಡಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ಕಿವಿಮಾತು ಹೇಳಿದರು.
ಗೊಂದಲ ಗಲಾಟೆ: ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಪಕ್ರಿಯೆ ಪ್ರಾರಂಭವಾಗುತ್ತಿದ್ದಂತೆ, ಈ ಹಿಂದೆ ಬಿಜೆಪಿ ಸರ್ಕಾರದಿಂದ ನಾಮ ನಿರ್ದೇಶನಗೊಂಡಿದ್ದ ಜಗದೀಶ್, ಬಿ.ನಿಂಗಪ್ಪ, ಪ್ರಕಾಶ್ ಇವರನ್ನು ವಜಾಗೊಳಿಸಿ ಹೊಸದಾಗಿ ಸರ್ಕಾರದಿಂದ ಜೆ.ಬಾಲಗಂಗಾಧರ್, ಎನ್.ಆರ್. ಧನಂಜಯ. ಹೆಚ್. ಶಂಕರೇಗೌಡ, ಇವರನ್ನು ನಾಮ ನಿರ್ದೇಶನ ಮಾಡಿಕೊಂಡು ಬಂದಿರುವುದಕ್ಕೆ ಚುನಾವಣೆಯಲ್ಲಿ ಕೂಗಾಟ, ಗಲಾಟೆ ಪ್ರಾರಂಭವಾಗಿ ಕೆಲ ಕಾಲ ಗೊಂದಲ ಗೂಡಾಗಿತ್ತು.
ಸರ್ಕಾರದಿಂದ ಫ್ಯಾಕ್ಸ್ ಮೂಲಕ ನೂತನ ನಾಮಿನಿ ನಿರ್ದೇಶಕರ ಹೆಸರು ಬಂದ ತಕ್ಷಣ ಅವರನ್ನು ಚುನಾವಣೆಯಲ್ಲಿ ಭಾಗವಹಿಸಲು ಅವಕಾಶವಿದೆ ಈ ಹಿಂದೆ ಇದ್ದವರನ್ನು ವಜಾಗೊಳಿಸಿ ಎಂದು ಚುನಾವಣಾಧಿಕಾರಿ ಹೇಳಿದಾಗ ಗೊಂದಲಕ್ಕೆ ಕಾರಣವಾಯಿತು.
ಉಪವಿಭಾಗಾಧಿಕಾರಿ ಅರ್.ಲತಾ ಚುನಾವಣೆ ಸ್ಥಳಕ್ಕೆ ತಕ್ಷಣ ಭೇಟಿ ನೀಡಿ, ಕಾನೂನು ರೀತಿ ಈ ಚುನಾವಣೆ ನಡೆಸಬೇಕಾದರೆ ಸರ್ಕಾರದಿಂದ ಬಂದಿರುವ ನಾಮಿನಿ ನಿರ್ದೇಶಕರನ್ನು ಪರಿಗಣಿಸಿಗೆ ತೆಗೆದುಕೊಳ್ಳಲೇಬೇಕಾಗಿದೆ. ಅದರಿಂದ ಯಾರು ಇದಕ್ಕೆ ಗಲಾಟೆಗೆ ಅವಕಾಶವಿಲ್ಲ ಒಂದು ವೇಳೆ ಗಲಾಟೆ ಮಾಡಿದರೆ ಕಾನೂನು ರೀತಿ ಕ್ರಮ ಜರುಗಿಸಬೇಕಾಗುತ್ತದೆ ಎಂದಾಗ ಗಲಾಟೆ ನಿಲ್ಲಿಸಿ ಚುನಾವಣೆಗೆ ಅನುವು ಮಾಡಿಕೊಟ್ಟರು.
ಜೆಡಿಎಸ್ ಮುಖಂಡರಾದ ಗುರುಸ್ವಾಮಿ, ಅರ್.ಎಂ. ಪುಟ್ಟರಾಜು, ಬೆಟ್ಟಸ್ವಾಮೀಗೌ ಅನಂದಣ್ಣ, ಟಿ.ಎ.ಪಿ.ಸಿ.ಎಂ.ಎಸ್. ಮಾಜಿ ಅಧ್ಯಕ್ಷ ರಾಮಕೃಷ್ಣೇಗೌಡ, ಇನ್ನು ಅನೇಕ ಮುಖಂಡರು ಉಪಸ್ಥಿತರಿದ್ದರು.