ಚೆಲುವ ನೋಡಮ್ಮ...
ಮೇಲುಕೋಟೆ: ಶ್ರೀ ಚೆಲುವರಾಯಸ್ವಾಮಿ ಅವರ ರಥಸಪ್ತಮಿ ಉತ್ಸವದ ಸೂರ್ಯಮಂಡಲವಾಹನೋತ್ಸವ ಭಾನುವಾರ ಮುಂಜಾನೆ ಜಾನಪದಕಲಾಮೇಳದ ಮೆರುಗಿನೊಂದಿಗೆ ಅದ್ಧೂರಿಯಾಗಿ ನೆರವೇರಿತು.
ಸೂರ್ಯದೇವನ ಹಬ್ಬವೆಂದೇ ಹೆಸರಾದ ರಥಸಪ್ತಮಿಯಂದು ನಡೆದ ಚೆಲುವನಾರಾಯಣಸ್ವಾಮಿಯ ಉತ್ಸವದಲ್ಲಿ ಸಹಸ್ರಾರು ಭಕ್ತರು ಭಾಗವಹಿಸಿ ದೇವರ ದರ್ಶನ ಮಾಡುವ ಜೊತೆಗೆ ಜಾನಪದ ಕಲೆಯ ವೈಭವಕ್ಕೆ ಸಾಕ್ಷಿಯಾದರು. ಸೂರ್ಯಮಂಡಲದೊಂದಿಗೆ ರಥಾರೂಢನಾದ ಶ್ರೀಚೆಲುವರಾಯಸ್ವಾಮಿ ಉತ್ಸವ ಆಕರ್ಷಕ ಜಾನಪದ ಕಲಾಮೇಳದ ವೈಭವದೊಂದಿಗೆ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ನೆರವೇರಿತು.
ಇಕ್ಕೆಲದಲ್ಲಿ ನೆರದ ಭಕ್ತರು ಸ್ಥಾನೀಕಂ ಪ್ರಕಾಶನದ ಸಾಂಸ್ಕೃತಿಕ ವೇದಿಕೆ ಮತ್ತು ವಿಶ್ವ ಹಿಂದೂ ಧರ್ಮಸಂರಕ್ಷಣಾ ವೇದಿಕೆ ಏರ್ಪಡಿಸಿದ್ದ 14ನೇ ವರ್ಷದ ರಾಜ್ಯಮಟ್ಟದ ಜಾನಪದ ಕಲಾ ಮೇಳದಲ್ಲಿ ಪಾಲ್ಗೊಂಡ ಪೂಜಾ ಕುಣಿತ, ಜಾಂಜ್, ಗಾರುಡಿ ಗೊಂಬೆ, ಕೋಲಾಟ, ಪೌರಾಣಿಕ ಪಾತ್ರಧಾರಿಗಳು, ಜಡೆ ಕೋಲಾಟ, ಡೊಳ್ಳುಕುಣಿತ, ದಾಸಯ್ಯನ ಸೇವೆ, ನಾದಸ್ವರ, 101 ಕಳಸ, ವೀರಭದ್ರನ ಕುಣಿತ, ಕರಡಿಮಜಲು, ಬ್ಯಾಂಡ್, ಚಂಡೆಮೇಳ ವೀರಮಕ್ಕಳ ಕುಣಿತ, ಚಕ್ರಾದಿ ಬಳೆ, ಹುಲಿ ವೇಷ, ಮುಂತಾದ ಕಲಾಪ್ರದರ್ಶನಗಳ ಸವಿ ಸವಿದರು.
ಇದೇ ವೇಳೆ ಬಳಿಘಟ್ಟ ಹಿರಿಯ ಪ್ರಾಥಮಿಕ ಶಾಲೆ, ಮೇಲುಕೋಟೆ ಗುರುಶನೇಶ್ವರ ಆಂಗ್ಲ ಮಾಧ್ಯಮ ಶಾಲೆ. ಮುರಾರ್ಜಿ ದೇಸಾಯಿ ವಸತಿ ಶಾಲೆ, ಯದುಶೈಲಾ ಪ್ರೌಢಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಗಳ ನೂರಾರು ವಿದ್ಯಾರ್ಥಿಗಳು ನಡೆಸಿ ಕೊಟ್ಟ ಲೇಜಿಮ್, ಡಂಬಲ್ಸ್, ಬ್ಯಾಂಡ್, ಕೋಲಾಟ ಮುಂತಾದ ಪ್ರತಿಭಾ ಪ್ರದರ್ಶನಗಳು ಭಕ್ತರ ಮನಸೂರೆಗೊಂಡವು.
ಸಂಭ್ರಮದ ಚಾಲನೆ: ರಥಸಪ್ತಮಿ ಉತ್ಸವಕ್ಕೆ ಮೇಲುಕೋಟೆ ಶಾಸಕ ಸಿ.ಎಸ್. ಪುಟ್ಟರಾಜು, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಾರುತಿರಾವ್ ಪವಾರ್, ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಮೇಶ್ ರಾಜು ಖ್ಯಾತ ಜ್ಯೋತಿಷಿ ರಮೇಶ್ ಶರ್ಮಗುರೂಜಿ ಚಾಲನೆ ನೀಡಿದರು.
ಅದಕ್ಕೂ ಮೊದಲು ಕಲಾಮೇಳವನ್ನು ಚಂಡೆ ಬಾರಿಸುವ ಮೂಲಕ ಉದ್ಘಾಟಿಸಿದರು. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ವೇಣುಗೋಪಾಲ್, ಕ್ಷೇತ್ರ ಸಮನ್ವಯಾಧಿಕಾರಿ ಧನಂಜಯ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅರಕನಗೆರೆ ಪುರುಷೋತ್ತಮ್, ತೇಜಸ್ವಿನಿ, ಗೋದಾ, ವೆಂಕಟನರಸಿಂಹ ಶೆಟ್ಟಿ, ಆದಿನಾರಾಯಣ, ಬಿಜೆಪಿ ಮುಖಂಡ ರವೀಂದ್ರ, ಕಾಡೇನಹಳ್ಳಿ ರಾಮಚಂದ್ರು, ಕದಲಗೆರೆ ನಾರಾಯಣ್. ವಿಶ್ವ ಹಿಂದೂ ಧರ್ಮಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಶ್ರೀನಿವಾಸ ನರಸಿಂಹನ್, ಮೈಸೂರು ನಗರಾಧ್ಯಕ್ಷ ಸ್ವಾಮೀಗೌಡ, ಆನಂದ ಕಾರ್ಯಕ್ರಮ ಸಂಘಟಕ ನಾಗರಾಜಯ್ಯಂಗಾರ್, ಕದಲಗೆರೆ ಶಿವಣ್ಣಗೌಡ ಪಾಲ್ಗೊಂಡಿದ್ದರು.
ಜಾನಪದ ಕಲಾ ಮೇಳ ಬೆಳಗಿನ 6 ಗಂಟೆಗೆ ಆರಂಭವಾಗಿ 10 ಗಂಟೆಯವರೆಗೆ ನಡೆಯಿತು. ಮೇಲುಕೋಟೆ ಎಸ್.ಐ. ಅಶೋಕ್ ಪೊಲೀಸ್ ಬಂದೋಬಸ್ತ್ ಮಾಡಿದ್ದರು.