'ಟಿವಿ, ಸಿನಿಮಾ ಅನುಕರಣೆ ಬೇಡ '
ಭಾರತೀನಗರ: ಟಿ.ವಿ. ಮತ್ತು ಸಿನಿಮಾ ಪಾತ್ರಗಳ ಅನುಕರಣೆಯಲ್ಲಿ ತೊಡಗಿರುವ ಮಕ್ಕಳ ಬಗ್ಗೆ ಪೋಷಕರು ಎಚ್ಚರ ವಹಿಸಬೇಕೆಂದು ತಹಸೀಲ್ದಾರ್ ಎಂ.ಕೆ. ಸವಿತಾ ಹೇಳಿದರು.
ಇಲ್ಲಿನ ಸ್ನೇಹ ವಿದ್ಯಾಸಂಸ್ಥೆ ಶಾಲಾ ವಾರ್ಷಿಕೋತ್ಸವ ಹಾಗೂ ಪೋಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮನೆಯೇ ಮೊದಲ ಪಾಠ ಶಾಲೆ. ಆದ್ದರಿಂದ ತಂದೆ-ತಾಯಿಗಳು ಮಾನವೀಯ ಮೌಲ್ಯಗಳನ್ನು ತಮ್ಮ ಮಕ್ಕಳಿಗೆ ತಿಳಿ ಹೇಳಿ ಗುರು-ಹಿರಿಯರಿಗೆ ಗೌರವ ಕೊಡುವಂತಹ ಸಂಸ್ಕೃತಿ ರೂಪಿಸಬೇಕೆಂದರು.
ಮಕ್ಕಳಲ್ಲಿ ಮಾನಸಿಕ ಮತ್ತು ಭೌತಿಕಮಟ್ಟ ಬೆಳೆಸುವ ಜವಾಬ್ದಾರಿ ಪೋಷಕರದ್ದಾಗಿರುತ್ತದೆ. ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ ನವಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದು ತಿಳಿಸಿದರು.
ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಎಷ್ಟು ಕಲಿತರೂ ಸಾಲದು. ಶಿಕ್ಷಕರು ಪ್ರತಿಯೊಂದು ಮಗುವಿನ ಬಗ್ಗೆ ಗಮನ ನೀಡಿ ಉತ್ತಮ ಶಿಕ್ಷಣ ಪಡೆಯುವಂತೆ ಕಾರ್ಯತಂತ್ರ ರೂಪಿಸಬೇಕೆಂದು ಕರೆ ನೀಡಿದರು. ಪ್ರತಿ ಮಗು ಕೂಡ ಶಿಕ್ಷಣ ಪಡೆಯಬೇಕೆಂಬ ಹಿತದೃಷ್ಟಿಯಿಂದ ಸರ್ಕಾರ ವರ್ಷದಿಂದ ವರ್ಷಕ್ಕೆ ಸಾವಿರಾರು ಕೋಟಿ ಹಣ ಶಿಕ್ಷಣಕ್ಕಾಗಿ ಖರ್ಚು ಮಾಡುತ್ತಿದೆ. ಪೋಷಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರನ್ನಾಗಿ ಮಾಡಿದಾಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ವಿವರಿಸಿದರು.
ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ಮಕ್ಕಳಿಗೆ ಸಬ್ಇನ್ಸ್ಪೆಕ್ಟರ್ ಪಿ.ಜಗದೀಶ್ ಹಾಗೂ ಸ್ನೇಹ ವಿದ್ಯಾಸಂಸ್ಥೆಯ ಅಧ್ಯಕ್ಷೆ ಎಂ.ಆರ್. ಶಶಿಕಲಾ ದಾಸೇಗೌಡ ಬಹುಮಾನ ವಿತರಿಸಿದರು. ಸಂಸ್ಥೆಯ ಸಂಸ್ಥಾಪಕ ದಾಸೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಭಾರತೀ ಎಜುಕೇಷನ್ ಟ್ರಸ್ಟ್ನ ಕಾರ್ಯದರ್ಶಿ ಬಿ.ಎಂ. ನಂಜೇಗೌಡ, ಶಿಕ್ಷಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.