ವಿಜೃಂಭಣೆಯ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ
ಕೆ.ಆರ್.ಪೇಟೆ: ತಾಲೂಕಿನ ಹೇಮಗಿರಿಯ ಶ್ರೀಕಲ್ಯಾಣ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ಪವಿತ್ರ ರಥಸಪ್ತಮಿ ದಿನವಾದ ಭಾನುವಾರ ವಿಜೃಂಭಣೆಯಿಂದ ನಡೆಯಿತು.
ತಾಲೂಕಿನ ಜೀವನದಿ ಹೇಮಾವತಿ ನದಿಯ ದಂಡೆಯ ಶ್ರೀಹೇಮಗಿರಿ ಕ್ಷೇತ್ರದಲ್ಲಿ 15 ದಿನಗಳಿಂದ ಬೃಹತ್ ಜಾನುವಾರು ಜಾತ್ರೆ ನಡೆದಿತ್ತು. ಇದರ ಅಂಗವಾಗಿ ಭಾನುವಾರ ರಥೋತ್ಸವ ಅದ್ಧೂರಿರಿಯಾಗಿ ನೆರವೇರಿತು. ಕೋರಮಂಡಲ ಸಕ್ಕರೆ ಕಾರ್ಖಾನೆಯ ವತಿಯಿಂದ ಉಚಿತ ಸಾಮೂಹಿಕ ವಿವಾಹ, ಉತ್ತಮ ರಾಸುಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಗೃಹ ಕೈಗಾರಿಕಾ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ ಮತ್ತಿತರ ಕಾರ್ಯಕ್ರಮ ಜರುಗಿದವು. ಇದಕ್ಕೂ ಮೊದಲು ಶಾಸಕ ಕೆ.ಬಿ. ಚಂದ್ರಶೇಖರ್ ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ತಹಸೀಲ್ದಾರ್ ಡಾ. ಎಚ್.ಎಲ್. ನಾಗರಾಜ್ ರಥೋತ್ಸವ ಉಸ್ತುವಾರಿ ವಹಿಸಿದ್ದರು. ನಾಡಿನ ನಾನಾ ಭಾಗಗಳಿಂದ ಸಹಸ್ರಾರು ಭಕ್ತಾಧಿಗಳು ರಥೋತ್ಸವದಲ್ಲಿ ಭಾಗವಹಿಸಿದ್ದರು.