ನೀರಿನಂತೆ ಹಣ ಸುರಿದರೂ ತಣಿಯದ ದಾಹ!
ಮಳವಳ್ಳಿ: ಜಿಲ್ಲೆಯಲ್ಲಿಯೆ ಮಳವಳ್ಳಿ ತಾಲೂಕು ಕಾವೇರಿ ನದಿ ಪಾತ್ರದ ಕಡೆಯ ಭಾಗವಾಗಿದ್ದು, ತಾಲೂಕಿನಲ್ಲಿ ಮಳೆಯಾಶ್ರಿತ ಪ್ರದೇಶವೇ ಹೆಚ್ಚಾಗಿದ್ದು, ತಾಲೂಕಿನ ಬಿ.ಜಿ ಪುರ ಹೋಬಳಿ ಸೇರಿದಂತೆ ಕಸಬಾ ಹೋಬಳಿಯಲ್ಲಿ ಕಾವೇರಿ ನೀರು ಶೇ.70 ರಷ್ಟು ಭಾಗ ಹರಿದರೂ ತಾಲೂಕಿನ ಜನತೆಗೆ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದೆ.
ಈ ಭಾಗದ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಬಳಸಿದ್ದ ಯಂತ್ರೋಪಕರಣಗಳು ಹಾಗೂ ನೀರಿನ ಶೇಖರಣೆಗೆ ಮಾಡಿದ್ದ ಓವರ್ಹೆಡ್ ಟ್ಯಾಂಕ್ ಹಾಗೂ ನೀರು ಶುದ್ಧೀಕರಣ ಘಟಕಗಳು ಅನುಪಯುಕ್ತವಾಗಿದೆ.
ರಾಷ್ಟ್ರೀಯ ಗ್ರಾಮೀಣ ನೀರು ಸರಬರಾಜು ಯೋಜನೆಯಡಿ ಕಾವೇರಿ ನದಿ ಪಾತ್ರದಿಂದ ಜಾಕ್ವೆಲ್ ಮೂಲಕ ನೀರಿನ ಸಂಪರ್ಕ ಪಡೆದು ಇಲ್ಲಿನ ಬೃಹತ್ ಗ್ರೌಂಡ್ ಟ್ಯಾಂಕ್ಗಳಲ್ಲಿ ಸಂಗ್ರಹಿಸಿ ಶುದ್ಧೀಕರಣಗೊಳಿಸಿದ ಬಳಿಕ ಆ ಭಾಗದ ಬೆಳಕವಾಡಿ ಸೇರಿದಂತೆ 5 ಗ್ರಾಮಗಳಾದ ಹೊಸಹಳ್ಳಿ, ಕಿರಗಸೂರು, ಜವನಗಹಳ್ಳಿ ಹಾಗೂ ಎ.ಪಿ. ದೊಡ್ಡಿ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲಾಗುತ್ತಿತ್ತು. ಆದರೆ, ಉದ್ಘಾಟನೆಗೊಂಡ ಒಂದೇ ತಿಂಗಳಿನಲ್ಲಿ ಈ ಪ್ರದೇಶ ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಯಂತ್ರೋಪಕರಣಗಳು ಸಹ ಬಳಸದೆ ಹಾಳಾಗುತ್ತಿವೆ.
ಪಂಪ್ಹೌಸ್ನಲ್ಲಿರುವ ಯಂತ್ರಗಳು, ಫಿಲ್ಟರ್ ಘಟಕ ಜೊತೆಗೆ ಪಂಪ್ ಹೌಸ್ ನಿಯಂತ್ರಣ ಮಾಡಬೇಕಾಗಿದ್ದ ಮಂಡ್ಯ ಜಿಲ್ಲಾ ಪಂಚಾಯಿತಿ ಹಾಗೂ ಬೆಳಕವಾಡಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮೌನ ವಹಿಸಿರುವುದನ್ನು ನೋಡಿದರೆ ಸರ್ಕಾರದ ಹಣ ಇಲ್ಲಿ ನೀರಿನಂತೆ ಹಣ ಹರಿದು ಬಂದಿದರೂ ಇಲ್ಲಿನವರಿಗೆ ಶುದ್ಧ ಕುಡಿಯುವ ನೀರಿನ ಸಮಸ್ಯೆ ಮಾತ್ರ ತಪ್ಪಿಲ್ಲ ಒಂದೆಡೆ ಬರಗಾಲ ಮತ್ತೊಂದೆಡೆ ಜೀವಜಲ ಕುಡಿಯುವ ನೀರಿಗೆ ಹಾಹಾಕಾರ ನೀರಿಗಾಗಿ ಕಳೆದ 10 ವರ್ಷಗಳಿಂದ ಜಿಲ್ಲೆಯಲ್ಲಿ ಕೋಟಿಗಟ್ಟಲೆ ಹಣ ಸುರಿಯಲಾಗಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮಹತ್ತರ ಯೋಜನೆಗಳು ಜನರನ್ನು ತಲುಪುತ್ತಿಲ್ಲ.
ಬೆಳಕವಾಡಿ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಸರಬರಾಜು ಇಲ್ಲದೆ ಮೂತ್ರಕೋಶ ಸಂಬಂಧಿ ಕಾಯಿಲೆಗಳು ಹೆಚ್ಚಾಗಿದ್ದು, ಹಲವರು ಕಿಡ್ನಿ ಕಳೆದುಕೊಂಡು ಮೃತಪಟ್ಟಿರುವುದಲ್ಲದೆ ಕೆಲವರು ಡಯಾಲಿಸಿಸ್ ಹಂತಕ್ಕೆ ತಲುಪಿ ವೈದ್ಯಕೀಯ ಚಿಕಿತ್ಸೆಗಾಗಿ ದುಬಾರಿ ವೆಚ್ಚ ಭರಿಸಲಾಗದೆ ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಕುಡಿಯುವ ನೀರಿಗಾಗಿ ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಶುದ್ಧ ಕುಡಿಯುವ ನೀರಿಗಾಗಿ ನಿರ್ದಿಷ್ಟ ಪ್ರಮಾಣದ ಹಣ ಮೀಸಲಿಟ್ಟು ಕುಡಿಯುವ ನೀರಿನ ಬೇಡಿಕೆ ಬಂದಾಗ ಸಮರೋಪಾದಿಯಲ್ಲಿ ಪರಿಹಾರ ಹಣ ಬಿಡುಗಡೆಗೊಳಿಸಿ ಕುಡಿಯುವ ನೀರಿನ ಬವಣೆ ನೀಗಿಸಲು ಮುಂದಾಗಿದೆ. ಆದರೂ ಈ ಯೋಜನೆಯಲ್ಲಿ ಕೊರೆಸಿದ ಕೊಳವೆ ಬಾವಿಗಳಲ್ಲಿ ಒಂದೆಡೆ ಅಂತರ್ಜಲದ ಕೊರತೆ ಎದ್ದುಕಂಡರೆ ಮತ್ತೊಂದೆಡೆ ವಿಷಕಾರಕ ಖನಿಜಾಂಶ ಕೂಡಿದ್ದು, ತಾಲೂಕಿನ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಈ ಭಾಗದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಬೆಳಕವಾಡಿ ಸೇರಿದಂತೆ 5 ಹಳ್ಳಿಗಳಿಗೆ ಶಾಶ್ವತ ಶುದ್ದ ಕುಡಿಯುವ ನೀರಿನ ಯೋಜನೆ ಪ್ರಾರಂಭವಾಗಿ ತಿಂಗಳು ತುಂಬುವ ಮುನ್ನವೆ ಮುಚ್ಚಿ ಹೋಗಿದೆ.
-ಎಂ.ಡಿ. ಉಮೇಶ್