ಸಮಸ್ಯೆ ವಿರುದ್ಧ ಹೋರಾಡಲು ಸಂಘಟನೆ ಅಗತ್ಯ
ಮಂಡ್ಯ: ಪ್ರಸ್ತುತ ದಿನಗಳಲ್ಲಿ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಲು ಸಂಘಟನೆಗಳು ಅವಶ್ಯಕವಾಗಿದೆ. ಹೊಸ ರೀತಿಯ ಚಳವಳಿಗೆ ಮುನ್ನುಡಿ ಬರೆಯಬೇಕಿದೆ ಎಂದು ಮಹಾರಾಷ್ಟ್ರದ ಹಿರಿಯ ಪ್ರಗತಿಪರ ಚಿಂತಕ ಡಾ.ಆನಂದ್ ಭಾನುವಾರ ತಿಳಿಸಿದರು.
ನಗರದ ರೈತ ಸಭಾಂಗಣದಲ್ಲಿ ಕರ್ನಾಟಕ ಜನಶಕ್ತಿ ಸಂಘಟನೆ ಮೊದಲ ರಾಜ್ಯ ಸಮ್ಮೇಳನದಲ್ಲಿ ದೇಶದಲ್ಲಿ ಹುಟ್ಟಬೇಕಿರುವ ಹೊಸ ಚಳವಳಿಯ ಸಾರ, ಸ್ವರೂಪ ಮತ್ತು ರಾಜಕೀಯ ವಿಚಾರ ಸಂಕಿರಣದಲ್ಲಿ ಮಾತನಾಡಿ, ಯಾವುದೇ ಒಂದು ಸಮಸ್ಯೆಯ ವಿರುದ್ಧ ಸಂಘಟನೆ ಮೂಲಕ ಹೋರಾಟ ಅನಿವಾರ್ಯ. ಈ ಸಂಘಟನೆಯಲ್ಲಿ ಸಾಮೂಹಿಕ ನಾಯಕತ್ವದಿಂದ ಎಲ್ಲರ ಸಮಸ್ಯೆ ಬಗೆಹರಿಸಿಕೊಳ್ಳಲು ಅವಕಾಶವಿದೆ ಎಂದರು.
ರಾಜ್ಯದಲ್ಲಿರುವ ಅಸಂಖ್ಯಾತ ಸಂಘಟನೆಗಳು ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ನೀಡುವ ನಿಟ್ಟಿನಲ್ಲಿ ಹೋರಾಟ ರೂಪಿಸಬೇಕು. ಇದಕ್ಕೆ ಸಾಮೂಹಿಕ ನಾಯಕತ್ವ ಅತ್ಯಗತ್ಯವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಪ್ರಾಮಾಣಿಕತೆ, ಪ್ರಜಾತಾಂತ್ರಿಕತೆ ಮರೆಯಾಗಿದೆ. ಸ್ವಹಿತಾಸಕ್ತಿ ಬೆಳೆದು ನಿಂತಿದೆ. ಪ್ರಜಾಪ್ರಭುತ್ವದ ಸಿದ್ಧಾಂತವನ್ನೇ ಮರೆತು ಅವಕಾಶವಾದಿತನ, ಕೋಮುವಾದ, ಜಾತಿವ್ಯವಸ್ಥೆ ಬಲಾಢ್ಯವಾಗಿ ಬೆಳೆಯಲು ಕಾರಣವಾಗಿದೆ. ಇದರ ನಿವಾರಣೆಗೆ ಸಂಘಟನೆಗಳು ಸಾಮೂಹಿಕ ನಾಯಕತ್ವದಲ್ಲಿ ಹೋರಾಟ ನಡೆಸಬೇಕು ಎಂದು ಸಲಹೆ ನೀಡಿದರು. ಸಾಮೂಹಿಕ ನಾಯಕತ್ವದಲ್ಲಿ ವೈಯಕ್ತಿಕ ಗುರುತಿಸುವಿಕೆಯ ತಾರತಮ್ಯ ಕಡಿಮೆ ಮಾಡಿಕೊಳ್ಳುವುದರಿಂದ ಸಂಘಟನೆಗೆ ಜಯ ದೊರಕುತ್ತದೆ. ಅದಕ್ಕೆ ಒಳ್ಳೆಯ ಅರ್ಥ ಬರುತ್ತದೆ. ಬದುಕಿನ ಗಟ್ಟಿ ತಳಹದಿಯ ಮೇಲೆ ಎಲ್ಲಾ ಸಮಸ್ಯೆಗಳು ಥಳಕು ಹಾಕಿಕೊಂಡಿವೆ. ಇವುಗಳಿಂದ ಹೊರಬರಲು ಸಾಮೂಹಿಕ ನಾಯಕತ್ವದ ಮೂಲಕ ಹೋರಾಟ ರೂಪಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು. ಪ್ರಗತಿಪರ ಚಿಂತಕ ಡಾ.ವಿ.ಲಕ್ಷ್ಮಿನಾರಾಯಣ ಕರ್ನಾಟಕದ ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ಕುರಿತು ಮಾತನಾಡಿದರು. ಹೊಸ ಚಳವಳಿಯ ನಿರ್ಮಾಣ- ಕರ್ನಾಟಕ ಜನಶಕ್ತಿ ಗ್ರಹಿಕೆ ಕುರಿತು ಜನಶಕ್ತಿ ರಾಜ್ಯ ಪ್ರಧಾನ ಸಂಚಾಲಕಿ ಗೌರಿ ಮಾತನಾಡಿದರು.
ವಿಚಾರ ಸಂಕಿರಣದಲ್ಲಿ ಮಾನವ ಹಕ್ಕು ಹೋರಾಟಗಾರ ಪ್ರೊ. ನಗರಗೆರೆ ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ನಗರಿ ಬಾಬಯ್ಯ, ಕರಿಯಪ್ಪ ಗುಡಿಮನೆ, ಹಿರಿಯ ಚಿಂತಕ ಕೆ.ಫಣಿರಾಜ್, ರೈತ ಮುಖಂಡ ಮುದ್ದೇಗೌಡ, ಜಿಲ್ಲಾ ಗುತ್ತಿಗೆ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಮೋಹನ್, ಡಾ.ಸಬೀಹಾ, ಪುಣೆ ಲೋಕಾಯುತ ನೀರಜ್ ಜೈನ್ ಉಪಸ್ಥಿತರಿದ್ದರು.