ಸರ್ಕಾರಿ ಒಡೆತನಕ್ಕೆ ಅಹಲ್ಯಾದೇವಿ ದೇಗುಲ
ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ಗ್ರಾಮದಲ್ಲಿರುವ ಅಹಲ್ಯಾದೇವಿ ದೇವಾಲಯವನ್ನು ಸರ್ಕಾರ ಕಾನೂನಿನ ಚೌಕಟ್ಟಿನಲ್ಲಿ ವಶಕ್ಕೆ ಪಡೆದಿದೆ. ರಾಜಕೀಯ ಒತ್ತಡಕ್ಕೆ ಮಣಿದು ಮತ್ತೆ ದೇವಾಲಯವನ್ನು ಖಾಸಗಿ ಒಡೆತನಕ್ಕೆ ನೀಡಿದರೆ ಜಿಲ್ಲಾದ್ಯಂತ ಹೋರಾಟ ರೂಪಿಸಬೇಕಾಗುತ್ತದೆ ಎಂದು ರೈತ ಮುಖಂಡ ಕಿರಂಗೂರು ಪಾಪು ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ದೇವಾಲಯದಲ್ಲಿ ಭಕ್ತರ ಹಣಕ್ಕೆ ಲೆಕ್ಕವಿಲ್ಲದಂತಾಗಿದೆ. ಖಾಸಗಿ ಟ್ರಸ್ಟ್‌ನಲ್ಲಿ ಹಣದ ದುರುಪಯೋಗವಾಗಿದೆ. ಅಲ್ಲದೆ, ಭ್ರಷ್ಟಾಚಾರ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಧಾರ್ಮಿಕ ಪರಿಷತ್ ನಿರ್ಣಯದಂತೆ ಸೆಕ್ಷನ್ 42- 43ರ ಅನ್ವಯ ಘೋಷಿತ ಸಂಸ್ಥೆ ಎಂದು ಘೋಷಣೆ ಮಾಡಿ ಸರ್ಕಾರ ಶಿಫಾರಸು ಮಾಡಿದೆ ಎಂದು ತಿಳಿಸಿದ್ದಾರೆ. ದೇವಾಲಯ ಸರ್ಕಾರದ ಸ್ವತ್ತಾಗಬೇಕು. ಆದರೆ, ಖಾಸಗಿ ಟ್ರಸ್ಟ್ ಸ್ಥಾಪಿಸಿಕೊಂಡು ಭಕ್ತರಿಂದ ಬರುವ ಚಿನ್ನ, ಬೆಳ್ಳಿ, ಸೀರೆ, ಹುಂಡಿ ಹಣದ ಇತ್ಯಾದಿಗಳು ದುರುಪಯೋಗವಾಗಬಾರದು ಎಂದಿದ್ದಾರೆ.