ಸಿಎಂಗೆ ಮರ್ಯಾದೆ ಇದ್ರೆ ವಿಧಾನಸಭೆ ವಿಸರ್ಜಿಸ್ತಿದ್ರು: ಸಿದ್ದರಾಮಯ್ಯ ಟೀಕೆ
ಮದ್ದೂರು: ಕುಸಿದು ಹೋಗಿರುವ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನ ಕೈಬಿಟ್ಟು ವಿಧಾನಸಭೆ ವಿಸರ್ಜನೆ ಮಾಡುವ ನಿರ್ಧಾರವನ್ನು ಮುಖ್ಯಮಂತ್ರಿಗಳು ಕೈಗೊಳ್ಳಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಭಾನುವಾರ ಸಲಹೆ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬದ್ಧತೆ ಮತ್ತು ಮರ್ಯಾದೆ ಇದ್ದಿದ್ದರೆ ಇಷ್ಟರೊಳಗೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರಾಜಿನಾಮೆ ನೀಡಿ ವಿಧಾನಸಭೆ ವಿಸರ್ಜಿಸಬೇಕಿತ್ತು. ಆದರೆ, ಸರ್ಕಾರ ಉಳಿಸುವ ಪ್ರಯತ್ನ ಮುಂದುವರೆಸಿ ಅಧಿಕಾರದ ದಾಹವನ್ನು ಪೂರೈಸಿಕೊಳ್ಳುವುದು ನಾಚಿಕೆಗೇಡಿನ ಸಂಗತಿ ಎಂದು ಲೇವಡಿ ಮಾಡಿದರು.
ಸಂಪುಟ ದರ್ಜೆ ಸಚಿವರು ಸಚಿವ ಸ್ಥಾನಕ್ಕಲ್ಲದೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜಿನಾಮೆ ನೀಡಿದ್ದಾರೆ. ಇಂವರನ್ನು ಉಳಿಸಿಕೊಳ್ಳಲು ಸಾಧ್ಯವಾಗದೇ ಇರುವ ಮುಖ್ಯಮಂತ್ರಿಗಳು ಈಗ ಬೇರೆ ಪಕ್ಷ ಸೇರುವ ಮಾಜಿ ಸಚಿವರನ್ನು ಕಸಾಯಿಖಾನೆಗೆ ಹೋಗುವ ಹಸುಗಳು ಎಂದು ಟೀಕಿಸುವುದು ಜವಾಬ್ದಾರಿಯುತ ಹೇಳಿಕೆಗಳಲ್ಲ ಎಂದರು.
ಸರ್ಕಾರ ಇಂದು ನಾಳೆ ಬಿದ್ದು ಹೋಗಲಿದೆ. ಅದರ ಸೂಚನೆಗಳು ಸ್ಪಷ್ಟವಾಗಿವೆ. ಆದರೂ ಮುಖ್ಯಮಂತ್ರಿಗಳು ಹತಾಶಾ ಮನೋಭಾವದಿಂದ ಮಾತನಾಡುತ್ತಿದ್ದಾರೆ. ಇದು ಘನತೆಗೆ ತಕ್ಕುದಾದುದ್ದಲ್ಲ ಎಂದು ಹೇಳಿದರು.
ಕಾಂಗ್ರೆಸ್ ಮುಂದಿನ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಯನ್ನು ಕೊನೆ ಕ್ಷಣದಲ್ಲಿ ನಿರ್ಧಾರ ಮಾಡಲಿದೆ. ಈ ಹಿಂದೆ ನಾವು ಆದಷ್ಟು ಶೀಘ್ರದಲ್ಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ ಎಂದು ಹೇಳಿದ್ದೆವು. ಈಗ ಅದಕ್ಕೆ ಇನ್ನೂ 1 ತಿಂಗಳು ಸಮಯವಕಾಶ ಬೇಕು. ಅದು ಇಲ್ಲದಿದ್ದರೆ ನಾಮಪತ್ರ ದಿನವೇ ಬಿ ಫಾರಂ ಕೊಡಲು ತಮಗೆ ಅವಕಾಶವಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಸುರೇಶ್‌ಗೌಡ, ಜಿಪಂ ಸದಸ್ಯ ಶಿವಲಿಂಗೇಗೌಡ, ಮಾಜಿ ಜಿಪಂ ಅಧ್ಯಕ್ಷ ಬಿ.ವಿವೇಕಾನಂದ, ಚಿನ್ನನದೊಡ್ಡಿ ರಾಮಕೃಷ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.