ದೌರ್ಜನ್ಯ ಪ್ರಕರಣ: ಸಹಾಯಧನ
ಟಿ. ನರಸೀಪುರ: ದೌರ್ಜನ್ಯಕ್ಕೊಳಗಾಗಿದ್ದ ಬೇವಿನಹಳ್ಳಿ ಗ್ರಾಮದ ಸಿದ್ದಯ್ಯ ಮತ್ತು ಮಹದೇವಮ್ಮ ದಂಪತಿ ಕುಟುಂಬಕ್ಕೆ ಬುಧವಾರ ಇಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಪರಿಹಾರ ಧನದ ಚೆಕ್ ಅನ್ನು ವಿತರಿಸಿದರು.
ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಕಳೆದ 2012ರ ಜೂ.21ರಂದು ದಲಿತ ಸಮುದಾಯದ ವೃದ್ಧ ಸಿದ್ದಯ್ಯ ಮತ್ತು ಮಹದೇವಮ್ಮ ದಂಪತಿಗಳಿದ್ದ ಮನೆಯಲ್ಲಿ ಅಂತರ್ಜಾತಿ ವಿವಾಹವಾಗಿದ್ದ ಪ್ರೇಮಿಗಳಿಬ್ಬರು ಬಚ್ಚಿಟ್ಟುಕೊಂಡಿದ್ದಾರೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಸವರ್ಣಿಯ ಯುವಕರ ಗುಂಪೊಂದು ದಾಳಿ ನಡೆಸಿ, ದೌರ್ಜನ್ಯ ನಡೆಸಿದ್ದರು.
ಈ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆ ಸಮಾಜ ಕಲ್ಯಾಣ ಇಲಾಖೆ ಸಿದ್ದಯ್ಯ ಅವರಿಗೆ 20 ಸಾವಿರ ಹಾಗೂ ಪತ್ನಿ ಮಹದೇವಮ್ಮ ಅವರಿಗೆ 10 ಸಾವಿರ ಪರಿಹಾರ ಧನದ ಚೆಕ್ ಅನ್ನು ಸಮಾಜ ಕಲ್ಯಾಣಾಧಿಕಾರಿಗಳ ವ್ಯವಸ್ಥಾಪಕ ರಾಮೇಗೌಡ ವಿತರಿದರು.
ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಶಿವಕುಮಾರ್, ಕೃಷ್ಣಪ್ಪ, ದಸಂಸ ತಾ. ಸಂಚಾಲಕ ರಾಜು, ಸಂಘಟನಾ ಸಂಚಾಲಕ ಯಡದೊರೆ ಮಹದೇವಯ್ಯ, ಮುಖಂಡರಾದ ಸೋಮಶೇಖರ್, ಹಿರಿಯೂರು ಸೋಮಣ್ಣ ಇದ್ದರು.