ಪ್ರಾಂಶುಪಾಲರ ವರ್ಗಾವಣೆಗೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಶ್ರೀರಂಗಪಟ್ಟಣ: ಪ್ರಾಂಶುಪಾಲರನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿ ತಾಲೂಕಿನ ಕೆಆರ್ಎಸ್ ಪದವಿ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜು ಮುಂಭಾಗ ಪ್ರತಿಭಟನೆ ನಡೆಸಿದರು.
ಪದವಿ ಕಾಲೇಜಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಬಗ್ಗೆ ಮೇಲಾಧಿಕಾರಿಗಳ ಬಳಿ ಚರ್ಚೆ ಮಾಡದ ಪ್ರಾಂಶುಪಾಲರು ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಇಲ್ಲದಿದ್ದರೆ ಸರ್ಕಾರ ಅವರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಕೆಲವು ದಿನಗಳ ಹಿಂದೆ ಪ್ರಾಂಶುಪಾಲರ ಅನುಚಿತ ವರ್ತನೆ ಬಗ್ಗೆ ಅವರ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ. ಸರ್ಕಾರ ಪ್ರಾಂಶುಪಾಲರನ್ನು ರಜೆ ಮೇಲೆ ತೆರಳಲು ಆದೇಶ ಮಾಡಿತ್ತು. ಪ್ರಾಂಶುಪಾಲರು ರಜೆ ಮುಗಿದು ಮತ್ತೆ ಕಾಲೇಜಿಗೆ ಹಾಜರಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಮುಂದುವರಿಸಿದರು.
ಪ್ರತಿಭಟನೆಯಲ್ಲಿ ಹಲವು ಎಬಿವಿಪಿ ಕಾರ್ಯಕರ್ತರು ಭಾಗವಹಿಸಿ ಸರ್ಕಾರ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕು. ಅನುಚಿತವಾಗಿ ವರ್ತಿಸಿರುವ ಪ್ರಾಂಶುಪಾಲೆ ಸುಶೀಲ ಅವರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.