ಮತದಾರರ ಪಟ್ಟಿ ಇನ್ನೂ ಅಭ್ಯರ್ಥಿಗಳಿಗಿಲ್ಲ!
ಮಂಡ್ಯ: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆಗೆ ಏಳು ದಿನಗಳು ಮಾತ್ರ ಬಾಕಿ ಉಳಿದಿದ್ದು, ಈವರೆಗೂ ಪರಿಷ್ಕೃತ ಮತದಾರರ ಪಟ್ಟಿ ಅಭ್ಯರ್ಥಿಗಳ ಕೈಸೇರಿಲ್ಲ. ಮತ್ತೊಂದು ಅಘಾತದ ಸಂಗತಿ ಎಂದರೆ ನಗರಸಭೆಯ 2007ರ ಚುನಾವಣೆಗೆ ಹೋಲಿಸಿದರೆ ಸುಮಾರು 13,895 ಮತದಾರರು ಪಟ್ಟಿಯಿಂದ ನಾಪತ್ತೆಯಾಗಿರುವುದು.
ನಗರಸಭೆಯ 35 ವಾರ್ಡ್ಗಳ ಒಟ್ಟು ಮತದಾರರ ಪಟ್ಟಿ ಇನ್ನೂ ಅಂತಿಮಗೊಂಡಿಲ್ಲ. ತಾಲೂಕು ಕಚೇರಿಯಲ್ಲಿ ಚುನಾವಣಾ ಅಧಿಕಾರಿಗಳು ಹಾಗೂ ನಗರಸಭೆ ಅಧಿಕಾರಿಗಳು ಬುಧವಾರವೂ ಮತದಾರರ ಪಟ್ಟಿ ಪರಿಷ್ಕರಿಸುವ ಕಾರ್ಯದಲ್ಲಿ ತೊಡಗಿದ್ದರು.
ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ವಾರ್ಡ್ನ ವಿಸ್ತರಣೆ ಎಲ್ಲಿವರೆಗಿದೆ. ಯಾವ ಬಡಾವಣೆ ತಿರುವು ಯಾವ ವಾರ್ಡಿಗೆ ಸೇರುತ್ತದೆ. ಎಷ್ಟು ಮತದಾರರು ಇದ್ದಾರೆ ಎಂಬುದರ ಮಾಹಿತಿ ಇಲ್ಲ. ಹೀಗಿದ್ದರೂ ಬಿರುಸಿನ ಪ್ರಚಾರದಲ್ಲಿ ತೊಡಗಿರುವ ಅಭ್ಯರ್ಥಿಗಳು ಮತದಾರನಾಗಿರಲಿ, ಇಲ್ಲದಿರಲಿ ಅವರ ಕಾಲಿಗೆ ಬಿದ್ದು ಆಶೀರ್ವಾದ ಬೇಡುತ್ತಿದ್ದಾರೆ.
ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳಿಗೆ ಸದ್ಯಕ್ಕೆ ತಾತ್ಕಾಲಿಕವಾಗಿ ಹಳೇಯ ಮತದಾರರ ಪಟ್ಟಿಯನ್ನೇ ನೀಡಲಾಗಿದೆ. ಇದರಲ್ಲೂ ಸಾಕಷ್ಟು ನ್ಯೂನತೆಗಳಿರುವುದರಿಂದ ಅಭ್ಯರ್ಥಿಗಳ ಚುನಾವಣಾ ಪ್ರಚಾರಕ್ಕೆ ತೊಂದರೆ ಉಂಟಾಗಿದೆ. ಅಭ್ಯರ್ಥಿಗಳ ಕೈಯಲ್ಲಿರುವ ಮತದಾರರ ಪಟ್ಟಿಯಲ್ಲಿ ವಾರ್ಡಿನಲ್ಲಿ ವಾಸವಾಗಿರುವ ಸಾಕಷ್ಟು ಮತದಾರ ಹೆಸರು ಡಿಲೀಟ್ ಆಗಿವೆ. ಪುರುಷನ ಹೆಸರಿಗೆ ಮಹಿಳೆ ಫೋಟೋ, ಮಹಿಳೆ ಹೆಸರಿನಲ್ಲಿ ಪುರುಷನ ಫೋಟೋಗಳು ಇರುವುದು ಪತ್ತೆಯಾಗಿವೆ. ನಗರಸಭೆಯ 35 ವಾರ್ಡ್ಗಳಲ್ಲಿ 2007ರ ಚುನಾವಣೆಗೆ ಹೋಲಿಸಿದರೆ, ಪ್ರತಿ ವಾರ್ಡಿನಲ್ಲಿ ಕನಿಷ್ಠ 350 ರಿಂದ 400 ಮಂದಿ ಮತದಾರರ ಹೆಸರು ಮತದಾರರ ಪಟ್ಟಿಯಿಂದ ನಾಪತ್ತೆಯಾಗಿದೆ. ಈ ಸಂಬಂಧ ಅರ್ಹ ಮತದಾರರನ್ನು ಪಟ್ಟಿಗೆ ಸೇರ್ಪಡೆ ಮಾಡಿಸಲು ಕೆಲ ಅಭ್ಯರ್ಥಿಗಳು ತಾಲೂಕು ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ.
2007ರಲ್ಲಿ ನಗರಸಭೆ ವ್ಯಾಪ್ತಿಯ ಮತದಾರರ ಸಂಖ್ಯೆ 1,12,000 ಇತ್ತು. ಆದರೆ, 2013ರಲ್ಲಿ 98,105 (ಪುರುಷರು - 48,968, ಮಹಿಳೆಯರು - 49137) ಮತದಾರರ ಹೆಸರು ಮಾತ್ರ ಪಟ್ಟಿಯಲ್ಲಿದೆ. ಅಂದರೆ, 13,895 ಮತದಾರರ ಹೆಸರು ನಾಪತ್ತೆಯಾಗಿವೆ.
ಕಳೆದ ನಗರಸಭೆ ಚುನಾವಣೆಯಲ್ಲಿ 1 ಲಕ್ಷ 12 ಸಾವಿರ ಮತದಾರರ ಪೈಕಿ ಕೇವಲ 61,140 ಮಂದಿ ಮಾತ್ರ ಮತ ಚಲಾವಣೆ ಮಾಡಿದ್ದರು. ಈ ಬಾರಿಯ ಮತದಾರರ ಪಟ್ಟಿ ನೋಡಿದರೆ ಮತದಾನದ ಪ್ರಮಾಣ ಮತ್ತಷ್ಟು ಕಡಿಮೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವ ಮೂಲಕ ಅಧಿಕಾರಿಗಳು, ಸಂವಿಧಾನಾತ್ಮಕವಾಗಿ ಪ್ರಜೆಗಳಿಗೆ ನೀಡಿರುವ ಹಕ್ಕನ್ನು ಮೊಟಕುಗೊಳಿಸಿದ್ದಾರೆ. ಅಲ್ಪಸಂಖ್ಯಾತರು, ಕಾರ್ಮಿಕರು, ಬಡವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಇದು ಬರಲಿರುವ ವಿಧಾನಸಭೆ ಚುನಾವಣೆ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ. ಈ ಹಿನ್ನೆಲೆ, ಮತದಾರರ ಹೆಸರುಗಳನ್ನು ಮತ್ತೆ ಸೇರಿಸುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಷ್ಟೊಂದು ಪ್ರಮಾಣದ ಮತದಾರರ ಹೆಸರು ಪಟ್ಟಿಯಿಂದ ನಾಪತ್ತೆಯಾಗಿದ್ದು ಹೇಗೆ ಎಂಬ ಬಗ್ಗೆ ತನಿಖೆ ನಡೆಸಬೇಕು ಎಂದು ಕೆಲ ರಾಜಕೀಯ ಪಕ್ಷಗಳ ಮುಖಂಡರು ಒತ್ತಾಯಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.