ಹತ್ತು ಕಾರ್ಖಾನೆಗಳಿಗೆ ನೋಟಿಸ್
ಮದ್ದೂರು: ತಾಲೂಕಿನ ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಪರವಾನಗಿ ಪಡೆಯದೇ ಅನಧಿಕೃತವಾಗಿ ನಡೆಯುತ್ತಿದ್ದ 10 ಕಾರ್ಖಾನೆಗಳಿಗೆ ಗ್ರಾಮ ಪಂಚಾಯ್ತಿ ನೋಟಿಸ್ ಜಾರಿ ಮಾಡಿದೆ.
ಕೈಗಾರಿಕಾ ಪ್ರದೇಶದಲ್ಲಿನ ಸ್ಟಾರ್ ಎಲೆಕ್ಟ್ರಾನಿಕ್ಸ್, ಕುಮಾರ್ ಎಲೆಕ್ಟ್ರಾನಿಕ್ಸ್, ಗಿರೀಶ್ ಎಕ್ಸ್ಪೋರ್ಟ್, ಕರ್ನಾಟಕ ಇಂಡಸ್ಟ್ರೀಸ್, ವಜ್ರ ಗ್ರಾನೈಟ್, ಕಣ್ವ ಡೈಮಂಡ್, ಸನಿತಾ ಗ್ರಾನೈಟ್, ಮಹೇಶ್ವರಿ ಗ್ರಾನೈಟ್, ಸಿಜಿ ಅಲ್ಯೂಮಿನಿಯಂ, ಅಲೋಹಿತ್, ಜಿಎಂ ಕಾರ್ಪೋರೇಷನ್, ಈಶ್ವರಿ ಬ್ಯಾಟರಿ ಸೇರಿದಂತೆ ಹಲವು ಕಾರ್ಖಾನೆಗಳಿಗೆ ದಿಢೀರ್ ಭೇಟಿ ನೀಡಿ ಗ್ರಾಪಂ ಅಧ್ಯಕ್ಷ ಸಿ.ಜಿ.ಶಂಕರ್ ನೇತೃತ್ವದ ಸದಸ್ಯರ ತಂಡ ಪರವಾನಗಿ ಪಡೆಯದ ಕಾರ್ಖಾನೆ ವಿರುದ್ಧ ಪಂಚಾಯ್ತಿರಾಜ್ ಅಧಿನಿಯಮದ ಪ್ರಕಾರ ನೋಟಿಸಸ್ನೀಡಲು ತೀರ್ಮಾನ ಕೈಗೊಂಡಿದ್ದಾರೆ.
ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 70 ಸಣ್ಣ, ಮಧ್ಯಮ ಹಾಗೂ ಬೃಹತ್ ಪ್ರಮಾಣದ ಕಾರ್ಖಾನೆಗಳು ಇವೆ. ಇವುಗಳಲ್ಲಿ ಕೇವಲ 20 ಕಾರ್ಖಾನೆಗಳು ಮಾತ್ರ ಪಂಚಾಯ್ತಿಯಲ್ಲಿ ಆಸ್ತಿ ನೋಂದಾಯಿಸಿ ಕಂದಾಯ ಪಾವತಿ ಮಾಡುವ ಜೊತೆಗೆ ಪರವಾನಗಿ ಪಡೆದು ಕಾರ್ಖಾನೆ ನಡೆಸುತ್ತಿದ್ದಾರೆ.
ಪರವಾನಗಿ ಪಡೆಯದ ಮೇಲ್ಕಂಡ ಕಾರ್ಖಾನೆಗಳ ವಿರುದ್ಧ ಕರ್ನಾಟಕ ಪಂಚಾಯತ್ರಾಜ್ ಅಧಿನಿಯಮ 93ರ ಪ್ರಕಾರ 66 ಹಾಗೂ 193ರ ಪ್ರಕಾರ ಕಾಯ್ದೆ ಉಲ್ಲಂಘನೆಯಾಗಿದೆ. ಇಂತಹ ಕಾರ್ಖಾನೆಗಳ ಬಗ್ಗೆ ಅಂತಿಮ ವಾಗಿ ಅಭಿವೃದ್ಧಿ ಅಧಿಕಾರಿಗಳಿಂದ ನೋಟಿಸ್ ನೀಡಲಾಗುವುದು. ಅಷ್ಟರಲ್ಲಿ ಕಾರ್ಖಾನೆ ಮಾಲೀಕರು ತೆರಿಗೆ ಪಾವತಿಸದಿದ್ದಲ್ಲಿ ವಿದ್ಯುತ್ ಪ್ರಸರಣ ನಿಗಮಕ್ಕೆ ಪತ್ರ ಬರೆದು ವಿದ್ಯುತ್ ಸರಬರಾಜು ನಿಲ್ಲಿಸುವಂತೆ ಮನವಿ ಮಾಡುವ ಜೊತೆಗೆ ಕಾರ್ಖಾನೆಗೆ ಬೀಗ ಮುದ್ರೆ ಹಾಕಲಾಗುವುದು ಎಂದು ಹೇಳಿದರು.
ಸೋಮನಹಳ್ಳಿ ಗ್ರಾಮ ಪಂಚಾಯ್ತಿಗೆ ಸೇರಿದ ಕೈಗಾರಿಕಾ ಪ್ರದೇಶದ ಬಾಲಾಜಿ ಪೇಪರ್ ಮಿಲ್ ಕಾರ್ಖಾನೆಯ ಹೊಗೆ ಚಿಮಣಿಯಿಂದ ಹೊರಬರುತ್ತಿರುವ ಕಪ್ಪು ಬೂದಿ ಕಣಗಳಿಂದ ಗ್ರಾಪಂ ವ್ಯಾಪ್ತಿಗೆ ಸೇರಿದ ರುದ್ರಾಕ್ಷಿಪುರ ಗ್ರಾಮಸ್ಥರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇದರಿಂದ ರೇಷ್ಮೆ ಬೆಳೆಗಳು ನಾಶವಾಗುತ್ತಿವೆ ಎಂದು ಸಾರ್ವಜನಿಕರು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಖಾನೆ ಮಾಲೀಕರು ಪರಿಸರ ಇಲಾಖೆಯಿಂದ ಪಡೆದಿರುವ ನಿರಾಪೇಕ್ಷಣಾ ಪತ್ರವನ್ನು ಗ್ರಾಪಂಗೆ ನೀಡಲು ಸೂಚನೆ ನೀಡಲಾಗಿಲ್ಲ. ಇದಕ್ಕೆ ಕಾರ್ಖಾನೆ ಮಾಲೀಕರು ಉತ್ತರ ನೀಡಿಲ್ಲ. ಇಂತಹ ಕಾರ್ಖಾನೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಂಕರ್ ಹೇಳಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಸೌಮ್ಯಲತಾ, ಸದಸ್ಯರಾದ ಪ್ರಕಾಶ್, ಅಪ್ಪೇಗೌಡ, ನಾಗರಾಜು, ಭಾಸ್ಕರಚಾರಿ, ನಾಗಣ್ಣ, ಗಿರೀಶ್, ನಾಗರಾಜು, ಪುಟ್ಟೇಗೌಡ, ಪಿಡಿಓ ಲೀಲಾವತಿ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.