ಪೌರ ಸಂಸ್ಥೆ ಚುನಾವಣೆ: ಅಧಿಕಾರಿ, ಅಭ್ಯರ್ಥಿಗಳ ಸಭೆ
ಕೆ.ಆರ್.ಪೇಟೆ: ಪುರಸಭೆ ಚುನಾವಣೆಯಲ್ಲಿ ಯಾವುದೇ ಗಲಾಟೆ, ಗದ್ದಲಗಳಿಗೆ ಅವಕಾಶ ನೀಡದಂತೆ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ನಡೆಸುವ ಸಂಬಂಧ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ವಿವಿಧ ವಾರ್ಡ್ಗಳ ಅಭ್ಯರ್ಥಿಗಳು, ರಾಜಕೀಯ ಮುಖಂಡರು ಹಾಗೂ ನೋಡಲ್ ಅಧಿಕಾರಿಗಳ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಸೀಲ್ದಾರ್ ರೇಣುಕುಮಾರ್, ಚುನಾವಣೆಯನ್ನು ಬಿಗಿ ಭದ್ರತೆಯೊಂದಿಗೆ ಕಟ್ಟುನಿಟ್ಟಾಗಿ ನಡೆಸಲಾಗುವುದು. ಶಾಂತಿಯುತ, ನ್ಯಾಯ ಸಮ್ಮತ, ಮುಕ್ತ ಮತದಾನಕ್ಕೆ ಅಡ್ಡಿಪಡಿಸಿದರೆ ಅಂಥವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾನೂನು ಉಲ್ಲಂಘಿಸಿದರೆ ಎಚ್ಚರ: ಪ್ರಚಾರದ ವೇಳೆ ಮತದಾರರಿಗೆ ಹಣ, ಹೆಂಡ ಸೇರಿದಂತೆ ಯಾವುದೇ ವಸ್ತುಗಳನ್ನು ಕಾನೂನು ಬಾಹಿರವಾಗಿ ವಿತರಿಸಿದರೆ, ನಕಲಿ ಮತದಾನ ಮಾಡಲು ಬಂದು ಸಿಕ್ಕಿಬಿದ್ದರೆ, ವಾರ್ಡ್ಗಳಲ್ಲಿ ಗುಂಪುಗಾರಿಕೆ ನಡೆಸಿ ಮತದಾರರನ್ನು ಹೆದರಿಸಿ-ಬೆದರಿಸಿ ಮತ ಕೇಳಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದರೆ ಅಂತಹ ವ್ಯಕ್ತಿಗಳು ಹಾಗೂ ಅಭ್ಯರ್ಥಿಯ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕ್ರಿಮಿನಲ್ ಮೊಕದ್ದಮೆ: ಚುನಾವಣೆ ಸ್ಪರ್ಧೆ ಕಣದಲ್ಲಿರುವ ಅಭ್ಯರ್ಥಿಗಳು ಪ್ರತಿ ಎರಡು ದಿನಗಳಿಗೊಮ್ಮೆ ಖರ್ಚು ವೆಚ್ಚದ ಲೆಕ್ಕಪತ್ರಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಮುಂದೆ ಹಾಜರುಪಡಿಸಬೇಕು. ನ್ಯಾಯ ಸಮ್ಮತ ಮುಕ್ತ ಮತದಾನ ಪ್ರಕ್ರಿಯೆಗೆ ಅಡ್ಡಿಪಡಿಸಿದರೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಜೈಲಿಗೆ ಕಳುಹಿಸಲಾಗುವುದು ಎಂದರು.ಕೆಲವು ವಾರ್ಡ್ಗಳಲ್ಲಿ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಕಲರ್ ಟಿವಿ ಮತ್ತು ರೆಫ್ರಿಜೆರೇಟರ್ ವಿತರಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಬಂದಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಇಂತಹ ಕಾನೂನು ಬಾಹಿರ ಕೃತ್ಯವನ್ನು ನಡೆಸುತ್ತಿರುವ ಅಭ್ಯರ್ಥಿ ಬಗ್ಗೆ ಕಾನೂನು ಕ್ರಮ ಜರುಗಿಸುವ ಜೊತೆಗೆ ಸ್ಪರ್ಧೆಯಿಂದ ಅನರ್ಹಗೊಳಿಸುವ ಬಗ್ಗೆಯೂ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಹೇಳಿದರು.ಸೂಕ್ಷ್ಮ ವಾರ್ಡ್ಗಳಾಗಿ ಗುರುತಿಸಿರುವ 1, 3, 6, 8,9,10, 15, 16, 19, 21 ಮತ್ತು 23ನೇ ವಾರ್ಡ್ಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗುವುದು. ಎಂದು ಸ್ಪಷ್ಟ ಸೂಚನೆ ನೀಡಿದರು. ವೃತ್ತ ನಿರೀಕ್ಷಕ ಎಸ್.ಎನ್.ಸಂದೇಶ್ಕುಮಾರ್, ಚುನಾವಣಾಧಿಕಾರಿಗಳಾದ ದೇವಕುಮಾರ್, ಡಾ.ಕೃಷ್ಣೇಗೌಡ, ಲೇಪಾಕ್ಷಿಗೌಡ ಮತ್ತು ಜೈನಹಳ್ಳಿ ರಾಜೇಗೌಡ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.