ಬಿಜೆಪಿ100 ಅಭ್ಯರ್ಥಿಗಳ ಗೆಲವು ಖಚಿತ: ರಾಮಚಂದ್ರಗೌಡ
ಮಂಡ್ಯ: ಜಿಲ್ಲೆಯಲ್ಲಿರುವ 161 ಸ್ಥಳೀಯ ಸಂಸ್ಥೆ ಸ್ಥಾನಗಳ ಪೈಕಿ ಬಿಜೆಪಿ 115 ಸ್ಥಾನಗಳಿಗೆ ಸ್ಪರ್ಧಿಸಿದೆ. ಇದರಲ್ಲಿ ನಮ್ಮ ಪಕ್ಷದ 100 ಮಂದಿ ಅಭ್ಯರ್ಥಿ ನಿಶ್ಚಿಂತೆಯಿಂದ ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಸಚಿವ ರಾಮಚಂದ್ರಗೌಡರು ಬುಧವಾರ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಅನುದಾನ ನೀಡಿದ್ದೇವೆ. ನಾವು ಕೊಟ್ಟಷ್ಟು ಅನುದಾನವನ್ನು ಹಿಂದಿನ ಯಾವ ಸರ್ಕಾರ ನೀಡಿಲ್ಲ. ಹಾಗಾಗಿ, ಚುನಾವಣೆಯಲ್ಲಿ ಜನತೆ ಪಕ್ಷವನ್ನು ಕೈಬಿಡುವುದಿಲ್ಲವೆಂಬ ವಿಶ್ವಾಸ ತಮಗಿರುವುದಾಗಿ ಹೇಳಿದರು.
ಜಿಲ್ಲೆಯಲ್ಲಿ ಬಿಜೆಪಿ ಪಕ್ಷಕ್ಕೆ ಶಕ್ತಿ ಇಲ್ಲ ನಿಜ. ಆದರೂ ನಗರಸಭೆಯ 35 ವಾರ್ಡುಗಳ ಪೈಕಿ 25 ವಾರ್ಡುಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿದಿದ್ದಾರೆ. ಅದಲ್ಲದೆ 5 ಪಕ್ಷೇತರ ಅಭ್ಯರ್ಥಿಗಳಿಗೆ ಪಕ್ಷ ಬೆಂಬಲ ಸೂಚಿಸಿದೆ. ಇದರಲ್ಲಿ ಕನಿಷ್ಠ 18 ರಿಂದ 20 ಮಂದಿ ಆರಿಸಿ ಬರಲಿದ್ದಾರೆ. ನಗರಸಭೆಯ ಅಧಿಕಾರದ ಗದ್ದುಗೆ ಏರಲು ಸರ್ವ ಪ್ರಯತ್ನವನ್ನೂ ಮಾಡುತ್ತಿರುವುದಾಗಿ ಹೇಳಿದರು.
ಈಗ ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆ ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿಯಾಗಿದೆ. ರಾಜ್ಯದ 208 ಸ್ಥಳೀಯ ಸಂಸ್ಥೆಗಳಲ್ಲಿರುವ 4976 ಸ್ಥಾನಗಳಲ್ಲಿ 4260 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇದರಲ್ಲಿ 3 ಸಾವಿರಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದರು.ಗುಂಪುಗಾರಿಕೆ, ಭಿನ್ನಮತ ಎಲ್ಲಾ ಪಕ್ಷಗಳಲ್ಲೂ ಇರುವುದು ಸಹಜ. ಪಕ್ಷದೊಳಗಿರುವ ಅನೇಕ ಮುಖಂಡರಲ್ಲಿ ವಿಭಿನ್ನ ರೀತಿಯ ಆಲೋಚನೆಗಳಿರುತ್ತವೆ. ಅವೆಲ್ಲವನ್ನೂ ಗುಂಪುಗಾರಿಕೆ ಎನ್ನಲಾಗದು ಎಂದರು.
ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದಲೂ ಪಕ್ಷದೊಳಗೆ ಗುಂಪುಗಾರಿಕೆ ತಾಂಡವವಾಡುತ್ತಿದೆ. ಈ ಸರ್ಕಾರ ಉಳಿಯುವುದೇ ಇಲ್ಲ ಎಂದು ವಿರೋಧ ಪಕ್ಷದವರು ಬೊಬ್ಬೆ ಹೊಡೆಯುತ್ತಿದ್ದರು. ಆದರೂ ಐದು ವರ್ಷಗಳ ಕಾಲ ಬಿಜೆಪಿ ಸಮರ್ಥವಾಗಿ ರಾಜ್ಯದಲ್ಲಿ ಆಡಳಿತ ನಡೆಸಿರುವುದು ಸಾಧನೆ ಅಲ್ಲವೇ ಎಂದು ಪ್ರಶ್ನಿಸಿದರು.
ಮಂಡ್ಯ ಅಭಿವೃದ್ಧಿಗೆ 'ಭರವಸೆಯ ಬೆಳಕು': ಬಿಜೆಪಿ ಮಂಡ್ಯದ ಅಭಿವೃದ್ಧಿಗಾಗಿ 'ಭರವಸೆಯ ಬೆಳಕು' ಎಂಬ ಶೀರ್ಷಿಕೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ರಾಜ್ಯ ಯೋಜನಾ ಉಪಾಧ್ಯಕ್ಷ ರಾಮಚಂದ್ರಗೌಡರು ಗುರುವಾರ ನಗರದ ಪ್ರೆಸ್ ಕ್ಲಬ್ನಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿ ಬಿಜೆಪಿ ಮಂಡ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪಣತೊಟ್ಟಿದೆ ಎಂದರು.ನಗರದ ಅಭಿವೃದ್ಧಿ ದೃಷ್ಟಿಯಲ್ಲಿಟ್ಟುಕೊಂಡು 'ಭರವಸೆಯ ಬೆಳಕು' ಪ್ರಣಾಳಿಕೆಯನ್ನು ರೂಪಿಸಲಾಗಿದೆ. ನಗರದ ಜನರಿಗೆ ಪ್ರತಿ ನಿತ್ಯ ಕುಡಿಯುವ ನೀರು ಪೂರೈಸುವುದು. ಗಾಂಧೀನಗರದ ಪಂಪ್ಹೌಸ್ ಆಧುನೀಕರಣಗೊಳಿಸಿ, ಜಲಸಂಗ್ರಹಾಗಾರ ನಿರ್ಮಾಣ, ಒಳಚರಂಡಿ, ಪ್ರತಿ ವಾರ್ಡ್ ನಲ್ಲಿ ಸುಲಭ್ ಶೌಚಾಲಯ ನಿರ್ಮಾಣ, ಸ್ಮಶಾನ - ರುದ್ರಭೂಮಿಗಳಲ್ಲಿ ಸುಸಜ್ಜಿತ ವ್ಯವಸ್ಥೆಗೆ ಆದ್ಯತೆ ನೀಡುವ ಭರವಸೆ ಪ್ರಣಾಳಿಕೆಯಲ್ಲಿ ನೀಡಲಾಗಿದೆ. ಈ ನಿಟ್ಟಿನಲ್ಲಿ ಪುನಶ್ಚೇತನಗೊಳಿಸಲಾಗುವುದು ಎಂದು ಹೇಳಿದರು. ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಪಿ. ಮಹೇಶ್, ಮುಡಾ ಮಾಜಿ ಅಧ್ಯಕ್ಷೆ ವಿದ್ಯಾ ನಾಗೇಂದ್ರ, ಕಾಡಾ ಅಧ್ಯಕ್ಷ ಡಿ.ರಾಮಲಿಂಗಯ್ಯ, ಮುಡಾ ಅಧ್ಯಕ್ಷ ಬಿ.ಬಸವೇಗೌಡ, ಬಿಜೆಪಿ ಮಾಧ್ಯಮ ಪ್ರಮುಖ್.ಆರ್.ರಮೇಶ್ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.