'ವಿಕಲ್ಪ ಬುದ್ಧಿ ಬಿಡದಿರೆ ಉದ್ಧಾರವಿಲ್ಲ'
ಕಿಕ್ಕೇರಿ: ವಿಕಲ್ಪ ಬುದ್ಧಿ ಬಿಡದ ವಿನಃ ದೇಶ ಉದ್ಧಾರವಾಗಲಾರದು ಎಂದು ಬಾಳೆಹೊನ್ನೂರು ಶಾಖಾ ಮಠದ ತೆಂಡೆಕೆರೆಯ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣಕ್ಕೆ ಸಮೀಪದ ಹಳೆ ಮಾದಾಪುರದ ರಾಮೇಶ್ವರ ಗುಡಿಯ ಪುನರ್ ಪ್ರತಿಷ್ಟಾಪನಾ ಮಹೋತ್ಸವ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬರಲ್ಲೂ ಪರಮಾತ್ಮನಿದ್ದಾನೆ. ಮಹಾದೇವನಾಗಲು ಸಂಸ್ಕಾರ, ಸಂಸ್ಕೃತಿ, ಆಚಾರ -ವಿಚಾರ ಬೆಳೆಸಿಕೊಳ್ಳಬೇಕು. ಸತ್ತು ಬದುಕಿರುವ ಮಹಾತ್ಮರನ್ನು ನೆನೆಯುವಂತೆ ಶ್ರೇಷ್ಠ ಬದುಕು ಯುವ ಜನತೆ ರೂಢಿಸಿಕೊಳ್ಳಬೇಕು ಎಂದರು.
ಹಳೆಯ ದೇಗುಲ, ಕೊತ್ತಲಗಳನ್ನು ಉಳಿಸಿಕೊಳ್ಳಲು ಗುರು- ಶಿಷ್ಯ ಪರಂಪರೆ ಬೇಕಿದೆ. ಗ್ರಾಮೀಣ ಬದುಕಿನಲ್ಲಿ ಪರಿಶ್ರಮವಿದೆ. ದೇಗುಲಗಳು ಶಾಂತಿ ನೀಡುವ ಸಂಕೇತವಾಗಿವೆ. ದ್ವೇಷಾಸೂಯೆ ಮರೆಸಿ ಅನ್ಯೂನವಾಗಿ ಬೆಸೆಯುವ ತಾಣ ದೇಗುಲಗಳಾಗಿವೆ. ಪರೋಪಕಾರ, ಅಧ್ಯಾತ್ಮ, ಸಾಮಾಜಿಕ ಸೇವೆ ಚಿಂತನೆಯಿಲ್ಲದೆ ದೇಶ ನಶಿಸುವ ಮುನ್ನ ಯುವ ಜನತೆ ಜಾಗೃತರಾಗಬೇಕು ಎಂದು ಶ್ರೀಗಳು ಹೇಳಿದರು.
ಮಾಜಿ ಸ್ಪೀಕರ್ ಕೃಷ್ಣ ಮಾತನಾಡಿ, ಇಂತಹ ಪುಣ್ಯ ಕ್ಷೇತ್ರವನ್ನು ಕಂಡಿಲ್ಲ. ಶಕ್ತಿ ಇರುವ ದೇಗುಲಕ್ಕೆ ಭಕ್ತರು ಇಷ್ಟ ಪಟ್ಟು ಬರಲು ಮಾಹಿತಿ ಕೊರತೆ ಕಾರಣವಾಗಿದೆ. ದೇಶ ಸನಾತನ ಸಂಸ್ಕೃತಿಯಡಿಯಲ್ಲಿದೆ. ವಿದ್ಯಾವಂತರಲ್ಲಿ ಧರ್ಮ ಕಾರ್ಯಗಳು ಪೂರ್ವಿಕರಂತೆ ನಡೆಯದಿದ್ದರೆ ವಿನಾಶ ಕಟ್ಟಿಟ್ಟ ಬುತ್ತಿ. ದೇಶದ ಶಾಂತಿಗೆ ಆಧ್ಯಾತ್ಮಿಕ ಚಿಂತನೆಯೊಂದೇ ಮದ್ದು ಎಂದರು.
ಶಾಸಕ ಕೆ.ಬಿ. ಚಂದ್ರಶೇಖರ್ ಗ್ರಾಮೀಣ ಜನರ ಕೊಂಡಿಯಾದ ರಾಮೇಶ್ವರ ದೇಗುಲ ಶಾಂತಿ ನೀಡುವ ತಾಣವಾಗಿದೆ. ದೇಗುಲ ಜೀಣೋದ್ಧಾರಕ್ಕಾಗಿ ಶೀಘ್ರವಾಗಿ 5 ಲಕ್ಷಗಳ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಡಾ.ರಾಮಕೃಷ್ಣೇಗೌಡ ಕ್ಷೇತ್ರದಲ್ಲಿ ಸಮುದಾಯ ಭವನ ನಿರ್ಮಿಸಲು ಮನವಿ ಮಾಡಿದರು.
2 ದಿನಗಳ ಕಾಲ ನಡೆದ ಅಭೂತ ಕಾರ್ಯಕ್ರಮಕ್ಕೆ ಮಾದಾಪುರ, ಗೊಂದಿಹಳ್ಳಿ, ಒಳಹೆಮ್ಮಿಗೆ, ಗಾಣದಹಳ್ಳಿ, ಚಿನ್ನೇನಹಳ್ಳಿ, ಕೋಟಹಳ್ಳಿ, ಸಿಂಗಾಪುರ ಮೊದಲಾದ ಗ್ರಾಮಗಳಿಂದ ಭಕ್ತರು ಆಗಮಿಸಿ ಪವಿತ್ರ ಪಶ್ಚಿಮ ವಾಹಿನಿಯಲ್ಲಿ ಮಿಂದು ದೇವರ ದರ್ಶನ ಪಡೆದರು. ರಾಮೇಶ್ವರ, ಗಣಪತಿ, ಸಪ್ತಮಾತೃಕೆ ದರ್ಶನ ಪಡೆದು ಹಣ್ಣು ಕಾಯಿ ಸಮರ್ಪಿಸಿದರು.
ಜಿಪಂ ಸದಸ್ಯ ಕೆ.ಎಸ್. ಪ್ರಭಾಕರ್, ಜೆಡಿಎಸ್ ಮುಖಂಡ ಕೆ.ಸಿ.ನಾರಾಯಣಗೌಡ, ಗೂಡೆಹೊಸಹಳ್ಳಿ ಜವರಾಯಿಗೌಡ, ರಾಜ್ಯ ಆಹಾರ ನಿಗಮದ ನಿರ್ದೇಶಕ ಎಂ.ಡಿ. ಕೃಷ್ಣಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗೇನಹಳ್ಳಿ ರುಕ್ಮಾಂಗದ, ಚೇತನಾ ಮಹೇಶ್, ವಕೀಲ ರಾಜೇಶ್, ಮನಮುಲ್ ನಿರ್ದೇಶಕ ಚನ್ನಿಂಗೇಗೌಡ, ಗುಂಜೇವು ಅಣ್ಣಾಜಿಗೌಡ, ಶಾಂತವೀರೇಗೌಡ, ಪುಟ್ಟರಾಜು ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಡಾ.ರಾಮಕೃಷ್ಣೇಗೌಡ ಸ್ವಾಗತಿಸಿ, ಇಂದಿರಾ ಸತೀಶ್ ನಿರೂಪಿಸಿ, ವಕೀಲ ರಾಜೇಶ್ ವಂದಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.