ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮಂಡ್ಯ

28, 29ಕ್ಕೆ ಆದಿಶ್ರೀ ಪುಣ್ಯಾರಾಧನಾ ಮಹೋತ್ಸವ

Parashurama
Updated On : 25 Jan 2013, 10:20 am

ಮಂಡ್ಯ: ಆದಿ ಚುಂಚನಗಿರಿ ಕ್ಷೇತ್ರದಲ್ಲಿ ಜ.28 ಮತ್ತು 29ರಂದು ನಡೆಯಲಿರುವ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಪುಣ್ಯಾರಾಧನಾ ಮಹೋತ್ಸವದ ಸಕಲ ಸಿದ್ಧತೆಗಳು ತ್ವರಿತಗತಿಯಲ್ಲಿ ಸಾಗಿದೆ.
ಕ್ಷೇತ್ರದಲ್ಲಿರುವ ಕ್ರೀಡಾಂಗಣದಲ್ಲಿ ಮಹೋತ್ಸವಕ್ಕಾಗಿ ಬೃಹತ್ ವೇದಿಕೆ ಸಿದ್ಧಪಡಿಸಲಾಗುತ್ತಿದ್ದು, ಸಹಸ್ರಾರು ಭಕ್ತರಿಗೆ ಆಸನ ವ್ಯವಸ್ಥೆ ಮಾಡಲಾಗುತ್ತಿದೆ. ಹಗಲಿರಳು ಕಾರ್ಮಿಕರು ವೇದಿಕೆ ನಿರ್ಮಾಣದ ಕಾರ್ಯದಲ್ಲಿ ತೊಡಗಿದ್ದಾರೆ. ಕ್ಷೇತ್ರದ ತುಂಬೆಲ್ಲಾ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ.
ಮತ್ತೊಂದೆಡೆ ಮಠಕ್ಕೆ ಹೋಗುವ ಹಾದಿಯಲ್ಲಿರುವ ಶಿವೈಕ್ಯರಾದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಸಮಾಧಿ ವೀಕ್ಷಣೆಗೆ ನಿತ್ಯವೂ ಭಕ್ತರ ದಂಡು ಆಗಮಿಸುತ್ತಿದ್ದು, ವಿಶೇಷ ಪೂಜೆ ಕಾರ್ಯಗಳನ್ನು ನೆರವೇರಿಸುತ್ತಿದ್ದಾರೆ.
ಶ್ರೀಗಳ ಪುಣ್ಯಾರಾಧನಾ ಮಹೋತ್ಸವ ಹಿನ್ನೆಲೆಯಲ್ಲಿ ಜ.28ರ ಬೆಳಗಿನ ಜಾವ 5 ಗಂಟೆಗೆ ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ಅಭಿಷೇಕ ನೆರವೇರಿಸಲಾಗುವುದು. ನಂತರ 7 ಗಂಟೆಯಿಂದ ಧಾರ್ಮಿಕ ವಿಧಿ ವಿಧಾನಗಳ ಅನ್ವಯ ಪೂಜಾ ಕಾರ್ಯಗಳು ಮುಂದುವರೆಯಲಿವೆ ಎಂದು ಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬೆಳಗ್ಗೆ 9.30ರಿಂದ ಪೂಜಾ ಕಾರ್ಯ ಶ್ರದ್ಧಾಂಜಲಿಯೊಂದಿಗೆ ಸಂತರ ಸಮಾಗಮ ನಡೆಯಲಿದ್ದು, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಠಾಧೀಶರು, ಸಂತ ಮಹಾತ್ಮರು ಹಾಗೂ ಧಾರ್ಮಿಕ ಮುಖಂಡರೊಂದಿಗೆ ಸಂತ ಸಂಗಮವಾಗಲಿದೆ ಎಂದು ಹೇಳಿದರು.
ಶ್ರೀ ರವಿಶಂಕರ್ ಗುರೂಜಿ, ಬಾಬಾ ರಾಮದೇವ, ಪೇಜಾವರ ಶ್ರೀಗಳು, ಸುತ್ತೂರು ಮಠಾಧೀಶರು, ಸ್ವಾಮಿ ನಾರಾಯಣ, ನಾಥ ಸಂಪ್ರದಾಯದ ಆದಿತ್ಯಾನಂದನಾಥ ಸ್ವಾಮಿ, ವಿಶ್ವೇಶಾನಂದ ಸ್ವಾಮೀಜಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಜ.29ರಂದು ಭಕ್ತ ಸಂಗಮ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಜರುಗಲಿದೆ. ರಾಜ್ಯ ಮತ್ತು ರಾಷ್ಟ್ರದ ಧೀಮಂತ ನಾಯಕರು, ಕೇಂದ್ರ ಮಂತ್ರಿಗಳು, ರಾಜ್ಯದ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳು, ಸಾಹಿತಿಗಳು, ಕಲಾವಿದರು ಪುಣ್ಯ ಸ್ಮರಣೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಶ್ರೀಗಳು ತಿಳಿಸಿದರು.
ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಮಾತನಾಡಿ, ಶ್ರೀಗಳ ಪುಣ್ಯಾರಾಧನಾ ಮಹೋತ್ಸವದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪಾಲ್ಗೊಳ್ಳುವ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಎರಡು - ಮೂರು ದಿನಗಳಲ್ಲಿ ಯಾವ್ಯಾವ ಗಣ್ಯರು ಆಗಮಿಸುತ್ತಾರೆ ಎಂಬ ನಿಖರ ಮಾಹಿತಿ ದೊರಕಲಿದೆ ಎಂದರು.
ದೇಶ-ವಿದೇಶಗಳಲ್ಲಿ ಶ್ರೀಗಳು ಸಹಸ್ರಾರು ಭಕ್ತರನ್ನು ಹೊಂದಿದ್ದಾರೆ. ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಈ ಮಹೋತ್ಸವದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಹಾಗಾಗಿ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸುವ ಕುರಿತಂತೆ ಸಾರಿಗೆ ಸಚಿವರು ಸ್ಪಷ್ಟ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಸ್ವಾಮಿನಾಥ ಸ್ವಾಮೀಜಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments